More

    ಹತ್ತಿ ಬಿಡಿಸುತ್ತಿದ್ದಾರೆ ಮಕ್ಕಳು!

    ಎಂ.ಎಸ್. ಹಿರೇಮಠ ಸಂಶಿ

    ಕೇಂದ್ರ ಸರ್ಕಾರ ಕರೊನಾ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್​ಡೌನ್ ಘೊಷಿಸಿದ ಕಾರಣ ರೈತರು ತಾವು ಬೆಳೆದ ಬೆಳೆಗಳನ್ನು ಕಟಾವು ಮಾಡಲು ಮತ್ತು ಮಾರುಕಟ್ಟೆಗೆ ಸಾಗಿಸಲು ಸಾಧ್ಯವಾಗದೆ ತೊಂದರೆ ಅನುಭವಿಸುತ್ತಿದ್ದಾರೆ.

    ಗ್ರಾಮದಲ್ಲಿ ಹತ್ತಿ ಬಿಡಿಸಲು ಕೂಲಿಕಾರರ ಕೊರತೆಯಿಂದಾಗಿ ಕೆಲ ಕೃಷಿಕರು ತಮ್ಮ ಮನೆಯಲ್ಲಿನ ಮಕ್ಕಳನ್ನು ಹೊಲಕ್ಕೆ ಕರೆದುಕೊಂಡು ಹೋಗುವ ಪರಿಸ್ಥಿತಿ ಬಂದಿದೆ. ರೈತರ ಕೃಷಿ ಚಟುವಟಿಕೆಗಳಿಗೆ ನಿರ್ಬಂಧ ಹೇರದಂತೆ ಸರ್ಕಾರವೇನೊ ಆದೇಶ ಹೊರಡಿಸಿದೆ. ಜತೆಗೆ, ಕರೊನಾದಿಂದ ತಪ್ಪಿಸಿಕೊಳ್ಳಲು ಯಾರೂ ಹೊರಬರದಂತೆ ಖಡಕ್ ಸೂಚನೆ ಕೊಟ್ಟಿದೆ. ಹೀಗಾಗಿ, ಕೂಲಿ ಕಾರ್ವಿುಕರ ಕೊರತೆಯಿಂದಾಗಿ ರೈತರು ಪರಿತಪಿಸುವಂತಾಗಿದೆ.

    ಸಂಶಿ ಹಾಗೂ ಸುತ್ತಲಿನ ಹಳ್ಳಿಗಳಲ್ಲಿ ಹತ್ತಿ, ಕುಸುಬಿ, ಕಡಲೆ, ಜೋಳ ಮತ್ತು ಗೋಧಿಯನ್ನು ರೈತರು ಬೆಳೆದಿದ್ದಾರೆ. ಎಲ್ಲೆಡೆ ಲಾಕ್​ಡೌನ್ ಇರುವುದರಿಂದ ಉತ್ತಮ ಬೆಲೆ ಇದ್ದ ಬೆಳೆಗಳು ಕೂಡ ಈಗ ಬೆಲೆ ಕುಸಿತ ಕಂಡು ಬಂದಿದೆ. ಕಳೆದ ಡಿಸೆಂಬರ್- ಜನವರಿಯಲ್ಲಿ ಮೊದಲನೇ ಬೀಡಿನ ಹತ್ತಿ ಕ್ವಿಂಟಾಲ್​ಗೆ 5,100 ರಿಂದ 5,300 ರೂ.ವರೆಗೆ ಮಾರಾಟವಾಗಿತ್ತು. ಆದರೀಗ ಹತ್ತಿ ದರ ಕ್ವಿಂಟಾಲ್​ಗೆ 3600 ರೂ.ಗೆ ಬಂದಿದೆ.

    ಹಳ್ಳಿಗಳಲ್ಲಿ ಕೃಷಿ ಕೆಲಸಕ್ಕೆ ಕಾರ್ವಿುಕರು ಸಿಗುತ್ತಿಲ್ಲ. ಒಂದೊಮ್ಮೆ ಸಿಕ್ಕರೂ ಈಗ ಹತ್ತಿ ಬಿಡಿಸುವ ಕೆಲಸಕ್ಕೆ ತೂಕದ ಲೆಕ್ಕದಲ್ಲಿಯಾದರೆ ಪ್ರತಿ ಕೆ.ಜಿ. ಗೆ 10 ರೂ. ಮತ್ತು ದಿನದ ಕೂಲಿಯಾದರೆ 200-250 ರೂ. ಎನ್ನುತ್ತಿದ್ದಾರೆ. ಕೆಲ ದಿನಗಳವರೆಗೆ ದೇಶಾದ್ಯಂತ ನಿಷೇಧಾಜ್ಞೆ ಜಾರಿ ಇರುವುದರಿಂದ ರೈತರ ಸಂಕಷ್ಟಗಳಿಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸ್ಪಂದಿಸಬೇಕು ಎಂಬುದು ಅನ್ನದಾತರ ಮನವಿ.

    ಕರೊನಾ ಭೀತಿಯಿಂದ ಆರೋಗ್ಯ ಕಾಪಾಡಿಕೊಳ್ಳುವ ಸಲುವಾಗಿ ಸರ್ಕಾರ ಲಾಕ್​ಡೌನ್ ಘೊಷಿಸಿ ಕೃಷಿ ಕಾರ್ಯಗಳಿಗೆ ವಿನಾಯಿತಿ ನೀಡಿದೆ. ಸರ್ಕಾರದ ಕಟ್ಟುನಿಟ್ಟಿನ ಸೂಚನೆಯಿಂದ ಅನೇಕರು ಹೊರಬರದೆ ಮನೆಯಲ್ಲಿದ್ದಾರೆ. ಸಹಜವಾಗಿಯೇ ಕಾರ್ವಿುಕರ ಕೊರತೆ ಎದುರಾಗಿದೆ. ಆದ್ದರಿಂದ ಬಂದಿರುವ ಫಸಲು ಪಡೆಯಲು ಮಕ್ಕಳು ಸೇರಿ ನಮ್ಮ ಕುಟುಂಬ ಸದಸ್ಯರು ಹತ್ತಿ ಬಿಡಿಸುವ ಕೆಲಸದಲ್ಲಿ ತೊಡಗಿದ್ದೇವೆ.
    ಗುರುಪಾದಪ್ಪ ಬಂಕದ ಉಪಾಧ್ಯಕ್ಷ ಬೆಳೆ ರಕ್ಷಕ ರೈತ ಸಂಘ ಸಂಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts