More

    ಹಾಸನ ಅಶ್ಲೀಲ ವಿಡಿಯೋ ಕೇಸ್​: ಸಂತ್ರಸ್ತರಿಗೆ ರಕ್ಷಣೆ ಕೋರಿ ರಾಹುಲ್​ ಗಾಂಧಿ ಬರೆದ ಪತ್ರಕ್ಕೆ ಸಿಎಂ ಉತ್ತರ ಹೀಗಿತ್ತು…

    ಬೆಂಗಳೂರು: ಹಾಸನ ಪೆನ್​ಡ್ರೈವ್​ ಪ್ರಕರಣದ ಸಂತ್ರಸ್ತರಿಗೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಕೋರಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಬರೆದ ಪತ್ರಕ್ಕೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಅತ್ಯಾಚಾರ, ಅನ್ಯಾಯಕ್ಕೆ ಒಳಗಾದ ಸಂತ್ರಸ್ತರ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದಿದ್ದಾರೆ.

    ಈ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸಿ, ಇದರಲ್ಲಿ ಎಷ್ಟೇ ಪ್ರಭಾವಿಗಳು ಶಾಮೀಲಾಗಿದ್ದರೂ ಅವರನ್ನು ಕಾನೂನಿನ ಕೈಗಳಿಗೆ ಒಪ್ಪಿಸಲಾಗುವುದು. ನೊಂದವರ ಕಣ್ಣೀರು ಒರೆಸುವ ಜೊತೆಗೆ ಅವರ ನ್ಯಾಯದ ಹೋರಾಟದಲ್ಲಿ ನಮ್ಮ ಸರ್ಕಾರ ಜೊತೆ ನಿಲ್ಲಲಿದೆ ಎಂಬ ವಾಗ್ದಾನವನ್ನು ರಾಹುಲ್​ ಗಾಂಧಿ ಸೇರಿದಂತೆ ನಾಡಿನ ಪ್ರತಿಯೊಬ್ಬರಿಗೂ ನೀಡುತ್ತಿದ್ದೇನೆ ಎಂದಿರುವ ಸಿದ್ದರಾಮಯ್ಯ ಸತ್ಯಮೇವ ಜಯತೇ ಎಂಬ ಘೋಷಣೆ ಜತೆಗೆ ರಾಹುಲ್​ ಗಾಂಧಿ ಅವರು ಬರೆದ ಪತ್ರವನ್ನು ಎಕ್ಸ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

    ರಾಹುಲ್​ ಗಾಂಧಿ ಬರೆದ ಪತ್ರದಲ್ಲೇನಿದೆ?
    ಮುಖ್ಯಮಂತ್ರಿ ಸಿದ್ದರಾಮಯ್ಯರವರೇ ಹಾಸನದ ಹಾಲಿ ಸಂಸದರು ನಡೆಸಿದ ಭೀಕರ ಲೈಂಗಿಕ ದೌರ್ಜನ್ಯದ ಬಗ್ಗೆ ನಾನು ನಿಮಗೆ ಪತ್ರ ಬರೆಯುತ್ತಿದ್ದೇನೆ. ಪ್ರಜ್ವಲ್​ ರೇವಣ್ಣ ಹಲವಾರು ವರ್ಷಗಳಿಂದ ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಚಿತ್ರೀಕರಿಸಿದ್ದರು. ಪ್ರಜ್ವಲ್​ರನ್ನು ಸಹೋದರ ಮತ್ತು ಮಗನಂತೆ ನೋಡುತ್ತಿದ್ದ ಅನೇಕರನ್ನು ಅತ್ಯಂತ ಹಿಂಸಾತ್ಮಕ ರೀತಿಯಲ್ಲಿ ಕ್ರೂರವಾಗಿ ನಡೆಸಿಕೊಳ್ಳಲಾಗಿದೆ ಮತ್ತು ಅವರ ಘನತೆಯನ್ನು ಕಸಿದುಕೊಳ್ಳಲಾಗಿದೆ. ನಮ್ಮ ತಾಯಂದಿರು ಮತ್ತು ಸಹೋದರಿಯರ ಮೇಲಿನ ಅತ್ಯಾಚಾರವು ಕಠಿಣ ಶಿಕ್ಷೆಗೆ ಅನುಮತಿಸುತ್ತದೆ.

    2023ರ ಡಿಸೆಂಬರ್​ನಲ್ಲೇ ಗೃಹ ಸಚಿವರಾದ ಅಮಿತ್ ಶಾ ಅವರಿಗೆ ಪ್ರಜ್ವಲ್ ರೇವಣ್ಣರ ಲೈಂಗಿಕ ದೌರ್ಜನ್ಯದ ಬಗ್ಗೆ ಜಿ.ದೇವರಾಜೇಗೌಡರು ತಿಳಿಸಿದ್ದರು ಎಂಬುದನ್ನು ತಿಳಿದು ನನಗೆ ಆಘಾತವಾಗಿದೆ. ಇನ್ನೂ ಆಘಾತಕಾರಿ ಸಂಗತಿಯೆಂದರೆ, ಈ ಗಂಭೀರ ಆರೋಪಗಳನ್ನು ಬಿಜೆಪಿಯ ಹಿರಿಯ ನಾಯಕತ್ವದ ಗಮನಕ್ಕೆ ತಂದರೂ, ಸಾಮೂಹಿಕ ಅತ್ಯಾಚಾರಿಗಾಗಿ ಪ್ರಧಾನಿ ಮೋದಿ ಪ್ರಚಾರ ಮಾಡಿದರು. ಇದಲ್ಲದೆ, ತನಿಖೆಯ ಹಳಿತಪ್ಪಿಸಲು, ಭಾರತದಿಂದ ಪಲಾಯನ ಮಾಡಲು ಕೇಂದ್ರ ಸರ್ಕಾರವು ಉದ್ದೇಶಪೂರ್ವಕವಾಗಿ ಪ್ರಜ್ವಲ್​ ರೇವಣ್ಣರಿಗೆ ಅವಕಾಶ ನೀಡಿತು. ಪ್ರಧಾನ ಮಂತ್ರಿ ಮತ್ತು ಗೃಹ ಸಚಿವರ ಆಶೀರ್ವಾದದೊಂದಿಗೆ ಪ್ರಜ್ವಲ್ ರೇವಣ್ಣ ಅವರು ಅನುಭವಿಸಿದ ಸಂಪೂರ್ಣ ನಿರ್ಭಯವು ಪ್ರಬಲವಾದ ಖಂಡನೆಗೆ ಅರ್ಹವಾಗಿದೆ.

    ನನ್ನ ಎರಡು ದಶಕಗಳ ಸಾರ್ವಜನಿಕ ಜೀವನದಲ್ಲಿ, ಮಹಿಳೆಯರ ಮೇಲೆ ಹೇಳಲಾಗದಂತಹ ದೌರ್ಜನ್ಯದ ವಿರುದ್ಧ ನಿರಂತರವಾಗಿ ಮೌನವಹಿಸಿದ ಹಿರಿಯ ಸಾರ್ವಜನಿಕ ಪ್ರತಿನಿಧಿಯನ್ನು ನಾನು ಕಂಡಿಲ್ಲ. ಹರಿಯಾಣದ ನಮ್ಮ ಕುಸ್ತಿಪಟುಗಳಿಂದ ಹಿಡಿದು ಮಣಿಪುರದ ನಮ್ಮ ಸಹೋದರಿಯರವರೆಗೂ ಭಾರತೀಯ ಮಹಿಳೆಯರು ಇಂತಹ ಅಪರಾಧಿಗಳ ಮೇಲೆ ಪ್ರಧಾನಿಯ ಮೌನ ಬೆಂಬಲದ ಭಾರವನ್ನು ಹೊತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ತಾಯಂದಿರ ಮತ್ತು ಸಹೋದರಿಯರ ನ್ಯಾಯಕ್ಕಾಗಿ ಹೋರಾಡುವುದು ಕಾಂಗ್ರೆಸ್ ಪಕ್ಷದ ನೈತಿಕ ಕರ್ತವ್ಯವಾಗಿದೆ. ಗಂಭೀರ ಆರೋಪಗಳ ತನಿಖೆಗಾಗಿ ಕರ್ನಾಟಕ ಸರ್ಕಾರವು ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ ಮತ್ತು ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ಅನ್ನು ರದ್ದುಪಡಿಸಿ ಅವರನ್ನು ಶೀಘ್ರವಾಗಿ ಭಾರತಕ್ಕೆ ಹಸ್ತಾಂತರಿಸುವಂತೆ ಪ್ರಧಾನಿಗೆ ಮನವಿ ಮಾಡಲಾಗಿದೆ. ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ಬೆಂಬಲವನ್ನು ದಯೆಯಿಂದ ನೀಡುವಂತೆ ನಾನು ವಿನಂತಿಸುತ್ತೇನೆ. ನ್ಯಾಯಕ್ಕಾಗಿ ತಮ್ಮ ಹೋರಾಟದಲ್ಲಿ ಅವರು ನಮ್ಮ ಸಹಾನುಭೂತಿ ಮತ್ತು ಒಗ್ಗಟ್ಟಿಗೆ ಅರ್ಹರು. ಈ ಘೋರ ಅಪರಾಧಗಳಿಗೆ ಕಾರಣವಾದ ಎಲ್ಲ ವ್ಯಕ್ತಿಗಳನ್ನು ಕಾನೂನು ಕ್ರಮಕ್ಕೆ ತರುವುದನ್ನು ಖಚಿತಪಡಿಸಿಕೊಳ್ಳಲು ನಾವು ಸಾಮೂಹಿಕ ಕರ್ತವ್ಯವನ್ನು ಮಾಡಬೇಕಿದೆ ಎಂದು ರಾಹುಲ್​ ಗಾಂಧಿ ಪತ್ರದಲ್ಲಿ ಹೇಳಿದ್ದಾರೆ.

    ಏನಿದು ಪ್ರಕರಣ?
    ಅಂದಹಾಗೆ ಜೆಡಿಎಸ್​ ಪಕ್ಷದ ವರಿಷ್ಠ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರು ಹಾಸನ ಕ್ಷೇತ್ರದ ಸಂಸದರಾಗಿದ್ದಾರೆ. ಸದ್ಯ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಹಾಸನ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಏಪ್ರಿಲ್​ 26ರಂದು ಮತದಾನವೂ ನಡೆದಿದೆ. ಇದರ ನಡುವೆ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ಸಹ ಹೊರಬಂದಿವೆ. ಈ ಪ್ರಕರಣ ಇದೀಗ ದೇಶಾದ್ಯಂತ ಭಾರಿ ಸಂಚಲನ ಉಂಟು ಮಾಡಿದೆ. ಮಹಿಳೆರಿಗೆ ಬೆದರಿಕೆ, ಲೈಂಗಿಕ ಕಿರುಕುಳ ಹಾಗೂ ಅಶ್ಲೀಲ ವಿಡಿಯೋ ಮಾಡಿರುವ ಆರೋಪದ ಮೇಲೆ ಪ್ರಜ್ವಲ್​ ರೇವಣ್ಣ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಜ್ವಲ್​ ರೇವಣ್ಣ ತಂದೆ ಹಾಗೂ ಮಾಜಿ ಸಚಿವ ಎಚ್​.ಡಿ. ರೇವಣ್ಣ ವಿರುದ್ಧವೂ ಆರೋಪ ಕೇಳಿಬಂದಿದ್ದು, ಅವರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಎಸ್​ಐಟಿಗೆ ವಹಿಸಿದೆ. ಇದರ ನಡುವೆ ಪ್ರಜ್ವಲ್ ಅವರು ಜರ್ಮನಿಗೆ ಪರಾರಿಯಾಗಿದ್ದು, ಇನ್ನೊಂದು ವಾರದಲ್ಲಿ ವಾಪಸ್​ ಬರಲಿದ್ದಾರೆ ಎಂದು ತಿಳಿದುಬಂದಿದೆ.

    ಅರುಂಧತಿ ಚಿತ್ರದ ಬಾಲನಟಿ ಈಗ ಬೋಲ್ಡ್​ ಬ್ಯೂಟಿ! ಸ್ಟಾರ್​ ನಟಿಯರಿಗೂ ಕಮ್ಮಿ ಇಲ್ಲ ದಿವ್ಯಾ

    ಪ್ರೇಮಾ ಜತೆಗಿರುವ ಈ ವ್ಯಕ್ತಿ ಯಾರು? ಸ್ಯಾಂಡಲ್​ವುಡ್​ನಲ್ಲಿ ನಡೆಯುತ್ತಿದೆ ಹೀಗೊಂದು ಬಿಸಿ ಬಿಸಿ ಚರ್ಚೆ!

    ಭಾವಿ ಪತ್ನಿ ವೇಶ್ಯೆಯ ಪಾತ್ರದಲ್ಲಿ ನಟಿಸಿರುವ ವೆಬ್​ ಸರಣಿ ಬಗ್ಗೆ ನಟ ಸಿದ್ಧಾರ್ಥ್​ ಆಡಿರುವ ಮಾತುಗಳು ವೈರಲ್!​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts