More

    ಸ್ವಾಮಿತ್ವ ಸರ್ವೇ ಯೋಜನೆಗೆ ಚಾಲನೆ

    ಕಲಬುರಗಿ: ಗ್ರಾಮೀಣ ಭಾಗದ ಖಾಸಗಿ, ಸರ್ಕಾರಿ ಹಾಗೂ ಸರ್ಕಾರಿ ಸ್ವಾಮ್ಯದ ಆಸ್ತಿಗಳನ್ನು ಡ್ರೋನ್ ಕ್ಯಾಮೆರಾ ಮೂಲಕ ಸೆರೆ ಹಿಡಿದು ಸರ್ವೇ ಮಾಡಿ ನಿವೇಶನ-ಕಟ್ಟಡಗಳನ್ನು ಗುರುತಿಸಿ ಸಂಬಂಧಿಸಿದವರಿಗೆ ಹಕ್ಕು ಪತ್ರ ನೀಡುವ ಹಾಗೂ ಆಸ್ತಿ ಮಾಲೀಕತ್ವದ ದಾಖಲೆಗಳ ಲೋಪದೋಷ ಸರಿಪಡಿಸುವ ಕೇಂದ್ರ ಸರ್ಕಾರದ ಸ್ವಾಮಿತ್ವ ಸರ್ವೇ ಯೋಜನೆಗೆ ಜಿಲ್ಲೆಯಲ್ಲಿ ಚಾಲನೆ ನೀಡಲಾಗಿದೆ ಎಂದು ಭೂಮಾಪನ ಇಲಾಖೆಯ ಕಲಬುರಗಿ ಉಪನಿರ್ದೇಶಕ ಶಂಕರ್ ತಿಳಿಸಿದ್ದಾರೆ.
    ಸರ್ವೇ ಕಾರ್ಯ ಭರದಿಂದ ಸಾಗಿದೆ. ಕೇಂದ್ರ ಸರ್ಕಾರ ಏಪ್ರಿಲ್ 24 ಪಂಚಾಯತ್ ರಾಜ್ ದಿನದಂದು ಈ ಯೋಜನೆಗೆ ಚಾಲನೆ ನೀಡಿದೆ. ರಾಜ್ಯದ 16 ಜಿಲ್ಲೆಗಳನ್ನು ಆಯ್ಕೆ ಮಾಡಿ 16600 ಗ್ರಾಮಗಳಲ್ಲಿ ಸರ್ವೆ ಕಾರ್ಯ ನಡೆಯುತ್ತಿದ್ದು, ಅದರಲ್ಲಿ ಕಲಬುರಗಿ ಜಿಲ್ಲೆಯೂ ಒಂದು ಎಂದು ಅವರು ತಿಳಿಸಿದ್ದಾರೆ.
    ಜಿಲ್ಲೆಯ 263 ಗ್ರಾಮ ಪಂಚಾಯಿತಿಗಳ 922 ಕಂದಾಯ ಗ್ರಾಮಗಳಲ್ಲಿ ಸರ್ವೇ ಕಾರ್ಯ ನಡೆಸಲು ಅಧಿಸೂಚನೆ ಹೊರಡಿಸಲಾಗಿದೆ. 481 ತಾಂಡಾಗಳು ಮತ್ತು 10 ಕ್ಕಿಂತ ಹೆಚ್ಚಿನ ಮನೆ, ವಸತಿ ಹೊಂದಿರುವ ಪ್ರದೇಶಗಳಲ್ಲಿಯೂ ಸರ್ವೇ ಕಾರ್ಯ ನಡೆಸಲಾಗುತ್ತಿದೆ.
    ಗ್ರಾಮೀಣ ಭಾಗದ ಮನೆ, ನಿವೇಶನ, ಗಡಿ ಸೇರಿ ಗ್ರಾಮದ ಸಂಪೂರ್ಣ ಆಸ್ತಿಯನ್ನು ನಿಖರವಾಗಿ ದಾಖಲಿಸುವುದು, ಆಸ್ತಿಗಳ ದಾಖಲೆಯ ಲೋಪದೋಷಗಳಿದಲ್ಲಿ ಸರಿಪಡಿಸಿ ಮಾಲೀಕರಿಗೆ ಹಕ್ಕು ಪತ್ರ ವಿತರಿಸಿ ಗ್ರಾಮೀಣ ಭಾಗದ ಜನರ ಸಂಕಟ ದೂರ ಮಾಡುವ ಉದ್ದೇಶ ಈ ಯೋಜನೆಯದ್ದಾಗಿದೆ.
    ಸರ್ವೇ ಕಾರ್ಯ ಹೇಗೆ
    ಆಸ್ತಿ ಸರ್ವೇ ಕಾರ್ಯವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಭೂಮಾಪನ ಇಲಾಖೆ ಹಾಗೂ ಭಾರತೀಯ ಸರ್ವೇಕ್ಷಣ ಸಂಸ್ಥೆ ಜಂಟಿಯಾಗಿ ನಡೆಸುತ್ತದೆ. ಆರಂಭಿಕವಾಗಿ ಭೂಮಾಪನ ಇಲಾಖೆಯ ಅಧಿಕಾರಿ-ಸಿಬ್ಬಂದಿ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕರ ವಸೂಲಿಗಾರರು, ವಾಟರ್ಮೆನ್, ಗ್ರೂಪ್ ಡಿ ಸಿಬ್ಬಂದಿ ಗ್ರಾಮದಾದ್ಯಂತ ಸಂಚರಿಸಿ ಗ್ರಾಮದ ಆಸ್ತಿ ಮತ್ತು ಗ್ರಾಮಠಾಣಾ ಆಸ್ತಿಗಳನ್ನು ಬಿಳಿ ಬಣ್ಣದಿಂದ ಗುರುತು ಮಾಡಿ ಕೈ ನಕ್ಷೆ ರೂಪಿಸುತ್ತಾರೆ. ಮಾರ್ಕ್​ ಮಾಡಲಾದ ಆಸ್ತಿಗಳನ್ನು ಭಾರತೀಯ ಸರ್ವೇಕ್ಷಣ ಸಂಸ್ಥೆಯು ಡ್ರೋಣ್ ಕ್ಯಾಮೆರಾ ಮೂಲಕ ಸೆರೆ ಹಿಡಿದು ಸರ್ವೇ ಕಾರ್ಯ ಕೈಗೊಳ್ಳುತ್ತದೆ. ಡ್ರೋಣ್ ಸರ್ವೇ ನಂತರ ಆಸ್ತಿ ಮಾಲೀಕರಿಗೆ ಇಲಾಖೆಯಿಂದ ಸರಿಯಾದ ದಾಖಲೆ ಪತ್ರ ವಿತರಿಸಿ ಗ್ರಾಮ ಪಂಚಾಯಿತಿಗಳ ಆಸ್ತಿ ದಾಖಲೆಗಳ ನೋಂದಣಿಯಲ್ಲಿ ಸರಿಪಡಿಸಲಾಗುತ್ತದೆ.
    ಪ್ರಾಪರ್ಟಿ ಕಾರ್ಡ ವಿತರಣೆ
    ಡ್ರೋಣ್ ಸರ್ವೇ ನಂತರ ಸರ್ವೇ ಇಲಾಖೆಯಿಂದ ಆಸ್ತಿದಾರರಿಗೆ ಡ್ರಾಫ್ಟ್ ಪ್ರಾಪರ್ಟಿ ಕಾರ್ಡ್​ ನೀಡಲಾಗುತ್ತದೆ. ಈ ಕಾರ್ಡ್​ನಲ್ಲಿ ಆಸ್ತಿ ಹಕ್ಕಿನ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಸಾರ್ವಜನಿಕರು ವಿಚಾರಣಾಧಿಕಾರಿ ಆಗಿರುವ ಸಹಾಯಕ ಭೂಮಾಪನ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ವಿಚಾರಣಾಧಿಕಾರಿಗಳು ದಾಖಲೆ ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಂಡ ನಂತರ ಅಂತಿಮವಾಗಿ ಪಿ.ಐ.ಡಿ. ಸಂಖ್ಯೆವುಳ್ಳ ಪ್ರಾಪರ್ಟಿ ಕಾರ್ಡ್​ ಆಸ್ತಿದಾರರಿಗೆ ವಿತರಿಸಲಾಗುತ್ತದೆ. ಪ್ರತಿ ಗ್ರಾಮದಲ್ಲಿ 3-4 ದಿನದಲ್ಲಿ ಸರ್ವೇ ಕಾರ್ಯ ಮುಗಿಯಲಿದೆ.
    ಯೋಜನೆಯ ಲಾಭ: ಗ್ರಾಮೀಣ ಭಾಗದಲ್ಲಿ ಆಸ್ತಿ ಹೊಂದಿದ್ದರೂ ಮೌಲ್ಯೀಕರಣ ಹಾಗೂ ಸೂಕ್ತ ದಾಖಲೆಗಳಿಲ್ಲದೆ ಚಿಂತೆ ಮಾಡುವ ಗ್ರಾಮೀಣ ಭಾಗದ ಜನರ ಸಂಕಷ್ಟಕ್ಕೆ ಕೊನೇ ಹಾಡಿ ಹಕ್ಕು ಪತ್ರ ವಿತರಿಸುವ ಮೂಲಕ ಆಸ್ತಿಯ ನೈಜ ವಿಸ್ತೀರ್ಣ, ಮಾಲೀಕತ್ವ ದೃಢಪಡಿಸುವುದೇ ಯೋಜನೆಯ ಲಾಭವಾಗಿದೆ.

    ಗ್ರಾಮೀಣ ಪರಿಸರದಲ್ಲಿ ಆಸ್ತಿಗಳ ನಿಖರ ಮಾಹಿತಿ ಲಭ್ಯವಾಗಿ ಸ್ಥಳೀಯ ಸಂಸ್ಥೆಗಳ ತೆರಿಗೆ ಸಂಗ್ರಹಗೊಂಡು ಗ್ರಾಮೀಣಾಭಿವೃದ್ಧಿ ಮತ್ತು ಗ್ರಾಮೀಣ ಜನರ ಆರ್ಥಿಕ ಸಬಲೀಕರಣಕ್ಕೆ ಯೋಜನೆ ವರದಾನವಾಗಲಿದೆ.
    ಶಂಕರ, ಉಪನಿರ್ದೇಶಕ,
    ಭೂಮಾಪನ ಇಲಾಖೆ, ಕಲಬುರಗಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts