More

    ಲಿಂಗಾಯತ ದ್ವೇಷಿಗಳಿಗೆ ತಕ್ಕ ಪಾಠ

    ಕಲಬುರಗಿ: ವೀರಶೈವ ಲಿಂಗಾಯತ ಸಮಾಜ ಕೆಣಕಿದ್ದಕ್ಕೆ ಕೆಲವೇ ದಿನಗಳಲ್ಲಿ ತಕ್ಕಪಾಠ ಕಲಿಸುತ್ತೇವೆ. ಜಿಲ್ಲೆಯಲ್ಲಿ ನಡೆದಿರುವ ದೌರ್ಜನ್ಯಕ್ಕೆ ಉತ್ತರ ನೀಡುವ ದಿನಗಳು ದೂರವಿಲ್ಲ. ಸುಮ್ಮನಿದ್ದರೆ ಉಳಿಗಾಲವಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ವೀರಶೈವ ಲಿಂಗಾಯತ ಸ್ವಾಭಿಮಾನಿ ಸಮಾವೇಶ ಸಾರಿತು.

    ವೀರಶೈವ ಲಿಂಗಾಯತರ ಮೇಲಿನ ದೌರ್ಜನ್ಯ, ಕೋಟನೂರದಲ್ಲಿ ಲಿಂಗಾಯತರ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದನ್ನು ನಗರದ ಶ್ರೀ ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ವೀರಶೈವ ಲಿಂಗಾಯತ ಸಮಾಜದ ಸ್ವಾಭಿಮಾನಿಗಳ ಸಮಾವೇಶದಲ್ಲಿ ಸುಮಾರು ೩೦ ಸಾವಿರ ಜನರು ಭಾಗವಹಿಸಿ ಸಮುದಾಯದ ಶಕ್ತಿ ಪ್ರದರ್ಶನ ಜತೆಗೆ ತಂಟೆಗೆ ಬಂದರೆ ಹುಷಾರ್ ಎಂಬ ಎಚ್ಚರಿಕೆ ನೀಡಿದರು.

    ವೀರಶೈವ ಸಮಾಜ ಜಿಲ್ಲಾಧ್ಯಕ್ಷ ಅರುಣಕುಮಾರ ಪಾಟೀಲ್ ಪ್ರಾಸ್ತಾವಿಕ ಮಾತನಾಡಿ, ಜಿಲ್ಲೆಯಲ್ಲಿ ವೀರಶೈವ ಲಿಂಗಾಯತರ ಮೇಲೆ ಪದೇಪದೆ ಹಲ್ಲೆ ನಡೆಯುತ್ತಿದ್ದು, ತಡೆಗಟ್ಟಲು ಕಾನೂನಿನ ಚೌಕಟ್ಟಿನಲ್ಲಿ ಅವಕಾಶ ನೀಡಬೇಕು. ಈ ಸಮಾವೇಶ ಅಂತ್ಯವಲ್ಲ, ಆರಂಭವಷ್ಟೆ ಎಂದು ಗುಡುಗಿದರು.
    ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಮಾತನಾಡಿ, ಲಿಂಗಾಯತ ಸಮಾಜದ ವಿರುದ್ಧದ ದ್ವೇಷವನ್ನು ಯಾರೂ ಸಹಿಸಬಾರದು. ಹಿಂದೆಯೂ ಇಂತಹ ಘಟನೆಗಳು ನಡೆದಿದ್ದು, ಮರೆಯದೆ ಒಗ್ಗಟ್ಟಾಗಿ ಪಕ್ಷಭೇದ ಬಿಟ್ಟು ಹೋರಾಡಬೇಕು ಎಂದರು.

    ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಮಾತನಾಡಿ, ಲಿಂಗಾಯತರ ಮೇಲೆ ಹಲ್ಲೆ ವಿಷಯದಲ್ಲಿ ರಾಜಕೀಯ ಮಾಡಲ್ಲ. ಆದರೆ ಇದರಿಂದ ಎಲ್ಲರೂ ಎಚ್ಚೆತ್ತುಕೊಂಡಿದ್ದೇವೆ. ಪೊಲೀಸರು ರಕ್ಷಣೆ ಕೊಡುವ ಬದಲು ಓಡಿಹೋಗಿ ಎನ್ನುತ್ತಾರೆ ಎಂದರೆ ಸರ್ಕಾರಕ್ಕೆ ನಾಚಿಕೆ ಆಗಬೇಕು ಎಂದು ಕಿಡಿಕಾರಿದರು.
    ಕಡಗಂಚಿಯ ಶ್ರೀ ವೀರಭದ್ರ ಶಿವಾಚಾರ್ಯ, ಆಂದೋಲಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿದರು. ಶ್ರೀ ಸೋಮಶೇಖರ ಶಿವಾಚಾರ್ಯ, ಶ್ರೀ ಅಪ್ಪಾರಾವ ದೇವಿ ಮುತ್ಯಾ, ಶ್ರೀ ರೇವಣಸಿದ್ಧ ಶಿವಾಚಾರ್ಯ, ಶ್ರೀ ಗುರುಲಿಂಗ ಶಿವಾಚಾರ್ಯ, ಶ್ರೀ ರಾಜಶೇಖರ ಶಿವಾಚಾರ್ಯ, ಶ್ರೀ ಕೆಂಚಬಸವ ಶಿವಾಚಾರ್ಯ, ಶ್ರೀ ಸಂಗನಬಸವ ಶಿವಾಚಾರ್ಯ, ಶ್ರೀ ಶ್ರೀಕಂಠ ಶಿವಾಚಾರ್ಯ ಸಾನ್ನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಡಾ.ಬಿ.ಜಿ. ಪಾಟೀಲ್, ಪ್ರಮುಖರಾದ ಶರಣು ಪಪ್ಪಾ, ಶಿವಕಾಂತ ಮಹಾಜನ್, ವಿಕ್ರಮ ಪಾಟೀಲ್, ಶಶಿಕಾಂತ ಪಾಟೀಲ್, ಶ್ರೀಮಂತ ಉದನೂರ, ಕಲ್ಯಾಣರಾವ ಪಾಟೀಲ್ ಮಳಖೇಡ, ದಯಾನಂದ ಪಾಟೀಲ್, ಶಿವಾನಂದ ಪಿಸ್ತಿ, ಶ್ರೀಮಂತ ನವಲದಿ, ವಿನೋದ ಪಾಟೀಲ್ ಸರಡಗಿ, ಶಶಿಕಲಾ ಟೆಂಗಳಿ, ಡಾ.ಸುಧಾ ಹಾಲಕಾಯಿ, ಮಾಲಾ ಕಣ್ಣಿ, ಸಿದ್ದಣ್ಣಗೌಡ ಪಾಟೀಲ್, ಸತೀಶ ಮಾಹೂರ, ರಾಜು ಭವಾನಿ ಇತರರಿದ್ದರು. ಶರಣು ಪಾಟೀಲ್ ನಿರೂಪಣೆ ಮಾಡಿದರು.

    ದಾಳಿ, ಹಲ್ಲೆ ಸಹಿಸದೆ ಪ್ರತ್ಯುತ್ತರ ನೀಡಿ: ಅಂಬೇಡ್ಕರ್‌ಗೆ ಅವಮಾನ ಖಂಡಿಸಿದ್ದೇವೆ. ಅಪರಾಧಿಗಳಿಗೆ ಸಂವಿಧಾನದ ಪ್ರಕಾರ ಬೇಲ್ ಸಿಕ್ಕಿತು. ಆದರೆ ಕುಟುಂಬದವರ ಮೇಲೆ ಹಲ್ಲೆ ಆಯಿತು. ಪೊಲೀಸರು ಅಡ್ಜಸ್ಟ್ಮೆಂಟ್ ಮಾಡಿಕೊಂಡರು. ಕೋಟನೂರದಲ್ಲಿ ಅಕ್ಕಪಕ್ಕದವರು ಬರದಿದ್ದರೆ ೧೦ ಹೆಣಗಳು ಬೀಳುತ್ತಿದ್ದವು. ಸಮಾಜದ ಮೇಲೆ ಹಲ್ಲೆಗೆ ಆ ಕ್ಷಣಕ್ಕೆ ಮುಟ್ಟಿ ನೋಡಿಕೊಳ್ಳುವಂತಹ ಪ್ರತ್ಯುತ್ತರ ನೀಡಿ. ಇಡೀ ಲಿಂಗಾಯತ ಸಮಾಜ ನಿಮ್ಮೆ ಜತೆಗಿದೆ. ಸಿಲ್ಲಿ ಮ್ಯಾಟರ್ ಎನ್ನುವವರಿಗೆ ಸಮಾಜದ ಶಕ್ತಿ ಏನು ಎಂಬುದನ್ನು ಈ ಸಮಾವೇಶ ತೋರಿಸಿದೆ. ವೀರಶೈವ ಲಿಂಗಾಯತ ನಿಗಮ, ಮಠಗಳ ಅಭಿವೃದ್ಧಿಗೆ ಅನುದಾನ ಸೇರಿ ಅವಕಾಶ ಕೊಟ್ಟಿದ್ದು ಬಿಜೆಪಿ. ಇನ್ಮುಂದೆ ಸಮಾಜದ ಮೇಲೆ ದೌರ್ಜನ್ಯ ನಡೆದರೆ ಸುಮ್ಮನಿರಲ್ಲ. ಯಾರ ಮೇಲೆ ದಾಳಿಯಾದರೂ ಸಹಸ್ರ ಸಂಖ್ಯೆಯಲ್ಲಿ ಬರುತ್ತೇವೆ ಹುಷಾರ್ ಎಂದು ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್ ಎಚ್ಚರಿಸಿದರು.

    ಕಾಂಗ್ರೆಸ್‌ನವರು ಸಮಾವೇಶದಲ್ಲಿ ಮನೆಗೆ ನುಗ್ಗಿ ನಮ್ಮ ಸಮಾಜದ ಸಹೋದರಿಯರ ಮೇಲೆ ಹಲ್ಲೆ ಮಾಡಿದ್ದನ್ನು ಸಿಲ್ಲಿ ಮ್ಯಾಟರ್ ಅಂತಾರೆ. ಬಾಂಬ್ ಹಾಕಿ ಹೆಣ ಬಿದ್ದರೆ ಸೀರಿಯಸ್ ಆಗುತ್ತಿದ್ದರೆ, ಸಮಾಜದ ಒಗ್ಗಟ್ಟು ಸದಾ ಹೀಗೇ ಇರಲಿ. ಈ ಹೆಜ್ಜೆ ವಾಪಸ್ ತೆಗೆದುಕೊಳ್ಳಬಾರದು. ಅನ್ಯಾಯ ಆದರೆ ಶಿಕ್ಷೆ ಆಗಲಿ. ಸುಮ್ಮನೆ ಕೆಣಕಿದರೆ ನಾವೇನು ಬಳೆ ತೊಟ್ಟುಕೊಂಡಿಲ್ಲ.
    | ಚಂದು ಪಾಟೀಲ್ ಜಿಲ್ಲಾಧ್ಯಕ್ಷ, ಮಹಾನಗರ ಬಿಜೆಪಿ

    ಸೆರಗೊಡ್ಡಿ ಬೇಡುವೆ ಗಂಡನ ಉಳಿಸಿಕೊಡಿ: ಕೋಟನೂರ(ಡಿ)ದಲ್ಲಿ ಅಂಬೇಡ್ಕರ್ ಮೂರ್ತಿಗೆ ಅಪಮಾನ ಖಂಡಿಸಿ ನಡೆದಿದ್ದ ಪ್ರತಿಭಟನೆಯಲ್ಲಿ ನನ್ನ ಪತಿ ಸಂಗಮೇಶ ಪಾಟೀಲ್ ಸಹ ಇದ್ದರು. ಆದರೆ ಏಕಾಏಕಿ ಪೊಲೀಸರು ಕರೆದೊಯ್ದರು. ಪೊಲೀಸರೇ ಮನೆ ಬಿಟ್ಟು ಹೋಗಿ ಎಂದು ಠರಾವು ಹೊರಡಿಸಿದರು. ಕುಟುಂಬ ದಿಕ್ಕಾಪಾಲಾಗಿದ್ದು, ನೆಮ್ಮದಿಯಿಂದ ಇರಲು ಬಿಡುತ್ತಿಲ್ಲ. ಅಪಮಾನ ಆಗಿದ್ದಕ್ಕೆ ಒಂದೂ ಸಾಕ್ಷಿ ಇಲ್ಲ. ಸುಳ್ಳು ಕೇಸ್‌ನಿಂದ ಗಂಡನನ್ನು ಪಾರು ಮಾಡಿ ಎಂದು ಪ್ರಿಯಾಂಕಾ ಮಾಲಿಪಾಟೀಲ್ ಸೆರಗೊಡ್ಡಿ ಬೇಡಿಕೊಂಡರು. ಪತಿಯನ್ನು ಹೊಡೆದು ಒಪ್ಪಿಸಿದರು. ಅಪಮಾನಕ್ಕೆ ಒಂದೂ ಸಾಕ್ಷಿ ಇಲ್ಲದಂತೆ ತೊಳೆದು ನಾಶ ಮಾಡಿದ್ದಾರೆ. ನಮ್ಮ ಕೊಲೆಗೆ ಮುಂದಾಗಿದ್ದರು. ಪೊಲೀಸರು, ಎಂಎಲ್‌ಎ ಸ್ಪಂದಿಸಲಿಲ್ಲ. ಸೆರಗೊಡ್ಡಿ ಬೇಡುತ್ತೇನೆ. ಗಂಡನನ್ನು ಉಳಿಸಿಕೊಡಿ. ಸಿಐಡಿ ಬೇಡ ಸಿಬಿಐ ತನಿಖೆಗೆ ಕೊಡಿ. ದಿನೇಶ ದೊಡ್ಡಮನಿ, ಶ್ರೀನಿವಾಸ ದೊಡ್ಡಮನಿ ಎಂಬುವರು ಟಾರ್ಗೆಟ್ ಮಾಡುತ್ತಿದ್ದು, ಅವರನ್ನು ಬಂಧಿಸಿ. ನಮ್ಮ ಸಮಾಜದವರು ಮಾನ, ಮರ್ಯಾದೆಗೆ ಅಂಜಿದ್ದಕ್ಕೆ ಹೀಗೆ ಮಾಡುತ್ತಿದ್ದಾರೆ. ಇದಕ್ಕೆ ತಕ್ಕ ಉತ್ತರ ನೀವೆಲ್ಲ ಜತೆಗೆ ನಿಂತು ನೀಡಿದ್ದೀರಿ ಎಂದು ಹೇಳಿದರು.

    ಅಧಿಕಾರದಲ್ಲಿ ಇದ್ದವರಿಗೆ ಸಮಾಜ ಕಾಣುತ್ತಿಲ್ಲ
    ಕೋಟನೂರ ಒಂದೇ ಘಟನೆಯಲ್ಲ, ಹಳ್ಳಿ ಹಳ್ಳಿಯಲ್ಲಿ ಇಂಥ ಸ್ಥಿತಿ ಇದೆ. ಪಕ್ಷಾತೀತವಾಗಿ ಸಮಾಜದ ನೋವುಗಳ ಬಗ್ಗೆ ಒಂದಾಗಿ ಹೋರಾಡೋಣ ಎಂದು ಕೆಕೆಆರ್‌ಡಿಬಿ ಮಾಜಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ ಕರೆ ನೀಡಿದರು. ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಆಗಿದೆ. ಸಂಘಟಿತರಾಗಿದ್ದರೆ ಪುನಃ ಇಂತಹ ಘಟನೆ ಮರುಕಳಿಸಲ್ಲ. ಅಧಿಕಾರದಲ್ಲಿ ಇರುವವರಿಗೆ ಚುನಾವಣೆ ಬಿಟ್ಟರೆ ಬೇರೇನೂ ಕಾಣಿಸುತ್ತಿಲ್ಲ. ಆದರೆ ದಲಿತ ಸಮಾಜದವರಾದ ಡಾ.ಉಮೇಶ ಜಾಧವ್ ಬೆಂಬಲಕ್ಕೆ ನಿಂತರು. ಯಡಿಯೂರಪ್ಪ ಸಿಎಂ ಆಗಲು ಮೊದಲು ರಾಜೀನಾಮೆ ನೀಡಿದ್ದೇ ಜಾಧವ್. ನಮ್ಮ ಸ್ವಾರ್ಥ ಬಿಟ್ಟು ಸಮಾಜಕ್ಕಾಗಿ ಒಂದಾಗೋಣ. ಧೈರ್ಯ, ಶಕ್ತಿ ಪ್ರದರ್ಶನ ಮಾಡಿದಾಗಲೇ ಉಳಿಯುತ್ತೇವೆ ಎಂದು ಗುಡುಗಿದರು.

    ಕೆಆರ್‌ಜಿಗಳಿಗೆ ಉತ್ತರ ನೀಡಲು ಸಕಾಲ: ಆಲ್ ಇಟಾಲಿಯನ್ ಕಾಂಗ್ರೆಸ್ ಪಾರ್ಟಿಯವರು ವೀರಶೈವ ಲಿಂಗಾಯತ ಸಮಾವೇಶ ಮಾಡುತ್ತಾರೆ. ಜಿಲ್ಲೆಯಲ್ಲೊಬ್ಬ ಹಮಾಲಿ ಮಾಡುವ ಮೋದಿ ಇದ್ದು, ಆತ ಏರ್ಪಡಿಸಿದ್ದ ಸಮಾವೇಶದಲ್ಲಿ ಸಿಲ್ಲಿ ಘಟನೆ ಎಂದು ಜರಿಯುತ್ತಾರೆ. ಅದೇ ಜೂನಿಯರ್, ಸೀನಿಯರ್ ಕೆಆರ್‌ಜಿಗಳ ಬಗ್ಗೆ ಮಣಿಕಂಠ ಮಾತಾಡಿದ್ರೆ ಕೊಲೆ ಎಂದು ದಂಗಲ್ ಎಬ್ಬಿಸುತ್ತಾರೆ. ಕೋಟನೂರದ ಸಹೋದರಿ ಪ್ರಿಯಾಂಕಾ ಕಣ್ಣೀರು ರಕ್ತವಾಗಿದ್ದು, ಈ ಎಲ್ಲ ಘಟನೆಗಳ ಹಿಂದೆ ಇರುವವರಿಗೆ ತಕ್ಕ ಉತ್ತರ ನೀಡಲು ಇದು ಸಕಾಲ ಎಂದು ಶ್ರೀ ಸಿದ್ಧಲಿಂಗ ಸ್ವಾಮೀಜಿ ಎಚ್ಚರಿಕೆ ನೀಡಿದರು. ಕಳ್ಳರನ್ನು ಕಳ್ಳರಾಗಿಯೇ ನೋಡದೆ ಪರಿವರ್ತಿಸುವುದು ಬಸವಣ್ಣನವರ ಸಂದೇಶ. ಕೆಆರ್‌ಜಿಗಳು ವೀರಶೈವರ ಮತಭಿಕ್ಷೆಯಿಂದ ಮೆರೆಯುತ್ತಿದ್ದಾರೆ. ಒಬ್ಬ ಕೆಆರ್‌ಜಿ ಪಂಚಾಯಿತಿ ಸಚಿವನಾದರೆ ಓಡಾಡಲೂ ಆಗುತ್ತಿಲ್ಲ. ಇನ್ನು ಪ್ರಧಾನಿಯಾದರೆ ನಮ್ಮ ದೇಶದ ಗತಿ ಏನು ಯೋಚಿಸಿ ಎಂದು ಪರೋಕ್ಷವಾಗಿ ಖರ್ಗೆ ಕುಟುಂಬದ ವಿರುದ್ಧ ಹರಿಹಾಯ್ದರು.

    ಕೆಆರ್‌ಜಿಗಳ ಮನೆಯಲ್ಲಿ ಸ್ವಾಮೀಜಿಗಳು ಹೋದರೆ ನಿಲ್ಲಿಸಿಯೇ ಮಾತನಾಡಿ ಹೊರಕಳಿಸುತ್ತಾರೆ. ೨೦೨೪ರ ಚುನಾವಣೆಯಲ್ಲಿ ಪಾಠ ಕಲಿಸಬೇಕು. ೫೦ ವರ್ಷದಿಂದ ಮಾವನ ವ್ಯವಹಾರಗಳ ಡೀಲ್ ಮಾಡಿದ ವ್ಯಕ್ತಿಗೆ ಬೆಂಬಲ ಬೇಡ. ಬಸವತತ್ವ ಪಾಲಿಸುವ ಮೋದಿಗೆ ಸಾಥ್ ನೀಡೋಣ.
    | ಶ್ರೀ ಸಿದ್ಧಲಿಂಗ ಸ್ವಾಮೀಜಿ ಆಂದೋಲಾ

    ಕಲಬುರಗಿಯಲ್ಲಿ ಲಿಂಗಾಯತರು, ಲಿಂಗಾಯತ ಅಧಿಕಾರಿಗಳ ಮೇಲೆ ದೌರ್ಜನ್ಯ ಮೀತಿ ಮೀರುತ್ತಿದೆ. ಹೀಗೆ ಮುಂದುವರಿದರೆ ಭಾರಿ ಪರಿಣಾಮ ಬೀರಲಿದೆ. ಸಮಾಜದವರು, ಸ್ವಾಮೀಜಿಗಳು, ಜನಪ್ರತಿನಿಧಿಗಳು ಎಲ್ಲರ ಮೇಲೂ ದೌರ್ಜನ್ಯ ನಡೆಯುತ್ತಿದ್ದು, ಸುಮ್ಮನೆ ಕೂಡುವ ಕಾಲ ಈಗಿಲ್ಲ. ಇದರ ಪರಿಣಾಮ ನೆಟ್ಟಗೆ ಇರದಂತೆ ನಾವೆಲ್ಲರೂ ಒಗ್ಗಟ್ಟಾಗಿ ಇರಬೇಕು.
    | ಡಾ.ಬಿ.ಜಿ.ಪಾಟೀಲ್ ವಿಧಾನ ಪರಿಷತ್ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts