More

    ಸೆಸ್ಕ್ ಸಭೆಯಲ್ಲಿ ಸಿಬ್ಬಂದಿ ವಿರುದ್ಧ ಅಸಮಾಧಾನ : ಆರೋಪಗಳ ಸುರಿಮಳೆಗೈದ ಸಾರ್ವಜನಿಕರು

    ಹಾಸನ: ಅರಕಲಗೂಡು ತಾಲೂಕಿನ ಪ್ರಮುಖ ವಾಣಿಜ್ಯ ಕೇಂದ್ರವಾದ ಕೇರಳಾಪುರದಲ್ಲಿ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗದೆ ನಿತ್ಯ ಕಣ್ಣಾಮುಚ್ಚಾಲೆಯಾಡುತ್ತಿದ್ದು, ಸೆಸ್ಕ್ ಸಿಬ್ಬಂದಿ ನಿರ್ಲಕ್ಷ್ಯ ಧೋರಣೆಯಿಂದ ರೋಸಿ ಹೋಗಿದ್ದೇವೆ ಎಂದು ಗ್ರಾಮಸ್ಥರು ಆರೋಪಗಳ ಸುರಿಮಳೆಗೈದರು.


    ಕೇರಳಾಪುರದ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ಅದಾಲತ್‌ನಲ್ಲಿ ಮಾತನಾಡಿದ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
    ರಾಮನಾಥಪುರ ಹೋಬಳಿಯಲ್ಲೇ ಹೆಚ್ಚಿನ ವಾಣಿಜ್ಯ ವಹಿವಾಟು ನಡೆಯುವ ಕೇರಳಾಪುರದಿಂದ ಸೆಸ್ಕ್‌ಗೆ ಅಧಿಕ ಆದಾಯ ಸಂದಾಯವಾಗುತ್ತಿದೆ. ಆದರೆ ಅಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಸಮೀಪದ ಕೆ.ಆರ್.ನಗರ ತಾಲೂಕಿನ ಶಿಗವಾಳು ಪ್ರಸರಣಾ ಕೇಂದ್ರದಿಂದ ವಿದ್ಯುತ್ ಸರಿಯಾಗಿ ಸರಬರಾಜಾಗುತ್ತಿಲ್ಲ. ಯಾವಾಗ ವಿದ್ಯುತ್ ಕೈಕೊಡುತ್ತದೆ ಎನ್ನುವುದೇ ಗೊತ್ತಾಗುತ್ತಿಲ್ಲ. ಒಮ್ಮೆ ವಿದ್ಯುತ್ ವ್ಯತ್ಯಯವಾದರೆ ಮತ್ತೆ ಬರುವ ಖಾತ್ರಿಯೇ ಇಲ್ಲ ಎಂದು ದೂರಿದರು.


    ಮಳೆ ಬಂದರೆ ರಾತ್ರಿಯಿಡೀ ಗ್ರಾಮ ಕತ್ತಲೆಯಲ್ಲಿ ಮುಳುಗುತ್ತದೆ. ಇದರಿಂದ ಕಳ್ಳತನ ಪ್ರಕರಣಗಳಿಗೆ ಎಡೆಮಾಡಿಕೊಡಲಾಗುತ್ತಿದೆ. ನಿತ್ಯ ಕೇಂದ್ರ ಸ್ಥಾನದಲ್ಲಿ ಇರದ ಲೈನ್‌ಮನ್‌ಗಳನ್ನು ಕರೆಂಟ್ ಸಮಸ್ಯೆ ಬಗ್ಗೆ ಕೇಳಿದರೆ ಕಿಂಚಿತ್ತೂ ಸ್ಪಂದಿಸುವುದಿಲ್ಲ. ಕೇಂದ್ರ ಸ್ಥಾನದಲ್ಲಿ ನೆಲೆಸುವ ಲೈನ್‌ಮನ್‌ಗಳನ್ನು ನೇಮಿಸಬೇಕು ಎಂದು ಆಗ್ರಹಿಸಿದರು.
    ಶಿಗವಾಳು ವಿದ್ಯುತ್ ಪ್ರಸರಣ ಕೇಂದ್ರದ ಸೆಸ್ಕ್ ಸಿಬ್ಬಂದಿ ನಿರ್ಲಕ್ಷ್ಯ ಧೋರಣೆ ಅಷ್ಟಿಷ್ಟಲ್ಲ. ಸಾಲಿಗ್ರಾಮ ವಿಭಾಗದ ಸೆಸ್ಕ್ ಇಂಜಿನಿಯರ್ ಮತ್ತಷ್ಟು ಉಡಾಫೆಯಿಂದ ವರ್ತಿಸುತ್ತಾರೆ. ಕರೆಂಟ್ ಕೈಕೊಟ್ಟ ವೇಳೆ ಲೈನ್‌ಮನ್‌ಗಳು ಗ್ರಾಮಸ್ಥರ ಸಂಪರ್ಕಕ್ಕೆ ಸಿಗುತ್ತಿಲ್ಲ. ರಾತ್ರಿ ಕರೆಂಟ್ ಇಲ್ಲದೆ ಹೂ ಕಟ್ಟವವರು, ಮಕ್ಕಳ ಓದಿಗೆ ತೊಂದರೆಯಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.


    ಪಿಎಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ರವಿ ಮಾತನಾಡಿ, ಕಳೆದ ಎರಡು ವರ್ಷಗಳ ಹಿಂದೆ ಗ್ರಾಮಸ್ಥರು ಶಿಗವಾಳು ಪ್ರಸರಣಾ ಕೇಂದ್ರಕ್ಕೆ ಮುತ್ತಿಗೆ ಹಾಕಿದಾಗ ವಿದ್ಯುತ್ ಸಮಸ್ಯೆ ಬಗೆಹರಿಸುವುದಾಗಿ ನೀಡಿದ ಭರವಸೆ ಇಂದಿಗೂ ಈಡೇರಿಲ್ಲ ಎಂದು ಆರೋಪಿಸಿದರು. ಹಾಲಿನ ಡೇರಿ ಬಳಿ ವಿದ್ಯುತ್ ಪರಿವರ್ತಕ ಆಗಾಗ್ಗೆ ಕೆಡುತ್ತಿದೆ. ಎರಡು ವರ್ಷಗಳಿಂದ ಸಮಸ್ಯೆ ಬಗೆಹರಿದಿಲ್ಲ ಎಂದು ಗ್ರಾಮದ ಸುರೇಶ್ ದೂರಿದರು.


    ವಾಣಿಜ್ಯ ಕೇಂದ್ರವಾದ ಕೇರಳಾಪುರ ವೇಗವಾಗಿ ಬೆಳವಣಿಗೆ ಕಾಣುತ್ತಿದೆ. ಸೋಮನಹಳ್ಳಿ ಇಲ್ಲವೇ ಬೆಳವಾಡಿ ಪ್ರಸರಣ ಕೇಂದ್ರದಿಂದ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಬೇಕು. ಒಟ್ಟಾರೆ ಹಲವಾರು ವರ್ಷಗಳಿಂದ ಕಾಡುತ್ತಿರುವ ವಿದ್ಯುತ್ ಸಮಸ್ಯೆ ಬಗೆಹರಿಸಬೇಕು ಎಂದು ಗ್ರಾಮದ ಲಕ್ಷ್ಮೀಶ್, ಕುಮಾರ್, ರೇಣುಕಾ ಮತ್ತಿತರರು ಒತ್ತಾಯಿಸಿದರು.


    ಕಾಳೇನಹಳ್ಳಿ ಗ್ರಾಮದಲ್ಲಿ ಸರಿಯಾಗಿ ಕರೆಂಟ್ ಇರುವುದಿಲ್ಲ. ಬಸವನಹಳ್ಳಿ ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ಕರೆಂಟ್ ಕೈಕೊಟ್ಟಿದೆ. ಲೈನ್‌ಮನ್‌ಗಳು ಮಾತ್ರ ವಿದ್ಯುತ್ ಬಿಲ್ ನೀಡಲು ಬಂದಿದ್ದಾರೆ ಎಂದು ಗ್ರಾಮಸ್ಥರು ಕಿಡಿಕಾರಿದರು.


    ರಾಮನಾಥಪುರ ಸೆಸ್ಕ್ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಚಿನ್ನಸ್ವಾಮಿ ಮಾತನಾಡಿ, ಕೇರಳಾಪುರದಲ್ಲಿ ಸೆಸ್ಕ್‌ಗೆ ಹೆಚ್ಚು ಆದಾಯ ಬರುತ್ತಿದೆ. ಮೇಲಧಿಕಾರಿಗಳ ಗಮನಕ್ಕೆ ತಂದು ರುದ್ರಪಟ್ಟಣ, ಸೋಮನಹಳ್ಳಿ, ಬೆಳವಾಡಿ ಪ್ರಸರಣಾ ಕೇಂದ್ರದಿಂದ ಸಮರ್ಪಕವಾಗಿ ವಿದ್ಯುತ್ ಪೂರೈಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.


    ಒಂದೆರಡು ಕೃಷಿ ಪಂಪ್‌ಸೆಟ್ ಬದಲಿಗೆ ಮೂರ್ನಾಲ್ಕು ಪಂಪ್‌ಸೆಟ್‌ಗಳನ್ನು ಹೊಂದಿರುವ ಸ್ಥಳಕ್ಕೆ ಅಕ್ರಮ-ಸಕ್ರಮ ಯೋಜನೆಯಡಿ ವಿದ್ಯುತ್ ಪರಿವರ್ತಕ ಅಳವಡಿಸಲಾಗುವುದು. ಕೃಷಿ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡವರು ಮತ್ತು ಬಡವರ್ಗದ ಜನರು ಎನ್‌ಒಸಿ ಬದಲಿಗೆ ಮನೆಗೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ನೀಡಿದರೆ ಹೊಸ ಬೆಳಕು ಯೋಜನೆಯಡಿ ಉಚಿತವಾಗಿ ವಿದ್ಯುತ್ ಕಲ್ಪಿಸಲಾಗುವುದು. ಅರ್ಹರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
    ಅರಕಲಗೂಡು ಸೆಸ್ಕ್ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮಂಜುನಾಥ್, ಬಸವಾಪಟ್ಟಣ ಸೆಸ್ಕ್ ಕಿರಿಯ ಇಂಜಿನಿಯರ್ ಶ್ರೀಧರ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts