More

    ‘ಸ್ಲಂ’ ಹಣೆಪಟ್ಟಿ ಕಳಚದ ‘ಮಲಪ್ರಭಾ ನಗರ’

    ಬೆಳಗಾವಿ: ಇದು ಹೆಸರಿಗಷ್ಟೇ ‘ಮಲಪ್ರಭಾ ನಗರ’ ಆದರೆ, ಹದಿನೈದು ವರ್ಷಗಳಿಂದ ಕೊಳಚೆ ಪ್ರದೇಶವೆಂಬ ಹಣೆಪಟ್ಟಿಕಟ್ಟಿಕೊಂಡು ಸ್ಥಳೀಯರಿಗೆ ನಿತ್ಯ ಸಮಸ್ಯೆ ಉಂಟುಮಾಡುತ್ತಿದೆ. ಇದು 15 ವರ್ಷದ ಹಿಂದೆ ‘ಸ್ಲಂ’ ಎಂದು ಕರೆಸಿಕೊಳ್ಳುತ್ತಿದ್ದ ವಡಗಾವಿ ಸಮೀಪದ ಮಲಪ್ರಭಾ ನಗರದ ಈಗಲೂ ಸಮಸ್ಯೆಗಳ ಸರಮಾಲೆಯಲ್ಲಿ ನರಳುತ್ತಿದೆ. ಈಗಲೂ ಕೊಳಚೆ ಪ್ರದೇಶಕ್ಕೆ ಕಡಿಮೆ ಇಲ್ಲದಂತೆ ಕಣ್ಣಿಗೆ ರಾಚುತ್ತಿದೆ. ಅವೈಜ್ಞಾನಿಕ ರಸ್ತೆ ನಿರ್ಮಾಣ, ಒಳಚರಂಡಿಯಿಂದಾಗಿ ಇಲ್ಲಿಯ ಜನ ನರಕಯಾತನೆ ಅನುಭವಿಸುತ್ತಿದ್ದಾರೆ. ಮಳೆಯಾಗದಿದ್ದರೂ ಇಲ್ಲಿನ ಚರಂಡಿಗಳಲ್ಲಿ ಕೊಳಕು ನೀರು ಸಂಗ್ರಹಗೊಂಡು ಗಬ್ಬು ವಾಸನೆ ಬರುತ್ತದೆ. ಚರಂಡಿ ನೀರು ನಾಲಾಗೆ ಹರಿದು ಹೋಗುವುದಿಲ್ಲ. ಹೀಗಾಗಿ ದಶಕದಿಂದಲೂ ಇದಕ್ಕೆ ಸ್ಲಂ ಎಂಬ ಹೆಸರು ಹೋಗಿಲ್ಲ.

    ಮನೆಗಳಿಗೆ ನುಗ್ಗುವ ನಾಲಾ ನೀರು: ಮಲಪ್ರಭಾನಗರದಲ್ಲಿ ಈ ಹಿಂದೆ ರಸ್ತೆ ಹಾಗೂ ಚರಂಡಿಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಚರಂಡಿ ನೀರು ಸರಿಯಾಗಿ ನಾಲಾಗೆ ಜೋಡಣೆಯಾಗಿಲ್ಲ. ಮಲಪ್ರಭಾ ನಗರದ ನೀರು ನಾಲೆ ಸೇರುವ ಬದಲಾಗಿ ನಾಲೆ ನೀರು ಚರಂಡಿಗಳಿಗೆ ನುಗ್ಗಿ ಕಲುಷಿತ ವಾತಾವರಣ ಸೃಷ್ಟಿಸುತ್ತಿದೆ. ಖಾಸಾಬಾಗ, ಭಾರತ ನಗರ, ನಾಥಪೈ ವೃತ್ತ, ಬಸವೇಶ್ವರ ಸರ್ಕಲ್ ಸೇರಿ ವಿವಿಧೆಡೆಯ ಚರಂಡಿ ನೀರು ಖಾಸಬಾಗ ನಾಲಾಗೆ ಹರಿದು ಬರುತ್ತದೆ. ಆ ನೀರು ಮಲಪ್ರಭಾ ನಗರದ ಚರಂಡಿಗಳಿಗೆ ನುಗ್ಗಿ ನಿವಾಸಿಗಳಿಗೆ ತೊಂದರೆಯುಂಟು ಮಾಡುತ್ತಿದೆ.

    ದುರಸ್ತಿ ಕಾಣದ ರಸ್ತೆ, ಚರಂಡಿಗಳು: ಮಲಪ್ರಭಾ ನಗರದ ರಸ್ತೆಗಳು ತಗ್ಗು-ಗುಂಡಿಗಳಿಂದ ತುಂಬಿವೆ. ಮಳೆಯಾದರೆ ಗುಂಡಿಗಳಲ್ಲಿ ನೀರು ನುಗ್ಗಿ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಒಳಚರಂಡಿ ನಿರ್ಮಾಣ ಅವೈಜ್ಞಾನಿಕವಾಗಿದ್ದು, ನೀರು ನಾಲಾಗೆ ಹೋಗದೇ ಚರಂಡಿಯಲ್ಲಿ ನಿಲ್ಲುತ್ತಿದೆ. ಸಮಸ್ಯೆಯ ನಡುವೆ ಸಾರ್ವಜನಿಕರು ಸಾಂಕ್ರಾಮಿಕ ರೋಗಿಗಳ ಭೀತಿಯಲ್ಲಿ ದಿನ ಕಳೆಯುತ್ತಿದ್ದಾರೆ.

    ಬೆಳಕು ಕಾಣದ ಬದುಕು !!!

    ಈ ಪ್ರದೇಶದಲ್ಲಿ ನಿವಾಸಿಗಳಿಗೆ ಬೀದಿ ನಾಯಿ ಹಾಗೂ ಸೊಳ್ಳೆ ಕಾಟ ಹೆಚ್ಚಾಗಿದೆ. ಇಲ್ಲಿಯ ಬಹುತೇಕ ಮನೆಗಳಿಗೆ ವಿದ್ಯುತ್ ಸಂಪರ್ಕವಿಲ್ಲ. ಕತ್ತಲಲ್ಲೇ ದಿನ ಕಳೆಯುತ್ತಿದ್ದಾರೆ. ಇಷ್ಟೆಲ್ಲ ಸಮಸ್ಯೆಗಳು ತಾಂಡವವಾಡುತ್ತಿದ್ದರೂ ಪಾಲಿಕೆ ಅಧಿಕಾರಿಗಳಾಗಲಿ, ಸಿಬ್ಬಂದಿಗಳಾಗಲಿ ಭೇಟಿ ನೀಡಿ ಕ್ರಮಕ್ಕೆ ಮುಂದಾಗಿಲ್ಲ. ಮಹಾನಗರ ಪಾಲಿಕೆಯ ಪೌರ ಕಾರ್ಮಿಕರು ನಿಯ ಮಿತವಾಗಿ ಬಂದು ಸ್ವಚ್ಛತಾ ಕಾರ್ಯ ಕೈಗೊಳ್ಳುತ್ತಿಲ್ಲ ಎಂಬುದು ಸ್ಥಳೀಯರ ದೂರು.

    ಚರಂಡಿಗಳಿಗೆ ನಾಲಾದಿಂದ ನೀರು ಬರುತ್ತದೆ. ಈ ನೀರು ಮನೆಗಳಿಗೆ ನುಗ್ಗುತ್ತದೆ. ಮಳೆಗಾಲದಲ್ಲಿ ಬಹಳ ತೊಂದರೆಯಾಗುತ್ತಿದೆ. ಮನೆ ಸುತ್ತಮುತ್ತ ಗಲೀಜು ಸಂಗ್ರಹವಾಗುತ್ತಿದೆ. ಜೀವನ ನಿರ್ವಹಣೆ ಸವಾಲ್ ಆಗಿದೆ.
    | ವಿಠ್ಠಲ ಕವಡಿ, ಸ್ಥಳೀಯ ನಿವಾಸಿ

    ನಮ್ಮ ಮನೆಯಲ್ಲಿ ಕರೆಂಟ್ ಇಲ್ರೀ. ಬೀದಿ ದೀಪವೂ ಹತ್ತುವುದಿಲ್ಲ. ಕತ್ತಲಲ್ಲಿ ಜೀವನ ಸಾಗಿಸುತ್ತಿದ್ದೇವೆ. ಸಮಸ್ಯೆ ಕುರಿತು ಜನಪ್ರತಿಬನಿಧಿಗಳು ಹಾಗೂ ಅಧಿಕಾರಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ. ನಮ್ಮ ಸಮಸ್ಯೆ ಯಾರಿಗೆ ಹೆಳೋಣ? ಗೊತ್ತಾಗುತ್ತಿಲ್ಲ.
    | ಶಕೀನಾ ಬಾಳೇಕುಂದ್ರಿ, ಸ್ಥಳೀಯ ನಿವಾಸಿ

    ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ಮಾಡಿಸುತ್ತೇನೆ. ಅಲ್ಲಿ ಏನೇನು ಸಮಸ್ಯೆಗಳಿವೆ. ನಿವಾಸಿಗಳಿಗೆ ಅಗತ್ಯವಾಗಿ ಏನು ಬೇಕು ಎನ್ನುವ ಬಗ್ಗೆ ತಿಳಿದುಕೊಂಡು ಕ್ರಮ ಕೈಗೊಳ್ಳುತ್ತೇವೆ.
    | ಕೆ.ಎಚ್.ಜಗದೀಶ ಪಾಲಿಕೆ ಆಯುಕ್ತ

    ಮಲಪ್ರಭಾ ನಗರ ಕೊಳಚೆ ಪ್ರದೇಶವಾಗಿಯೇ ಉಳಿದಿದೆ. ರಸ್ತೆ, ಒಳಚರಂಡಿ ಇಲ್ಲದೆ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಇಲ್ಲಿಯ ಸಮಸ್ಯೆಗಳನ್ನು ಕೇಳುವವರೇ ಇಲ್ಲ. ಸ್ಥಳೀಯರು ಶುದ್ಧ ವಾತಾವರಣದಲ್ಲಿ ಬದುಕುವುದು ಯಾವಾಗ?.
    | ಶ್ರೀನಿವಾಸ ತಾಳೂಕರ, ಕನ್ನಡಪರ ಸಂಘಟನೆ ಹೋರಾಟಗಾರ, ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts