More

  ಗ್ರಾಪಂಗೆ ಸ್ವಂತ ಕಟ್ಟಡ ನಿರ್ಮಿಸಿಕೊಡಲು ವೈ.ಟಿ. ಹೊನ್ನತ್ತಿ ಗ್ರಾಮಸ್ಥರ ಪ್ರತಿಭಟನೆ

  ರಾಣೆಬೆನ್ನೂರ: ತಾಲೂಕಿನ ವೈಟಿ ಹೊನ್ನತ್ತಿಗೆ ಗ್ರಾಪಂಗೆ ಸ್ವಂತ ಕಟ್ಟಡ ಒದಗಿಸುವಂತೆ ಆಗ್ರಹಿಸಿ ತಾಲೂಕಿನ ವೈಟಿ ಹೊನ್ನತ್ತಿ ಗ್ರಾಪಂ ನಿರ್ಮಾಣ ಹೋರಾಟ ಸಮಿತಿ ನೇತೃತ್ವದಲ್ಲಿ ವೈಟಿ ಹೊನ್ನತ್ತಿ, ನೂಕಾಪುರ, ಮಾದಾಪುರ, ರಾಮಾಪುರ ಹುಲ್ಲತ್ತಿ ಮತ್ತು ಹುಲ್ಲತ್ತಿ ತಾಂಡ ಗ್ರಾಮಗಳ ಸಾರ್ವಜನಿಕರು ಮತ್ತು ಚುನಾಯಿತ ಪ್ರತಿನಿಧಿಗಳು ಸೋಮವಾರ ನಗರದ ಪೋಸ್ಟ್ ವೃತ್ತದಲ್ಲಿ ತಾಪಂ ಸಹಾಯಕ ನಿರ್ದೇಶಕ ಪರಶುರಾಮ ಪೂಜಾರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
  2015ರಲ್ಲಿ ವೈಟಿ ಹೊನ್ನತಿ ಗ್ರಾಪಂ ಮಾಡಲಾಗಿದೆ. ಇದರ ವ್ಯಾಪ್ತಿಗೆ ನೂಕಾಪುರ, ಮಾಧುರಾಯನಪುರ, ರಾಮಾಪುರ ಹುಲ್ಲತ್ತಿ ಮತ್ತು ಹುಲ್ಲತ್ತಿ ತಾಂಡ ಗ್ರಾಮಗಳನ್ನು ಸೇರಿಸಲಾಗಿದೆ. ಗ್ರಾಪಂನಲ್ಲಿ 15 ಜನ ಸದಸ್ಯರಿದ್ದು ಪ್ರತಿ ಗ್ರಾಮ ಪಂಚಾಯತಿ ಸಾಮಾನ್ಯ ಸಭೆಗಳಲ್ಲಿ ಪಂಚಾಯಿತಿ ಕಟ್ಟಡದ ಕುರಿತು ಠರಾವು ಪಾಸು ಮಾಡಲಾಗಿದೆ. ಮೇಲಾಧಿಕಾರಿಗಳ ಗಮನಕ್ಕೆ ತಂದರೂ ಈವರೆಗೂ ಹೊಸ ಪಂಚಾಯತಿ ಕಟ್ಟಡ ಕಟ್ಟಿರುವುದಿಲ್ಲ.
  ಜಿಲ್ಲೆಯಲ್ಲಿ ಒಟ್ಟು 223 ಗ್ರಾಪಂಗಳಿದ್ದು ಬಹುತೇಕ ಎಲ್ಲ ಪಂಚಾಯಿತಿಗಳಿಗೂ ಸ್ವಂತ ಕಟ್ಟಡವಿದೆ. ಆದರೆ ದುರ್ದೈವದ ಸಂಗತಿ ಎಂದರೆ ವೈಟಿ ಹೊನ್ನತ್ತಿ ಗ್ರಾಮ ಪಂಚಾಯಿತಿಗೆ ಮಾತ್ರ ಇಂದಿಗೂ ಸ್ವಂತ ಕಟ್ಟಡವಿಲ್ಲ. ಸದ್ಯ ಗ್ರಾಪಂ ಕಚೇರಿಯು 40 ವಷರ್ಗಳ ಹಳೆಯ ಗೋದಾಮಿನಂತಿರುವ ಕಟ್ಟಡದಲ್ಲಿ ಸಾರ್ವಜನಿಕ ಸೇವೆಗಳನ್ನ ಕಾರ್ಯನಿರ್ವಹಿಸುತ್ತಿದೆ.
  ಈ ಕಟ್ಟಡದಲ್ಲಿ ಶೌಚಗೃಹ, ಸಭೆಗಳನ್ನು ಮಾಡಲು ವಿಸ್ತೀರ್ಣವಾದ ಕೊಠಡಿಗಳಿಲ್ಲ. ಒಟ್ಟಾರೆ ಮೂಲಭೂತ ಸೌಕರ್ಯಗಳಿಲ್ಲದ ಗ್ರಾಮ ಪಂಚಾಯಿತಿ ಇದಾಗಿದೆ. ಆದ್ದರಿಂದ ಕೂಡಲೇ ಜಿಲ್ಲಾಡಳಿತ ಗ್ರಾಮ ಪಂಚಾಯತಿ ನಿರ್ಮಾಣಕ್ಕೆ ಸೂಕ್ತ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ಮುಂಬರುವ 2024ರ ಸಾರ್ವತ್ರಿಕ ಚುನಾವಣೆಯನ್ನು ಆರು ಗ್ರಾಮಗಳ ಸಾರ್ವಜನಿಕರು ಸಾಮೂಹಿಕವಾಗಿ ಮತ ಬಹಿಷ್ಕಾರ ಮಾಡುವುದರ ಮುಖಾಂತರ ಮತದಾನದಿಂದ ದೂರ ಉಳಿಯುವುದಾಗಿ ಎಚ್ಚರಿಸಿದರು. ಇದಲ್ಲದೆ ಮಾ. 26ರಂದು ಬಾಗಲಕೋಟೆ ಬಿಳಿಗಿರಿರಂಗನ ಬೆಟ್ಟ ರಾಜ್ಯ ಹೆದ್ದಾರಿಯನ್ನು ( ಗುತ್ತಲ ರಸ್ತೆ ) ಬಂದ್ ಮಾಡಿ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
  ಪ್ರಮುಖರಾದ ಜಗದೀಶ ಕೆರೂಡಿ, ಮಂಜುನಾಥ ಲಮಾಣಿ, ಗೋವಿಂದ ಲಮಾಣಿ, ಗುಡ್ಡಪ್ಪ ಮಲ್ಲಾಡದ, ವೆಂಕಟೇಶ ದೊಡ್ಮನಿ, ಯಲ್ಲಪ್ಪ ಚಿಕ್ಕಣ್ಣನವರ, ಮಲ್ಲಿಕಾರ್ಜುನ ಕಮದೋಡ, ರಾಜು ಓಲೆಕಾರ, ರವಿ ಕೆರೂಡಿ, ಮಲ್ಲಪ್ಪ ಪೂಜಾರ, ರಮೇಶ ಕೊನಪ್ಪನವರ, ಭೀಮಪ್ಪ ಲಮಾಣಿ, ಚಂದ್ರು ಬನ್ನಿಹಟ್ಟಿ, ಮಾಂತೇಶ ವಡ್ಡರ, ಮಾರುತಿ ದೊಡ್ಡಮನಿ, ಮಂಜಪ್ಪ ಗುಗರಿ ಮತ್ತಿತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts