More

    ಹಳ್ಳಿಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ

    ತಿ.ನರಸೀಪುರ : ಕೆರೆಗಳ ಅಭಿವೃದ್ಧಿಯೊಂದಿಗೆ ಹಳ್ಳಿಗಳ ಏಳಿಗೆಗೆ ಹೆಚ್ಚಿನ ಸೇವೆ ಸಲ್ಲಿಸುತ್ತೇನೆ ಎಂದು ಎಂಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಬಿ.ಎನ್.ಸದಾನಂದ ಹೇಳಿದರು.
    ಅಳಗಂಚಿ ಗ್ರಾಮದಲ್ಲಿ 20 ವರ್ಷಗಳ ನಂತರ ಗ್ರಾಮಸ್ಥರ ವಂತಿಕೆ ಹಾಗೂ ಸದಾನಂದ ಅವರ ವೈಯಕ್ತಿಕ ದೇಣಿಗೆ 5.50 ಲಕ್ಷ ರೂ. ವಿನಿಯೋಗಿಸಿ ಜೀರ್ಣೋದ್ಧಾರಗೊಳಿಸಿದ ಹಣೆಗೆರೆ ಕೆರೆಗೆ ಸೋಮವಾರ ಬಾಗಿನ ಅರ್ಪಿಸಿ ಅವರು ಮಾತನಾಡಿದರು.
    ಹಣೆಗೆರೆ ಕೆರೆ ಜೀರ್ಣೋದ್ಧಾರಕ್ಕೆ ಸರ್ಕಾರದ ನೆರವು ಸಿಗಲಿಲ್ಲ. ಹಾಗಾಗಿ ಗ್ರಾಮಸ್ಥರೊಂದಿಗೆ ಸೇರಿ ಈ ಭಾಗದ ಜನರ ಹಲವು ವರ್ಷಗಳ ಬೇಡಿಕೆ ಈಡೇರಿಸಿದ್ದು ಹೆಮ್ಮೆ ಮೂಡಿಸಿದೆ ಎಂದರು.
    ನಾಲೆ ಸಂಪರ್ಕವಿಲ್ಲದ ಈ ಕೆರೆ ಅಭಿವೃದ್ಧಿಪಡಿಸಿ ನೀರು ತುಂಬಿಸುವಂತೆ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಮತ್ತು ಹಿಂದಿನ ಸಂಸದ ಆರ್.ಧ್ರುವನಾರಾಯಣ ಅವರಿಗೆ ಮನವಿ ಸಲ್ಲಿಸಿದರೂ ಫಲಕಾರಿ ಆಗಲಿಲ್ಲ. ನೀರಾವರಿ ನಿಗಮದ ಅಧಿಕಾರಿಗಳೂ ಕೈ ಚೆಲ್ಲಿದರು. ಕೆರೆ ಜೀರ್ಣೋದ್ಧಾರ ಆಗಲೇಬೇಕೆಂದು ಗ್ರಾಮಸ್ಥರು ಪಟ್ಟು ಹಿಡಿದು 1 ಲಕ್ಷ ರೂ. ವಂತಿಗೆ ಸಂಗ್ರಹಿಸಿಬಿಟ್ಟರು. ಮಹಿಳೆಯೊಬ್ಬರು ತಿಂಗಳ ವಿಧವಾ ವೇತನವನ್ನೇ ಸಮರ್ಪಿಸಿದರು. ಉಳಿದ ನಿಧಿಯನ್ನು ನಾನೇ ನೀಡಿದ್ದು ಸಾರ್ಥಕತೆ ಮೂಡಿಸಿದೆ ಎಂದರು. ಅಧಿಕಾರ ಇರಲಿ, ಇಲ್ಲದಿರಲಿ, ಪ್ರಾಮಾಣಿಕ ಸೇವೆಗೆ ನನ್ನ ಆದ್ಯತೆ ಇರುತ್ತದೆ ಎಂದು ಸದಾನಂದ ಹೇಳಿದರು.
    ವರುಣ ಕ್ಷೇತ್ರದ ಬಿಜೆಪಿ ಮಾಜಿ ಅಧ್ಯಕ್ಷ ಎ.ಎನ್.ಶಿವಯ್ಯ ಮಾತನಾಡಿ, ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದಾಗಲೇ ಹಣೆಗೆರೆ ಕೆರೆ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿತ್ತು. ಆದರೆ, ಜೀರ್ಣೋದ್ಧಾರಕ್ಕೆ ಸದಾನಂದ ಅವರು ಬೆಂಬಲಿಸಿದ್ದರಿಂದ ಗ್ರಾಮಸ್ಥರಿಗೆ ವರವಾಯಿತು ಎಂದರು.
    ದೇವನೂರು ದಾಸೋಹ ಮಠದ ಶ್ರೀ ಮಹಾಂತಪ್ಪ ಸ್ವಾಮೀಜಿ, ನಾಡಗೌಡರಾದ ಮಾರಪ್ಪ, ಚಂದ್ರಪ್ಪ, ಮಾಜಿ ಅಧ್ಯಕ್ಷ ಅಂಕಪ್ಪ, ಮುಖಂಡರಾದ ರಾಜಪ್ಪ, ಪುಟ್ಟನಂಜಪ್ಪ, ಎಸ್.ಚಿನ್ನಸ್ವಾಮಿ, ರಾಜೇಂದ್ರ, ಕೃಷ್ಣಮೂರ್ತಿ ಇತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts