More

    ಸ್ವಂತ ಸೂರಿಲ್ಲದ ಪಟ್ಟಣ ಪಂಚಾಯಿತಿ

    ಎಂ.ಕೆ.ಹುಬ್ಬಳ್ಳಿ: ಗ್ರಾಮ ಪಂಚಾಯಿತಿಗಳೇ ಹೈಟೆಕ್ ಸ್ವರೂಪ ಪಡೆದುಕೊಳ್ಳುತ್ತಿರುವ ಈ ದಿನಗಳಲ್ಲಿ ಎಂ.ಕೆ.ಹುಬ್ಬಳ್ಳಿ ಗ್ರಾಪಂನಿಂದ ಪಪಂ ಆಗಿ ಮೇಲ್ದರ್ಜೆಗೇರಿ 7 ವರ್ಷಗಳಾದರೂ ಕಂದಾಯ ಇಲಾಖೆ ಕಟ್ಟಡದಲ್ಲೇ ಕಾರ್ಯಾಲಯ ಕಾರ್ಯನಿರ್ವಹಿಸುತ್ತಿದೆ.

    ಕಂದಾಯ ಇಲಾಖೆಯ ಈ ಕಟ್ಟಡ ಎಂ.ಕೆ.ಹುಬ್ಬಳ್ಳಿ ಗ್ರಾಪಂ ಇದ್ದಾಗಿನಿಂದಲೂ ಆಸರೆಯಾಗಿದ್ದು, ಸದ್ಯ ಪಪಂಗೂ ಇದೇ ಕಟ್ಟಡ ಗತಿಯಾಗಿದೆ. ಆದರೆ, ಮೊದಲಿದ್ದ ಸ್ಥಿತಿಯಲ್ಲಿ ಕಟ್ಟಡ ಉಳಿದಿಲ್ಲ. ಶಿಥಿಲಾವಸ್ಥೆಗೊಂಡಿರುವ ಕಟ್ಟಡದಲ್ಲಿ ಅಧಿಕಾರಿ, ಸಿಬ್ಬಂದಿ ಭೀತಿಯಲ್ಲೇ ಕಾಯಕ ಮಾಡುವಂತಾಗಿದೆ.

    ಕೆಲಸಗಳ ನಿಮಿತ್ತ ಪಪಂಗೆ ಆಗಮಿಸುವ ಸಾರ್ವಜನಿಕರು ಕಟ್ಟಡದ ಸ್ಥಿತಿ ಕಂಡು ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪಪಂಗೆ ಕಚೇರಿಗೆ ಸ್ವಂತ ಕಟ್ಟಡ ಕಟ್ಟಿಕೊಳ್ಳಲಾಗದ ಪೌರಾಡಳಿತ, ಪಟ್ಟಣದ ಅಭಿವೃದ್ಧಿ ಹೇಗೆ ಮಾಡುತ್ತದೆ ಎಂಬ ಪ್ರಶ್ನೆಗಳು ಸಾರ್ವಜನಿಕರಲ್ಲಿ ಮೂಡುತ್ತಿವೆ.

    ಕಂಪ್ಯೂಟರ್-ಕಡತಗಳಿಗೂ ಹಾನಿ: ಮಳೆ ಬಂದಾಗೊಮ್ಮೆ ಸೋರುವ ಜಾಗೆಯಲ್ಲಿ ಪಾತ್ರೆಗಳನ್ನು ಇಡಬೇಕಾದ ಸ್ಥಿತಿ ಬಂದಿದೆ. ನೀರು ಸೋರಿ ಕಡತಗಳು ಮತ್ತು ಕಂಪ್ಯೂಟರ್ ಹಾಳಾಗುತ್ತಿದ್ದು, ಇಲಿ, ಹೆಗ್ಗಣಗಳ ಕಾಟವೂ ವಿಪರೀತವಾಗಿದೆ.

    ಸರ್ಕಾರಕ್ಕಿಲ್ಲ ಕಾಳಜಿ: ಸ್ವಂತ ಪಪಂ ಕಟ್ಟಡ ನಿರ್ಮಿಸಲು ಲಭ್ಯವಿರುವ ಜಾಗೆಯ ಮಾಹಿತಿ ಜತೆಗೆ ಅನುದಾನ ನೀಡುವಂತೆ ಈಗಾಗಲೇ ಪಪಂ ಅಧಿಕಾರಿಗಳು ಕ್ರಿಯಾ ಯೋಜನೆ ರೂಪಿಸಿ 2.5-3 ಕೋಟಿ ರೂ. ಅನುದಾನಕ್ಕೆ ಎರಡು ಬಾರಿ ಪೌರಾಡಳಿತ ಇಲಾಖೆ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಆದರೆ, ಇಲಾಖೆಯಿಂದ ಈವರೆಗೂ ಯಾವುದೇ ಉತ್ತರ ಬಂದಿಲ್ಲ.

    ಸ್ವಂತ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ಎರಡು ಬಾರಿ ಇಲಾಖೆ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಆದರೆ, ಮಂಜೂರಾತಿ ಸಿಕ್ಕಿಲ್ಲ, ಹಾಗಾಗಿ ಹಳೆಯ ಕಟ್ಟಡದಲ್ಲೇ ಕಾರ್ಯನಿರ್ವಹಿಸುತ್ತಿದ್ದೇವೆ.
    | ಐ.ಸಿ.ಸಿದ್ನಾಳ, ಪಪಂ ಮುಖ್ಯಾಧಿಕಾರಿ

    ಎಂ.ಕೆ.ಹುಬ್ಬಳ್ಳಿ ಮತ್ತು ಚ.ಕಿತ್ತೂರು ಪಪಂಗಳಿಗೆ ಹೊಸ ಕಟ್ಟಡ ನಿರ್ಮಿಸಲು ಈಗ ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಪಪಂಗೆ ಬಂದ ಅನುದಾನ ಅಭಿವದ್ಧಿಗೆ ಸಾಕಾಗುವುದಿಲ್ಲ. ಇದರಲ್ಲಿ ಕಟ್ಟಡ ಕಟ್ಟಿಕೊಳ್ಳಲು ಹೇಗೆ ಸಾಧ್ಯ? ಹಾಗಾಗಿ ಕಟ್ಟಡ ನಿರ್ಮಾಣಕ್ಕೆ ಪ್ರತ್ಯೇಕ ಅನುದಾನ ನೀಡುವಂತೆ ಮನವಿ ಮಾಡಿದ್ದೇವೆ.
    | ಮಹಾಂತೇಶ ದೊಡಗೌಡರ, ಶಾಸಕ

    | ಶಿವಾನಂದ ವಿಭೂತಿಮಠ ಎಂ.ಕೆ.ಹುಬ್ಬಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts