More

    ಹತ್ತು ಸಾವಿರ ಜನರು ಗೋವಾದಿಂದ ಮರಳಲು ತಯಾರಿ

    ಕಾರವಾರ: ಗೋವಾದಲ್ಲಿ ಉದ್ಯೋಗದಲ್ಲಿರುವ ರಾಜ್ಯದ 8 ರಿಂದ 10 ಸಾವಿರ ಜನರು ತವರಿಗೆ ಮರಳಲು ಸಜ್ಜಾಗಿದ್ದಾರೆ.

    ಅವರ ಆರೋಗ್ಯ ಪರೀಕ್ಷೆ ನಡೆಸಿ ಸ್ವ ಗ್ರಾಮಗಳಿಗೆ ತಲುಪಿಸುವ ಜವಾಬ್ದಾರಿಯನ್ನು ಉತ್ತರ ಕನ್ನಡ ಹಾಗೂ ಬೆಳಗಾವಿ ಜಿಲ್ಲಾಡಳಿತಕ್ಕೆ ವಹಿಸಲಾಗಿದೆ. ಜಿಲ್ಲೆಯ ಹಿಂದಿನ ಎಸ್​ಪಿ ವಿನಾಯಕ ಪಾಟೀಲ ಅವರನ್ನು ಈ ಕಾರ್ಯಕ್ಕೆ ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ.

    ಉತ್ತರ ಕರ್ನಾಟಕ ಭಾಗಗಳಿಗೆ ತೆರಳುವವರು ಜೊಯಿಡಾ ಅನಮೋಡ ಚೆಕ್ ಪೋಸ್ಟ್ ಮೂಲಕ ತೆರಳುತ್ತಿದ್ದಾರೆ. ಅಲ್ಲಿನ ಆರೋಗ್ಯ ಪರೀಕ್ಷೆ ಜವಾಬ್ದಾರಿಯನ್ನು ಬೆಳಗಾವಿ ಜಿಲ್ಲಾಡಳಿತ ವಹಿಸಿಕೊಂಡಿದೆ. ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಕರ್ನಾಟಕದ ಜಿಲ್ಲೆಗಳಿಗೆ ತೆರಳುವವರನ್ನು ಕಾರವಾರ ಮೂಲಕ ಬರಮಾಡಿಕೊಳ್ಳಲಾಗುತ್ತಿದೆ.

    ಕಾರವಾರ ಮಾಜಾಳಿ ತನಿಖಾ ಠಾಣೆಯಲ್ಲಿ ಇದಕ್ಕಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಗೋವಾದಿಂದ ಬಂದ ಪ್ರತಿಯೊಬ್ಬರ ಮೊಬೈಲ್​ಫೋನ್ ಸಂಖ್ಯೆ, ವಿಳಾಸ ಮುಂತಾದ ವಿವರ ಪಡೆದು ಆರೋಗ್ಯ ಪರೀಕ್ಷೆ ಮಾಡಲಾಗುತ್ತಿದೆ. ನಂತರ ಕೆಎಸ್​ಆರ್​ಟಿಸಿ ಬಸ್​ಗಳಲ್ಲಿ ಊರಿಗೆ ಕಳಿಸಿಕೊಡುವ ವ್ಯವಸ್ಥೆ ಮಾಡಲಾಗುತ್ತಿದೆ. ಶೆಡ್, ಊಟದ ವ್ಯವಸ್ಥೆಯನ್ನೂ ಮಾಡಲಾಗಿದೆ. ಉಪವಿಭಾಗಾಧಿಕಾರಿ ಪ್ರಿಯಾಂಗಾ ಎಂ. ಹಾಗೂ ನಗರಸಭೆ ಇಇ ಆರ್.ಪಿ.ನಾಯ್ಕ ನೇತೃತ್ವದ ನಿಯೋಗ ಇದರ ಜವಾಬ್ದಾರಿ ವಹಿಸುತ್ತಿದೆ.

    ‘ಗೋವಾ ಆಡಳಿತದ ಜತೆ ನಾವು ಸಂಪರ್ಕದಲ್ಲಿದ್ದು, ಹಂತ ಹಂತವಾಗಿ ಅಲ್ಲಿಂದ ಜನರನ್ನು ಕಳಿಸುವಂತೆ ವಿನಂತಿಸಲಾಗಿದೆ. ಯಾವುದೇ ಜನದಟ್ಟಣೆ, ಗದ್ದಲ ಆಗದಂತೆ ವ್ಯವಸ್ಥೆ ನಿಯಂತ್ರಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ತಿಳಿಸಿದ್ದಾರೆ.

    ಪೇಯ್್ಡ ಕ್ವಾರಂಟೈನ್: ಗೋವಾಕ್ಕೆ ತೆರಳಿದ ಕಾರ್ವಿುಕರು ನೇರವಾಗಿ ಉದ್ಯೋಗ ಸ್ಥಳಕ್ಕೆ ತೆರಳುವಂತಿಲ್ಲ. ಆಡಳಿತ ಸೂಚಿಸಿದ ಹೋಟೆಲ್​ಗಳಲ್ಲಿ 14 ದಿನ ಕ್ವಾರಂಟೈನ್​ನಲ್ಲಿ ಇರಬೇಕು ಎಂಬುದು ಗೋವಾ ನಿಯಮ. ಇನ್ನು, ಹೊರ ರಾಜ್ಯದವರು ಕಡ್ಡಾಯವಾಗಿ ಕರೊನಾ ಪರೀಕ್ಷೆ ಮಾಡಿಸಬೇಕಿದ್ದು, ಅದರ ವೆಚ್ಚವನ್ನೂ ಅವರೇ ಪಾವತಿಸಬೇಕಿದೆ. ಕ್ವಾರಂಟೈನ್​ಗಾಗಿ ಪ್ರತಿ ದಿನಕ್ಕೆ 2500 ರೂ. ಪಾವತಿಸಬೇಕು ಎಂದು ಸೂಚಿಸಿದೆ. ಅಂದರೆ, 35 ಸಾವಿರ ರೂ.ಗಳನ್ನು ಪಾವತಿಸಬೇಕಿದೆ. ಮಾಸಿಕ 15 ರಿಂದ 25 ಸಾವಿರ ರೂ. ವೇತನಕ್ಕೆ ದುಡಿಯುತ್ತಿರುವ ಕಾರ್ವಿುಕರು ಈ ನಿಯಮದಿಂದ ಕಂಗಾಲಾಗಿದ್ದಾರೆ.

    ಕೆಲಸ ಕಳೆದುಕೊಳ್ಳುವ ಭೀತಿ: ಗೋವಾದ ವೆರ್ನಾ, ವಾಸ್ಕೊ ಸೇರಿ ವಿವಿಧೆಡೆ ಖಾಸಗಿ ಕಂಪನಿಗಳಲ್ಲಿ ಉದ್ಯೋಗದಲ್ಲಿರುವ ಕಾರವಾರದ ಸಾಕಷ್ಟು ಕಾರ್ವಿುಕರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಗೋವಾದಲ್ಲಿ ಈಗಾಗಲೇ ಸಾಕಷ್ಟು ಕಂಪನಿಗಳು ಕಾರ್ಯಾರಂಭ ಮಾಡಿದ್ದು, ಉದ್ಯೋಗಿಗಳಿಗೆ ಕೆಲಸಕ್ಕೆ ಹಾಜರಾಗುವಂತೆ ಸೂಚನೆ ನೀಡಿವೆ. ಹೊರ ರಾಜ್ಯದ ಉದ್ಯೋಗಿಗಳನ್ನು ಕರೆಸಿಕೊಳ್ಳುವುದಾಗಿ ಗೋವಾ ಸಿಎಂ ಪ್ರಮೋದ ಸಾವಂತ ಸುದ್ದಿಗೋಷ್ಠಿ ನಡೆಸಿ ತಿಳಿಸಿದ್ದಾರೆ. ಆದರೆ, ಅದಕ್ಕೆ ಸಾಕಷ್ಟು ನಿಬಂಧನೆಗಳನ್ನು ಹಾಕಿರುವುದರಿಂದ ಕಾರವಾರದ ಉದ್ಯೋಗಿಗಳಿಗೆ ಸಮಸ್ಯೆಯಾಗಿದೆ. ಕಾರವಾರದಿಂದ ಸಾವಿರಕ್ಕೂ ಅಧಿಕ ಜನರು ರೈಲಿನಲ್ಲಿ ಪ್ರತಿದಿನ ಗೋವಾಕ್ಕೆ ಹೋಗಿ ಬರುತ್ತಿದ್ದರು. ಈಗ ಅವರಿಗೆ ಹೋಗಿ ಬರಲು ವಾಹನ ವ್ಯವಸ್ಥೆ ಇಲ್ಲ. ಪಕ್ಕದ ರಾಜ್ಯವಾಗಿದ್ದರಿಂದ ಓಡಾಟಕ್ಕೆ ಅನುಮತಿಯೂ ಇಲ್ಲ. ಇನ್ನು ಹಲವರು ಅಲ್ಲಿ ಬಾಡಿಗೆ ಮನೆ, ಕೊಠಡಿ ಹೊಂದಿದ್ದಾರೆ. ಅಲ್ಲಿ ಉಳಿದುಕೊಂಡು ಉದ್ಯೋಗಕ್ಕೆ ತೆರಳಲು ಸಿದ್ಧರಿದ್ದಾರೆ. ಆದರೆ, ಅದಕ್ಕೆ ಗೋವಾ ಸರ್ಕಾರ ಅನುಮತಿಸುತ್ತಿಲ್ಲ. ಗೋವಾಕ್ಕೆ ಉದ್ಯೋಗಕ್ಕೆ ಮರಳುವವರಿಗೆ ಆನ್​ಲೈನ್ ಮೂಲಕ ನೋಂದಣಿಯನ್ನು ಗೋವಾ ಸರ್ಕಾರ ಆರಂಭಿಸಿದೆ. ಗೋವಾದಲ್ಲಿ ವಸತಿಯ ದಾಖಲೆ ಹೊಂದಿದವರಿಗೆ ಮಾತ್ರ ರಾಜ್ಯ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ. ಕಾರವಾರ ಮೂಲದವರ ಅರ್ಜಿಗಳು ತಿರಸ್ಕೃತವಾಗುತ್ತಿವೆ. ಒಂದೆಡೆ ಕೆಲಸಕ್ಕೆ ಹಾಜರಾಗುವಂತೆ ಕಂಪನಿಗಳ ಒತ್ತಡ, ಇನ್ನೊಂದೆಡೆ ಪ್ರವೇಶಕ್ಕೆ ಅವಕಾಶ ಸಿಗದ ಗೊಂದಲದಲ್ಲಿ ನೌಕರರಿದ್ದಾರೆ.

    ಗೋವಾದವರು ಕಾರ್ವಿುಕರನ್ನು ಉದ್ಯೋಗಕ್ಕೆ ಆಹ್ವಾನಿಸಿದ ಬಗ್ಗೆ ಲಿಖಿತ ದಾಖಲೆ ಇದ್ದಲ್ಲಿ ಅಲ್ಲಿನ ಅಧಿಕಾರಿಗಳಿಗೆ ಪತ್ರ ಬರೆದು, ಉದ್ಯೋಗಿಗಳನ್ನು ಕಳಿಸಿಕೊಡುವ ವ್ಯವಸ್ಥೆ ಮಾಡಲಾಗುವುದು.
    | ಡಾ.ಹರೀಶ ಕುಮಾರ ಕೆ. ಜಿಲ್ಲಾಧಿಕಾರಿ, ಉತ್ತರ ಕನ್ನಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts