More

    ಸೆಪ್ಟೆಂಬರ್ ಕೊನೆಯಲ್ಲಿ ರೈತರ ಜಮೀನಿಗೆ ನೀರು

    ನಂಜನಗೂಡು; ನುಗು ಏತ ನೀರಾವರಿ ಯೋಜನೆ ಸೇರಿದಂತೆ ಸರ್ಕಾರದಿಂದ 823 ಕೋಟಿ ರೂ. ಅನುದಾನ ಪಡೆಯಲಾಗಿದ್ದು, ಶ್ವೇತಪತ್ರ ಹೊರಡಿಸಿಯೇ ಚುನಾವಣಾ ಅಖಾಡಕ್ಕೆ ಇಳಿಯುವುದಾಗಿ ಶಾಸಕ ಬಿ.ಹರ್ಷವರ್ಧನ್ ತಿಳಿಸಿದರು.

    ತಾಲೂಕಿನ ದೇವನೂರು ಶ್ರೀ ಗುರುಮಲ್ಲೇಶ್ವರ ದಾಸೋಗ ಮಠಕ್ಕೆ ಸೋಮವಾರ ಭೇಟಿ ನೀಡಿ ಮಹಾಂತ ಶ್ರೀಗಳಿಗೆ ಅಭಿವೃದ್ಧಿ ಕಾರ್ಯಗಳ ಶ್ವೇತ ಪತ್ರದ ಪ್ರತಿ ನೀಡಿ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

    ಪಂಚಾಯಿತಿವಾರು ನಡೆಸಲಾಗಿರುವ ಅಭಿವೃದ್ಧಿ ಕುರಿತ ಶ್ವೇತಪತ್ರವನ್ನು ದೇವನೂರು ಶ್ರೀಗಳ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಗಿದೆ. ಏ.18 ರಂದು ನಾಮಪತ್ರ ಸಲ್ಲಿಸುತ್ತಿದ್ದು, ಅದಕ್ಕೂ ಮುನ್ನ ಸಾರ್ವಜನಿಕವಾಗಿ ಶ್ವೇತಪತ್ರ ಬಿಡುಗಡೆ ಮಾಡಲಿದ್ದೇನೆ ಎಂದರು.

    ಸಂಸದ ಶ್ರೀನಿವಾಸಪ್ರಸಾದ್, ಶಾಸಕರ ನಿಧಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡಿದ ವಿಶೇಷ ಅನುದಾನ ಬಳಸಿ ಅಭಿವೃದ್ಧಿ ಕೈಗೊಳ್ಳಲಾಗಿದೆ. ರೈತರ ಬಹು ನಿರೀಕ್ಷಿತ ನುಗು ಏತನೀರಾವರಿ ಕಾಮಗಾರಿ ಶೇ.80 ಭಾಗ ಮುಗಿದಿದ್ದು ಸೆಪ್ಟೆಂಬರ್ ಕೊನೆಯ ವೇಳೆಗೆ ನಮ್ಮ ಭಾಗದ 15 ರಿಂದ 20 ಸಾವಿರ ರೈತರ ಜಮೀನುಗಳಿಗೆ ನೀರು ಹರಿಯಲಿದೆ. ಶ್ರೀಕಂಠೇಶ್ವರ ದೇವಾಲಯ ಆವರಣದಲ್ಲಿ ಭಕ್ತರ ಅನುಕೂಲಕ್ಕಾಗಿ 16.52 ಕೋಟಿ ರೂ. ವೆಚ್ಚದಲ್ಲಿ 75 ಕೊಠಡಿಗಳ ಅತಿಥಿಗೃಹ ನಿರ್ಮಾಣಕ್ಕಾಗಿ ನೀಲಿನಕ್ಷೆ ಸಿದ್ಧವಾಗಿದ್ದು, ಚುನಾವಣೆ ನಂತರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ನಿರ್ಮಾಣ ಕಾಮಗಾರಿ ಆರಂಭವಾಗಲಿದೆ ಎಂದರು.

    ದೊಡ್ಡಕವಲಂದೆ ಭಾಗದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಪೈಪ್‌ಲೈನ್ ಒಡೆದು ಹೋಗಿದ್ದು, ಯೋಜನೆಯ ಕೊನೆಯ ಗ್ರಾಮಗಳಿಗೆ ಕುಡಿಯುವ ನೀರು ಲಭ್ಯವಾಗುತ್ತಿರಲಿಲ್ಲ. 8 ಕೋಟಿ ರೂ. ವೆಚ್ಚದಲ್ಲಿ ಪೈಪ್‌ಲೈನ್ ಬದಲಿಸಿ ಕುಡಿಯುವ ನೀರು ಒದಗಿಸಲು ಕ್ರಮವಹಿಸಲಾಗಿದೆ ಎಂದರು.

    ಬಿಜೆಪಿ ಮಂಡಲ ಅಧ್ಯಕ್ಷ ಹೊರಳವಾಡಿ ಪಿ.ಮಹೇಶ್, ನಗರಾಧ್ಯಕ್ಷ ಶ್ರೀನಿವಾಸರೆಡ್ಡಿ, ನಗರಸಭಾಧ್ಯಕ್ಷ ಎಚ್.ಎಸ್.ಮಹದೇವ ಸ್ವಾಮಿ, ಜಿಪಂ ಮಾಜಿ ಸದಸ್ಯ ಸಿ.ಚಿಕ್ಕರಂಗನಾಯ್ಕ, ಮುಖಂಡರಾದ ಕೆಂಡಗಣ್ಣಪ್ಪ, ಶಿವಮೂರ್ತಿ, ಹೆಮ್ಮರಗಾಲ ಶಿವಣ್ಣ, ಗೋವರ್ಧನ್, ಸಣ್ಣಯ್ಯ, ಸಿದ್ದರಾಜು ಸೇರಿದಂತೆ ಹಲವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts