More

    ಸೆ. 17ರೊಳಗೆ ರೈಲ್ವೇ ಮೇಲ್ಸೆತುವೆ ಪೂರ್ಣಗೊಳಿಸಿ

    ಕಲಬುರಗಿ: ನಗರದ ಜೇವರ್ಗಿ ರಸ್ತೆಯ ಮದರ್ ಥೇರೆಸಾ ಶಾಲೆ ಬಳಿಯ ಹಾಗೂ ಅಫಜಲಪುರ ರಸ್ತೆಯ ಬಿದ್ದಾಪುರ ಕಾಲನಿ ರೈಲ್ವೇ ಮೇಲ್ಸೆತುವೆ (ಆರ್ಒಬಿ) ಕಾಮಗಾರಿ ಸೆ.17ರೊಳಗೆ ಮುಗಿಸುವಂತೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಿದರು.
    ಬುಧವಾರ ಕಾಮಗಾರಿ ವೀಕ್ಷಿಸಿದ ಅವರು, ಅಂದು ನಡೆಯಲಿರುವ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಸಿಎಂ ಭಾಗಿಯಾಗುವುದರಿಂದ ಅವರಿಂದ ಆರ್ಒಬಿ ಉದ್ಘಾಟಿಸಲು ಉದ್ದೇಶಿಸಲಾಗಿದೆ. ಹೀಗಾಗಿ ಕೆಲಸವನ್ನು ಯುದ್ದೋಪಾದಿಯಲ್ಲಿ ಮಾಡುವಂತೆ ತಾಕೀತು ಮಾಡಿದರು.
    ಕಾಮಗಾರಿಗಳನ್ನು ಪಡೆದೆ ಇಲಾಖೆಗೆ ಸುಪರ್ದಿಗೆ ತೆಗೆದುಕೊಳ್ಳಿ. ಸಣ್ಣ-ಪುಟ್ಟ ಕೆಲಸಗಳನ್ನು ಉಳಿಸಿಕೊಳ್ಳಬೇಡಿ. ಈಗಾಗಲೇ ಸಮಯ ನಾಲ್ಕೈದು ಸಲ ಪೂರ್ಣಗೊಂಡಿದೆ. ಹೀಗಾಗಿ ಈ ಸಲ ಯಾವುದೇ ಕಾರಣಕ್ಕೆ ಕಾಮಗಾರಿ ಪೂರ್ಣಗೊಳಿಸುವಿಕೆ ಅವಧಿ ವಿಸ್ತರಿಸಬೇಡಿ. ಕಠಿಣವಾಗಿ ಗುತ್ತಿಗೆದಾರ ವಿರುದ್ಧ ದಂಡ ಹಾಕುವಂತೆ ಕೆಕೆಆರ್​ಕೆಡಿಬಿ ಅಧ್ಯಕ್ಷರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
    ಅನುದಾನದ ಕೊರತೆಯಿಲ್ಲ. ಅದೇ ರೀತಿ ಉಳಿದ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ನಿಗಾವಹಿಸಲು ತಿಳಿಸಿದರು. 35 ಕೋ.ರೂ ವೆಚ್ಚದ ಬಿದ್ದಾಪುರ ಕಾಲನಿಯ ರೈಲ್ವೆ ಮೇಲ್ಸೆತುವೆ ಕಾಮಗಾರಿ ಐದಾರು ವರ್ಷದ ಹಿಂದೆಯೇ ಮುಗಿಯಬೇಕಿತ್ತು. ಕಾಮಗಾರಿ ಮೊದಲು 19.35 ಕೋ.ರೂ ಗೆ ನಿಗದಿಯಾಗಿತ್ತು. ನಂತರ ಪರಿಷ್ಕೃತಗೊಂಡು 35 ಕೋಟಿ ರೂ. ಗೆ ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
    ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಅಭಿಯಂತರ ಪಿ. ಶ್ರೀನಿವಾಸ , ಕಾರ್ಯಪಾಲಕ ಅಭಿಯಂತರ ಎಚ್. ಮಲ್ಲಿಕಾರ್ಜುನ , ಸಹಾಯಕ ಅಭಿಯಂತರ ಮಲ್ಲಿಕಾರ್ಜುನ ಮುದ್ದಾ, ಸಹಾಯಕ ಇಂಜನಿಯರ್ ಮಹ್ಮದ ಸಲೀಂ ಚೌಧರಿ, ಕರಿಂ, ರೈಲ್ವೇ ಅಧಿಕಾರಿಗಳು, ಬಿಜೆಪಿ ಮಹಾನಗರ ಪ್ರಧಾನ ಕಾರ್ಯದರ್ಶಿಗಳಾದ ಸೂರಜ್ ತಿವಾರಿ, ಮಹಾದೇವ ಬೆಳಮಗಿ, ಶ್ರೀನಿವಾಸ ಕುಲಕರ್ಣಿ ಇತರರಿದ್ದರು.
    ಕೆಕೆಆರ್ಡಿಬಿಯಿಂದ ಮೂರು ಮೇಲ್ಸೆತುವೆ
    ಕಲಬುರಗಿ ಮಹಾನಗರ ವೇಗವಾಗಿ ಬೆಳೆಯುತ್ತಿರುವುದರಿಂದ ಸಂಚಾರ ದಟ್ಟಣೆ ಕಡಿಮೆ ಮಾಡಲು ರಾಮಮಂದಿರ ವೃತ್ತ, ಹುಮನಾಬಾದ್ ರಸ್ತೆ ವೃತ್ತ ಹಾಗೂ ಸೇಡಂ ರಸ್ತೆಯ ಖರ್ಗೆ ಪೆಟ್ರೋಲ್ ಪಂಪ್ ಬಳಿ ರಸ್ತೆ ಮೇಲ್ಸೆತುವೆ ನಿರ್ಮಿಸಲು ಯೋಜಿಸಲಾಗಿದೆ ಎಂದು ದತ್ತಾತ್ರೇಯ ಪಾಟೀಲ್ ತಿಳಿಸಿದರು. ಇದರಿಂದ ವರ್ತುಲ ರಸ್ತೆಯಲ್ಲಿ ಸಂಚಾರ ಒತ್ತಡ ತಗ್ಗಲಿದೆ. ನೇರವಾಗಿ ನಗರದ ಹೊರಗೆ ಹೋಗುವ ವಾಹನಗಳಿಗೆ ಅನುವು ಆಗಲಿದೆ. ಹೀಗಾಗಿ ಬೆಂಗಳೂರಿನ ಮೇಖ್ರಿ ಸರ್ಕಲ್ ಮಾದರಿಯಲ್ಲಿ ಮೇಲ್ಸೆತುವೆ ನಿರ್ಮಿಸಲು ನೀಲಿನಕ್ಷೆ ರೂಪಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದ್ದು, ಕೆಕೆಆರ್ಡಿಬಿಯಿಂದಲೇ ಈ ಮೇಲ್ಸೆತುವೆ ನಿರ್ಮಿಸಲಾಗುವುದು. ಅಂತಾರಾಷ್ಟ್ರೀಯ ಮಾದರಿ ಕ್ರೀಡಾಂಗಣ ನಿರ್ಮಿಸಲು ಬೃಹತ್ ಯೋಜನೆ ಹೊಂದಲಾಗಿದ್ದು, ಅಗತ್ಯ 50 ಎಕರೆ ಭೂಮಿ ನಗರದ ಸುತ್ತಮುತ್ತ ಗುರುತಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಕೆಕೆಆರ್ ಡಿಬಿ ಅಧ್ಯಕ್ಷರು ತಿಳಿಸಿದರು.
    ಸೆ. 17ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದ ಎರಡು ರೈಲ್ವೇ ಮೇಲ್ಸೆತುವೆ, 43 ಕೋ.ರೂ ವೆಚ್ಚದ ಲೋಕೋಪಯೋಗಿ ಭವನ, 36 ಕೋ.ರೂ ವೆಚ್ಚದ ವಸತಿ ಸಮುಚ್ಛಯ ಐವಾನ್-ಇ- ಶಾಹಿ ಅತಿಥಿ ಗೃಹದಲ್ಲಿ ನೂತನ ಅತಿಥಿ ಗೃಹ ಸಂಕಿರಣ ಮೊದಲಾದ ಕೆಲಸಗಳನ್ನು ಲೋಕಾರ್ಪಣೆ ಮಾಡಿಸಲಾಗುವುದು.
    | ದತ್ತಾತ್ರೇಯ ಪಾಟೀಲ್ ರೇವೂರ, ಕೆಕೆಆರ್​ಡಿಬಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts