More

    ಸ್ವಸಹಾಯ ಸಂಘದಿಂದ ಹೋಟೆಲ್!

    ಮನು ಬಳಂಜ, ಬೆಳ್ತಂಗಡಿ

    ಈ ಹೋಟೆಲ್‌ನಲ್ಲಿ ಮಹಿಳೆಯರೇ ಸಿಬ್ಬಂದಿ, ಅವರೇ ಮಾಲೀಕರು. ಬೆಳಗ್ಗಿನಿಂದ ಸಾಯಂಕಾಲದವರೆಗೆ ರುಚಿ, ಶುಚಿಯಾದ ತಿಂಡಿ-ತಿನಿಸುಗಳನ್ನು ಗ್ರಾಹಕರಿಗೆ ನೀಡುವ ಮೂಲಕ ಸ್ವಾವಲಂಬನೆಯ ಮಹತ್ವದ ಹೆಜ್ಜೆ ಇರಿಸಲು ಸಾಧ್ಯವಾಗಿರುವುದು ಮಹಿಳಾ ಸ್ವಸಹಾಯ ಸಂಘ.

    ಮಹಿಳಾ ಸ್ವಸಹಾಯ ಸಂಘದ ಸದಸ್ಯರೇ ಸೇರಿ ಆರಂಭಿಸಿದ ಹೋಟೆಲ್ ಒಂದು ವರ್ಷ ಯಶಸ್ವಿಯಾಗಿ ಪೂರೈಸಿದ್ದು, ಎರಡನೇ ವರ್ಷಕ್ಕೆ ಕಾಲಿಟ್ಟಿದೆ. ತಾಲೂಕಿನ ಕಕ್ಕಿಂಜೆ ಪೇಟೆಯ ನೆರಿಯ ರಸ್ತೆಯಲ್ಲಿದೆ ಈ ಪಂಚಶ್ರೀ ಹೋಟೆಲ್.
    2019ರಲ್ಲಿ ಚಾರ್ಮಾಡಿ ಗ್ರಾಮ ಪಂಚಾಯಿತಿಯ ಅಂದಿನ 6 ಪಂಚಾಯಿತಿ ಸದಸ್ಯರು ಹಾಗೂ ನಾಲ್ಕು ಗೃಹಿಣಿಯರು ಸ್ವಾವಲಂಬಿ ಜೀವನದ ಉದ್ದೇಶದಿಂದ ಈ ಹೋಟೆಲ್ ಆರಂಭಿಸಿದ್ದರು. ಈ ಹತ್ತು ಮಹಿಳೆಯರೇ ಒಟ್ಟಾಗಿ ವ್ಯವಸ್ಥಾಪಕ ಹುದ್ದೆಯಿಂದ ಕ್ಲೀನಿಂಗ್ ತನಕದ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿದ್ದು, ಯಾರಿಗೂ ಯಾವ ಹುದ್ದೆಯೂ ಮೀಸಲಿಲ್ಲ. 10 ಮಂದಿ ಸದಸ್ಯರು ಹೋಟೆಲ್‌ನ ಯಾವ ಕೆಲಸವನ್ನು ನಿರ್ವಹಿಸಲೂ ಸಮರ್ಥರು.

    ಪಂಚಾಯಿತಿ ಪ್ರೇರಣೆ: ಶೈಲಜಾ, ವಿನೋದಾ, ಶಾಂಭವತಿ, ದೇವಕಿ, ಆಶಾ, ಕೇಶವತಿ ಈ ಆರು ಮಂದಿ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮದ ಮಹಿಳೆಯರಾದ ಸೌಮ್ಯಾ, ಲತಾ, ಬೇಬಿ, ಶ್ರೀಲತಾ ಸೇರಿ ಪಂಚಾಯಿತಿಯ ಪ್ರೇರಣೆಯಿಂದ ಸಂಜೀವಿನಿ ಪಂಚಶ್ರೀ ಸ್ವಸಹಾಯ ಸಂಘ ಆರಂಭಿಸಿ ಸ್ವಉದ್ಯೋಗದ ಕನಸಿನಲ್ಲಿ ಮುನ್ನಡೆದರು. ಅವರ ಕನಸು ನನಸಾಗಲು ಪಿಡಿಒ ಪ್ರಕಾಶ ಶೆಟ್ಟಿ ನೊಚ್ಚ ಹಾಗೂ ಸಿಬ್ಬಂದಿ ಸಹಕರಿಸಿದ್ದರು. ಈಗ ಈ ಮಹಿಳೆಯರು ಸಮಾಜದ ಇತರ ಮಹಿಳೆಯರಿಗೆ ಮಾದರಿಯಾಗಿದ್ದಾರೆ.
    ಮಿತದರ, ಶುಚಿ- ರುಚಿಯಾದ ತಿಂಡಿ-ಊಟಗಳೊಂದಿಗೆ ಬೆಳಗ್ಗೆ 7ರಿಂದ ಸಂಜೆ 5.30ರ ತನಕ ಮಹಿಳೆಯರ ಮೇಲ್ವಿಚಾರಣೆಯಲ್ಲಿ ಹೋಟೆಲ್ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಯಾರಿಗೂ ಸಂಬಳವಿಲ್ಲ. ಬರುವ ಲಾಭದಲ್ಲಿ ಸ್ವಸಹಾಯ ಸಂಘದಿಂದ ಪಡೆದ ಸಾಲದ ಕಂತು ಕಟ್ಟಿ ಉಳಿದ ಹಣವನ್ನು ಸಮಾನವಾಗಿ ಹಂಚಿಕೊಳ್ಳುತ್ತಾರೆ.

    ಆರಂಭದಿಂದಲೂ ಉತ್ತಮ ವ್ಯವಹಾರದಿಂದ ಮುನ್ನುಗುತ್ತಿದ್ದ ಹೋಟೆಲ್ ವ್ಯವಹಾರಕ್ಕೆ ಕಳೆದ ವರ್ಷ ಕರೊನಾ ಲಾಕ್‌ಡೌನ್ ಒಂದಿಷ್ಟು ಅಡ್ಡಿ ಮಾಡಿತ್ತು. ಲಾಕ್‌ಡೌನ್ ಸಡಿಲಿಕೆ ಬಳಿಕ ಪಾರ್ಸೆಲ್ ಸೇವೆಗಳ ಮೂಲಕ ಪುನರಾರಂಭಗೊಂಡ ಹೋಟೆಲ್ ಈಗ ಹಿಂದಿನಂತೆ ಕಾರ್ಯನಿರ್ವಹಿಸುತ್ತಿದೆ. ಲಾಕ್‌ಡೌನ್‌ನಿಂದಾಗಿ ಸ್ವಸಹಾಯ ಸಂಘದಿಂದ ಉದ್ಯಮಕ್ಕೆ ಪಡೆದ ಸಾಲದ ಕಂತುಗಳನ್ನು ಮರುಪಾವತಿಸಲು ಒಂದಿಷ್ಟು ಸಮಸ್ಯೆ ತಲೆದೋರಿತ್ತು. ಈಗ ಸಮಸ್ಯೆಗಳು ನಿವಾರಣೆಯ ಹಂತವನ್ನು ತಲುಪುತ್ತಿವೆ.

    ಸ್ವಉದ್ಯೋಗವನ್ನು ಕಂಡುಕೊಂಡು ಯಶಸ್ಸಿನಿಂದ ಮುನ್ನುಗ್ಗುತ್ತಿರುವ ಚಾರ್ಮಾಡಿ ಗ್ರಾಪಂ ವ್ಯಾಪ್ತಿಯ ಮಹಿಳೆಯರು ಇತರರಿಗೆ ಆದರ್ಶರಾಗಿದ್ದಾರೆ. ಸ್ವಸಹಾಯ ಸಂಘದಿಂದ ಪಡೆಯಲಾದ ಮೂರು ಲಕ್ಷ ರೂ. ಸಾಲದಲ್ಲಿ ಅರ್ಧಾಂಶಕ್ಕಿಂತ ಹೆಚ್ಚು ಹಣವನ್ನು ಮರುಪಾವತಿ ಮಾಡಲಾಗಿದೆ. ಲಾಕ್‌ಡೌನ್ ಸಮಯ ಹೋಟೆಲ್ ಮುಚ್ಚಿದ ಕಾರಣ ಒಂದಿಷ್ಟು ಏರುಪೇರು ಉಂಟಾಗಿತ್ತು. ಆದರೆ ಈಗ ಸರಿಯಾದ ದಾರಿಯತ್ತ ಸಾಗುತ್ತಿದೆ. ನಮ್ಮ ಉದ್ದಿಮೆಗೆ ಚಾರ್ಮಾಡಿ ಪಂಚಾಯಿತಿ ನೀಡಿದ ಸಹಕಾರ ಅನನ್ಯವಾದುದು.
    – ಶೈಲಜಾ, ಗ್ರಾಪಂ ಮಾಜಿ ಅಧ್ಯಕ್ಷೆ, ಪಂಚಶ್ರೀ ಹೋಟೆಲ್, ಕಕ್ಕಿಂಜೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts