More

    ಸೆ. 10ರೊಳಗೆ ಕಬ್ಬಿನ ಬಾಕಿ ಹಣ ಪಾವತಿ

    ಹಾವೇರಿ: ರಾಜ್ಯದ ಕಬ್ಬು ಬೆಳೆಗಾರರ ಬಾಕಿ ಮೊತ್ತವನ್ನು ಸೆ. 10ರೊಳಗೆ ಪಾವತಿ ಮಾಡಲಾಗುವುದು ಎಂದು ಕಾರ್ವಿುಕ ಹಾಗೂ ಸಕ್ಕರೆ ಖಾತೆ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಸಂಜೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕೋವಿಡ್ ಸಂಕಷ್ಟದ ಸಂದರ್ಭದಲ್ಲೂ ರಾಜ್ಯದಲ್ಲಿರುವ ಸಕ್ಕರೆ ಕಾರ್ಖಾನೆಗಳು ಕಬ್ಬು ಪೂರೈಕೆ ಮಾಡಿದ ರೈತರಿಗೆ ಶೇ. 98.89ರಷ್ಟು ಹಣ ಪಾವತಿಸಿವೆ. ಕಾರ್ಖಾನೆಗಳು 10,936 ಕೋಟಿ ಮೊತ್ತದ ಕಬ್ಬು ನುರಿಸಿದ್ದು, ಇದರಲ್ಲಿ 10,810 ಕೋಟಿ ಹಣವನ್ನು ರೈತರಿಗೆ ಪಾವತಿಸಿವೆ. 126 ಕೋಟಿ ಉಳಿದ ಹಣವನ್ನು ಶೀಘ್ರವೇ ಪಾವತಿ ಮಾಡಲಾಗುವುದು. ಬಾಕಿ ಹಣ ಪಾವತಿ ಕುರಿತು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.

    ಕೋವಿಡ್ ಸಂಕಷ್ಟ ಕಾಲದಲ್ಲೂ ರಾಜ್ಯದಲ್ಲಿ ಕಬ್ಬು ಬೆಳೆಗಾರರು ಹಾಗೂ ಅಡಿಕೆ ಬೆಳೆಗಾರರಿಗೆ ಹೆಚ್ಚು ತೊಂದರೆಯಾಗಿಲ್ಲ. ಸಂಕಷ್ಟ ಕಾಲದಲ್ಲೂ ರಾಜ್ಯದಲ್ಲಿರುವ ಸಕ್ಕರೆ ಕಾರ್ಖಾನೆಗಳ ಮಾಲೀಕರು ಕಬ್ಬು ಪೂರೈಸಿದವರಿಗೆ ಹಣ ಸಂದಾಯ ಮಾಡಿದ್ದಾರೆ. ಈವರೆಗೆ ಕಬ್ಬು ಬೆಳೆಗಾರರಿಗೆ ಹಣ ಸಂದಾಯ ಮಾಡದ ಕಾರ್ಖಾನೆಗಳು ಯಾವುದಾದರೂ ಇದ್ದರೆ ಕಾರ್ಖಾನೆಯ ಸಕ್ಕರೆ ಮಾರಾಟ ಮಾಡಿ ರೈತರಿಗೆ ಹಣ ಪಾವತಿ ಮಾಡುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಕಬ್ಬು ಪೂರೈಕೆ ಮಾಡಿದ 15ದಿನದೊಳಗಾಗಿ ರೈತರಿಗೆ ಹಣ ಪಾವತಿಸುವಂತೆ ಕೇಂದ್ರ ಸರ್ಕಾರದ ನಿರ್ದೇಶನವಿದೆ. ಉತ್ಪಾದನೆಯಾದ ಸಕ್ಕರೆಯನ್ನು ಕೇಂದ್ರ ನಿಗದಿಪಡಿಸಿದ ಪ್ರಮಾಣದಲ್ಲಿ ಆಯಾ ತಿಂಗಳು ಮಾರಾಟ ಮಾಡುವ ನಿರ್ಬಂಧವನ್ನು ಸಕ್ಕರೆ ಕಾರ್ಖಾನೆಗಳಿಗೆ ವಿಧಿಸಲಾಗಿದೆ ಎಂದರು.

    ಹಾವೇರಿ ಸಂಗೂರ ಸಕ್ಕರೆ ಕಾರ್ಖಾನೆಯ ಉತ್ಪಾದನೆ ಹಾಗೂ ಕಬ್ಬು ಪೂರೈಕೆ ಕುರಿತು ಮಾಹಿತಿ ನೀಡಿದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ ವಿನೋದಕುಮಾರ ಹೆಗ್ಗಳಗಿ, 2019-20ನೇ ಸಾಲಿನಲ್ಲಿ ಕಬ್ಬು ನುರಿಸುವ ಹಂಗಾಮನ್ನು 4-10-2019ರಂದು ಆರಂಭಿಸಿ 18-2-2020ರವರೆಗೆ ಮುಕ್ತಾಯಗೊಳಿಸಲಾಗಿದೆ. ಒಟ್ಟು 4,29,013.828 ಮೆಟ್ರಿಕ್ ಟನ್ ಕಬ್ಬನ್ನು ನುರಿಸಿದ್ದು 41,410.80 ಮೆಟ್ರಿಕ್ ಟನ್ ಸಕ್ಕರೆ ಉತ್ಪಾದಿಸಿದ್ದಾರೆ. 9.65 ಸಕ್ಕರೆ ಇಳುವರಿ ಬಂದಿದೆ. ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯದ ಆದೇಶದಂತೆ ಪ್ರತಿ ಮೆಟ್ರಿಕ್ ಟನ್​ಗೆ ಎಫ್​ಆರ್​ಪಿ ದರ 2,613ರೂ. ನಿಗದಿಗೊಳಿಸಲಾಗಿದೆ. ಈ ದರದಂತೆ ಪೂರೈಕೆಯಾದ ಕಬ್ಬಿಗೆ 11,210.13 ಲಕ್ಷ ರೂ. ಪಾವತಿಸಬೇಕಾಗುತ್ತದೆ. ಆದರೆ, ಜಿಲ್ಲೆಯ ಸಕ್ಕರೆ ಕಾರ್ಖಾನೆಯವರು ಪ್ರತಿ ಮೆಟ್ರಿಕ್ ಟನ್​ಗೆ 2694.38 ರೂ.ಗಳಂತೆ 11,559.26ಲಕ್ಷ ಮೊತ್ತವನ್ನು ರೈತರ ಕಬ್ಬಿನ ಬಿಲ್ ಪಾವತಿಸಿದ್ದಾರೆ. ಎಫ್​ಆರ್​ಪಿ ದರದಕ್ಕಿಂತ 349.13ಲಕ್ಷ ರೂ. ಹೆಚ್ಚುವರಿಯಾಗಿ ರೈತರಿಗೆ ಹಣ ಸಂದಾಯವಾಗಿದೆ. ಯಾವುದೇ ಕಬ್ಬಿನ ಬಿಲ್ ಬಾಕಿ ಇಲ್ಲ ಎಂದರು.

    ಸಭೆಯಲ್ಲಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಸಿಇಒ ರಮೇಶ ದೇಸಾಯಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts