More

    ಸ್ವಾತಂತ್ರ್ಯೋತ್ಸವ ಅದ್ದೂರಿ ಆಚರಣೆ

    ಬೆಳಗಾವಿ: ಕೋವಿಡ್ ಕಾರಣದಿಂದ ಎರಡು ವರ್ಷಗಳಿಂದ ಸರಳ ರೀತಿಯಲ್ಲಿ ಸ್ವಾತಂತ್ರೃ ದಿನ ಆಚರಿಸಲಾಗುತ್ತಿತ್ತು. ಈ ಬಾರಿ ಕರೊನಾ ಸೋಂಕು ಇಳಿಮುಖವಾದ ಕಾರಣ ಮೊದಲಿನಂತೆ ಸಡಗರ-ಸಂಭ್ರಮದಿಂದ ಆಚರಣೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದ್ದಾರೆ.

    ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸ್ವಾತಂತ್ರೃ ದಿನಾಚರಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಈ ಬಾರಿ ಅದ್ದೂರಿಯಾಗಿ ಆಚರಿಸಲು ಅನೇಕರು ಒತ್ತಾಯಿಸಿದ್ದಾರೆ. ಮಹಾನಗರ ಪಾಲಿಕೆ ವತಿಯಿಂದ ನಗರದ ಪ್ರಮುಖ ಸ್ಥಳಗಳು, ವೃತ್ತಗಳನ್ನು ಸ್ವಚ್ಛಗೊಳಿಸಿ ದೀಪಾಲಂಕಾರ ಮಾಡುವ ಮೂಲಕ ಸಂಭ್ರಮದ ವಾತಾವರಣ ಮೂಡಿಸಬೇಕು. ಇದೇ ರೀತಿ ಮೈದಾನದಲ್ಲಿ ವೇದಿಕೆ, ಆಸನ, ಅಲ್ಪೋಪಹಾರ ಮತ್ತಿತರ ವ್ಯವಸ್ಥೆ ಮಾಡಬೇಕು ಎಂದರು.

    ಆ.15ರಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಧ್ವಜಾರೋಹಣ ನೆರವೇರಿಸಲಿದ್ದಾರೆ. ಅತಿಥಿಗಳ ಸ್ವಾಗತ, ಧ್ವಜಾರೋಹಣ ವೇದಿಕೆ, ಗಣ್ಯರಿಗೆ ಆಸನ ವ್ಯವಸ್ಥೆ, ಪರೇಡ್ ಸಿದ್ಧತೆ ಸೇರಿದಂತೆ ಎಲ್ಲ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಅನುಕೂಲವಾಗುವಂತೆ ಉಪ ಸಮಿತಿ ರಚಿಸಲಾಗುವುದು ಎಂದರು.

    ಪೊಲೀಸ್, ಸಶಸ್ತ್ರ ಪಡೆ ಸೇರಿಂದತೆ ಈ ಬಾರಿ ಎನ್‌ಸಿಸಿ, ಸ್ಕೌಟ್ಸ್-ಗೈಡ್ಸ್, ಭಾರತ ಸೇವಾದಳ, ಗೃಹರಕ್ಷಕ ದಳ, ವಿದ್ಯಾರ್ಥಿಗಳ ತಂಡ ಸೇರಿದಂತೆ ಒಟ್ಟಾರೆ 16 ತಂಡಗಳು ಪರೇಡ್‌ನಲ್ಲಿ ಭಾಗವಹಿಸಲಿವೆ ಎಂದ ಅವರು, ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಜಿಲ್ಲಾ ಕ್ರೀಡಾಂಗಣಕ್ಕೆ ಆಗಮಿಸಲು ಅಗತ್ಯ ಸಂಚಾರ ವ್ಯವಸ್ಥೆ ಕಲ್ಪಿಸಲು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸಭೆಯಲ್ಲಿ ಸೂಚಿಸಿದರು.

    ಕ್ರೀಡಾಂಗಣದಲ್ಲಿ ವೈದ್ಯಕೀಯ ತಂಡದೊಂದಿಗೆ ಒಂದು ಸುಸಜ್ಜಿತ ಆಂಬ್ಯುಲೆನ್ಸ್ ನಿಯೋಜಿಸಬೇಕು. ಅಮೃತ ಮಹೋತ್ಸವ ಸಂದರ್ಭದಲ್ಲಿ ಸ್ವಾತಂತ್ರ್ಯ ಯೋಧರ ಮನೆಗೆ ತೆರಳಿ ಅವರನ್ನು ಸನ್ಮಾನಿಸಲಾಗುವುದು. ಉಪ ವಿಭಾಗಾಧಿಕಾರಿಗಳು ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು. ಜಿಲ್ಲಾ ಪಂಚಾಯಿತಿ ಸಿಇಒ ದರ್ಶನ ಎಚ್.ವಿ., ಡಿಸಿಪಿ ರವೀಂದ್ರ ಗಡಾದಿ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

    ಪ್ಲ್ಯಾಸ್ಟಿಕ್ ಧ್ವಜ ನಿಷೇಧ

    ಪ್ಲ್ಯಾಸ್ಟಿಕ್ ಧ್ವಜ ಮಾರಾಟ ಹಾಗೂ ಬಳಕೆ ನಿಷೇಧಿಸಲಾಗಿದೆ. ಆದ್ದರಿಂದ ಪ್ಲ್ಯಾಸ್ಟಿಕ್ ಧ್ವಜ ಬಳಕೆ ಮಾಡದಂತೆ ಕ್ರಮ ಕೈಗೊಳ್ಳಲಾಗುವುದು. ಆ.15ರಂದು ಬೆಳಗ್ಗೆ ಎಲ್ಲ ದೇವಾಲಯ, ಮಸೀದಿ, ಚರ್ಚ್ ಸೇರಿದಂತೆ ಇತರೆ ಸ್ಥಳಗಳಲ್ಲಿ ವಿಶೇಷ ಪ್ರಾರ್ಥನೆಗೆ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts