More

    ಸ್ವಚ್ಛ ಭಾರತ ಕಾಗದದಲ್ಲಿ ಉಳಿಯದಿರಲಿ  -ಶಾಸಕ ಕೆ.ಎಸ್. ಬಸವಂತಪ್ಪ -ಜಿಲ್ಲಾಡಳಿತದಿಂದ ಗಾಂಧೀಜಿ- ಶಾಸ್ತ್ರೀಜಿ ಜಯಂತಿ 

    ದಾವಣಗೆರೆ: ಗಾಂಧೀಜಿಯ ಸ್ವಚ್ಛ ಭಾರತದ ಕನಸು, ಕಾಗದ ಪತ್ರ- ಪ್ರಚಾರದಲ್ಲಿ ಉಳಿದಿದೆ. ಆದರೆ ಅದರ ನೈಜ ಅನುಷ್ಠಾನ ಆಗಬೇಕು. ಗ್ರಾಮಾಂತರ ಪ್ರದೇಶಗಳಲ್ಲೂ ಪೌರಕಾರ್ಮಿಕರ ನೇಮಕ ಆಗಬೇಕು ಎಂದು ಎಂದು ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಆಶಿಸಿದರು.
    ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ ಹಾಗೂ ವಾರ್ತಾ-ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಇಲ್ಲಿನ ಗಾಂಧಿ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ, ಮಹಾತ್ಮ ಗಾಂಧಿ ಮತ್ತು ಲಾಲ್ ಬಹಾದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಕೆಲವು ಗ್ರಾಪಂಗಳಲ್ಲಿ ಬಯಲು ಶೌಚವಿದ್ದರೂ ಪ್ರಶಸ್ತಿ ನೀಡಲಾಗುತ್ತಿದೆ. ಕೆಲವೆಡೆ ಶೌಚಗೃಹಗಳು ಗೋದಾಮುಗಳು ಆಗಿವೆ. ಅವನ್ನು ಬಳಕೆ ಮಾಡುವಂತೆ ಜಿಲ್ಲಾಡಳಿತ, ಜಿಪಂ ಇನ್ನಷ್ಟು ಜಾಗೃತಿ ಮೂಡಿಸಬೇಕು. ಗಾಂಧಿ ಭವನದ ಸಮೀಪ ಜಿಲ್ಲೆಯ ಹಿರಿಯ ಅಧಿಕಾರಿಗಳಿಗೆ ನೀಡಲಾಗಿದ್ದ 15 ಎಕರೆ ಪ್ರದೇಶದ ಕ್ವಾಟರ್ಸ್‌ಗಳಲ್ಲಿ ಅಧಿಕಾರಿ-ಸಿಬ್ಬಂದಿ ವಾಸಿಸಿ ಸದ್ಬಳಕೆ ಮಾಡಬೇಕು ಎಂದರು.
    ಸ್ವಚ್ಛತೆ ವಿಚಾರದಲ್ಲಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೀಡುವಷ್ಟೇ ಆದ್ಯತೆ ಗ್ರಾಮಾಂತರ ಪ್ರದೇಶಕ್ಕೂ ನೀಡಬೇಕು. ಪ್ರತಿ ಗ್ರಾಪಂಗೆ ಸರ್ಕಾರ ನೀಡುವ 2-3 ಲಕ್ಷ ರೂ.ಗಳನ್ನು ವಿಭಜಿಸಿ ಪೌರಕಾರ್ಮಿಕರಿಗೆ ನೀಡುವಂತಾಗಬೇಕು ಎಂದು ಸಲಹೆ ನೀಡಿದರು.
    ದಾವಣಗೆರೆಯಲ್ಲಿ ಗಾಂಧೀಜಿ ಬಂದುಹೋಗ ಜಾಗಗಳೆಲ್ಲ ಇಂದು ಕೆಲವರಿಂದಾಗಿ ಅಪವಿತ್ರವಾಗಿವೆ. ಇದನ್ನು ಸರಿಪಡಿಸಬೇಕು. ಪೌರಕಾರ್ಮಿಕರ ರಕ್ತ ಹೀರುವ, ಅವರ ವೇತನವನ್ನು ದರೋಡೆ ಮಾಡುವ ಪ್ರವೃತ್ತಿ ನಡೆದಿದೆ. ಇದನ್ನು ತಡೆಯುವ ಪುಣ್ಯಾತ್ಮ ಯಾವಾಗ ಬರುತ್ತಾನೋ ಗೊತ್ತಿಲ್ಲ ಎಂದೂ ವಿಷಾದಿಸಿದರು.
    ಗಾಂಧೀಜಿ ಶ್ರಮದ ಕಾರಣಕ್ಕಾಗಿ ಇಡೀ ವಿಶ್ವದಲ್ಲಿ ಯಾರಿಗೂ ಸಿಗದ ಮಹಾತ್ಮ ಎಂಬ ಪದವಿ ಬಂದಿದೆ. ಅಹಿಂಸಾ ಮಾರ್ಗದಲ್ಲಿ ದೇಶಕ್ಕೆ ಸ್ವಾತಂತ್ರೃ ನೀಡಿದ ಮಹಾಪುರುಷ ಅವರಾಗಿದ್ದಾರೆ. ದೇಶದ ಪ್ರಧಾನಿಯಾಗಿ ಲಾಲ್ ಬಹಾದೂರ್ ಶಾಸ್ತ್ರಿ ಅವರು ದಕ್ಷ, ಪ್ರಾಮಾಣಿಕ ಸೇವೆ ಸಲ್ಲಿಸಿದರು. ಇಬ್ಬರೂ ಸ್ಮರಣೀಯರು ಎಂದರು.
    ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಮಾತನಾಡಿ ದೇಶದ ಜನರಲ್ಲಿ ಅಹಿಂಸೆ, ಅತ್ಯಾಗ್ರಹ, ಶಾಂತಿ ಮಂತ್ರ ಬಿತ್ತಿ ಎಲ್ಲರ ನರನಾಡಿಯ್ಲೂ ಸ್ವಾತಂತ್ರೃ ಹೋರಾಟದ ಕಿಚ್ಚು ಹಚ್ಚಿದ ಮಹಾತ್ಮ ಗಾಂಧೀಜಿ ಸ್ವಾತಂತ್ರೃ ಸೇನಾನಿ ಮಾತ್ರವಲ್ಲ, ಯುಗ ಪರಿಪರಿವರ್ತಕ. ಅವರು ಹಾಕಿಕೊಟ್ಟ ಸತ್ಯಮಾರ್ಗ ಸೂರ್ಯ-ಚಂದ್ರ ಇರುವವರೆಗೂ ಇರಲಿದೆ ಎಂದರು.
    ಉಪನ್ಯಾಸ ನೀಡಿದ ಹಿರಿಯ ಪತ್ರಕರ್ತ ಜಿ.ಎಸ್.ಉಜ್ಜಿನಪ್ಪ, ಗಾಂಧೀಜಿ ಸತ್ಯ, ಅಹಿಂಸೆಯ ಪ್ರತೀಕ. ಇವೆರಡೂ ಅಸ್ತ್ರದಿಂದಲೇ ದೇಶ ದ ಜನರನ್ನು ಸೆಳೆದರು. ಅವರ ಪುತ್ರ ಹೀರಾಲಾಲ್ ದುರಂತ ನಾಯಕರಾಗಿದ್ದು ವೈರುಧ್ಯವಾಗಿದೆ ಎಂದರು. ಶಾಸ್ತ್ರೀಜಿ ಅವರು ಗೃಹ ಹಾಗೂ ಕೃಷಿ ಸಚಿವರಾಗಿಯೂ ಮಹತ್ವದ ಕಾರ್ಯ ಮಾಡಿದರು. ಸೋಮವಾರ ರಾತ್ರಿ ಊಟ ಮಾಡದಿರುವಂತೆ ನೀಡಿದ್ದ ಕರೆಗೆ ದೇಶವೇ ಸ್ಪಂದಿಸಿತ್ತು ಎಂದು ಸ್ಮರಿಸಿದರು.
    ಅಜಯ್‌ನಾರಾಯಣ ಸಂಗಡಿಗರು ಗಾಂಧೀಜಿ ಕುರಿತ ಹಾಡುಗಳನ್ನು ಹಾಡಿದರು. ಸಿದ್ಧಗಂಗಾ ಶಾಲೆಯ ಎನ್.ಎಸ್.ನಯನಾ, ಕೆ.ಎಂ. ಸಿಂಚನಾ, ಡಿ. ರಿದಾ, ಮುಷ್ಕರಾಖಾನಂ, ಸ್ತುತಿ ಸರ್ವಧರ್ಮ ಗ್ರಂಥ ಪಠಣ ಮಾಡಿದರು. ವಾರ್ತಾ ಇಲಾಖೆಯಿಂದ ಆಯೋಜಿಸಿದ್ದ ಬಾಪೂಜಿ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
    ಮೇಯರ್ ಬಿ.ಎಚ್.ವಿನಾಯಕ, ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ ಜಗದೀಶ್, ಸದಸ್ಯರಾದ ಎ.ನಾಗರಾಜ್, ಪಾಮೇನಹಳ್ಳಿ ನಾಗರಾಜ್, ಜಿಪಂ ಸಿಇಒ ಸುರೇಶ್ ಇಟ್ನಾಳ್, ಎಸ್ಪಿ ಉಮಾ ಪ್ರಶಾಂತ್, ಎಡಿಸಿ ಪಿ.ಎನ್.ಲೋಕೇಶ್ ಇದ್ದರು. ವಾರ್ತಾ ಇಲಾಖೆ ಅಧಿಕಾರಿ ಧನಂಜಯ ಸ್ವಾಗತಿಸಿದರು. ದೇವರಾಜ್-ಶೈಲಜಾ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts