More

    ಹಾರ್ಸಿಕಟ್ಟಾದಲ್ಲಿ ಬೀದಿ ದೀಪ ಕಳ್ಳರ ಪಾಲು

    ಸಿದ್ದಾಪುರ: ಸಾರ್ವಜನಿಕರಿಗೆ ಅನುಕೂಲವಾಗಲೆಂದು ಗ್ರಾಮೀಣ ಪ್ರದೇಶದಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಆಡಳಿತ ಸೋಲಾರ್ ಬೀದಿ ದೀಪಗಳನ್ನು ಅಳವಡಿಸಿದೆ. ಆದರೆ, ಅದಕ್ಕೆ ಜೋಡಿಸಿದ್ದ ಬ್ಯಾಟರಿ ಹಾಗೂ ಪ್ಯಾನಲ್​ಗಳು ಕಳ್ಳರ ಪಾಲಾಗುತ್ತಿವೆ.

    ತಾಲೂಕಿನ ಕೆಲ ಗ್ರಾಪಂಗಳು ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಬೀದಿ ದೀಪದ ಬದಲಾಗಿ ಸೋಲಾರ್ ಬೀದಿ ದೀಪಗಳನ್ನು ಅಳವಡಿಸಿ ಸಂಜೆಯಿಂದ ಬೆಳಗಿನವರೆಗೆ ನಿರಂತರವಾಗಿ ಬೆಳಕಿನ ವ್ಯವಸ್ಥೆ ಮಾಡಿವೆ. ಒಂದೊಂದು ಗ್ರಾಪಂಗಳು ಐದಾರು ಕಡೆಗಳಲ್ಲಿ ಸೋಲಾರ್ ಬೀದಿ ದೀಪ ಅಳವಡಿಸಿವೆ. ಒಂದು ಕಂಬದಲ್ಲಿ ಬ್ಯಾಟರಿ, ಪ್ಯಾನಲ್ ಮತ್ತು ದೀಪ ಸೇರಿ 12 ಸಾವಿರ ರೂ.ಗಳಿಂದ 25 ಸಾವಿರ ರೂ.ಗಳವರೆಗೆ ಇದೆ.

    ಗ್ರಾಮೀಣ ಭಾಗದ ಬಸ್ ನಿಲ್ದಾಣ, ಮುಖ್ಯ ರಸ್ತೆಗಳ ಬದಿ ಅಳವಡಿಸಿರುವ ಸೋಲಾರ್ ದೀಪದ ಮೇಲೆ ಕಣ್ಣು ಹಾಕಿದ ಕಿಡಿಗೇಡಿಗಳು ಕಂಬದ ಮೇಲ್ಭಾಗದಲ್ಲಿ ಅಳವಡಿಸಿದ ಪ್ಯಾನಲ್ ಹಾಗೂ ಕೈಗೆಟುಕುವಷ್ಟು ಎತ್ತರದಲ್ಲಿ ಕಂಬಕ್ಕೆ ಅಳವಡಿಸಿದ ಬ್ಯಾಟರಿಗಳನ್ನು ಕದ್ದೊಯ್ದಿದ್ದಾರೆ.

    ಸಂಜೆ ವೇಳೆ ಹಾಲು ಸಂಘಗಳಿಗೆ, ಅಂಗಡಿಗಳಿಗೆ ಹೋಗಿ ಬರುವವರು, ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಬಸ್​ನಿಂದ ಇಳಿದ ತಕ್ಷಣ ಯಾವ ಕಡೆಗೆ ಹೋಗಬೇಕು ಎಂದು ತೋಚದ ಸ್ಥಿತಿ ಉಂಟಾಗಿದೆ ಎಂದು ಗ್ರಾಮೀಣ ಭಾಗದ ಜನತೆ ತಮ್ಮ ಳಲು ತೋಡಿಕೊಂಡಿದ್ದಾರೆ.

    ಸೋಲಾರ್ ಬೀದಿ ದೀಪ ಅಳವಡಿಸಿದ್ದರಿಂದ ಬೆಳಕಿನ ಸಮಸ್ಯೆ ಇಲ್ಲವಾಗಿತ್ತು. ಆದರೆ, ಈಗ ಸೋಲಾರ್ ಬೀದಿ ದೀಪಕ್ಕೆ ಅಳವಡಿಸಿದ ಉಪಕರಣಗಳಿಗೆ ಕಳ್ಳರು ಕೈ ಹಾಕಿದ್ದಾರೆ. ಕಳ್ಳರನ್ನು ಹಿಡಿದು ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಹಾರ್ಸಿಕಟ್ಟಾ ಗ್ರಾಪಂನ ಕೋಣೆಗದ್ದೆ, ಅರಶಿನಗೋಡ, ದೇವಾಸ, ತೆಂಗಿನಮನೆ ಊರಿನ ಗ್ರಾಮಸ್ಥರ ಒತ್ತಾಯವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts