More

  ಸ್ಯಾಟಲೈಟ್ ಸಿಟಿಯನ್ನಾಗಿ ಮಾಡಲು ಸಂಕಲ್ಪ ಮಾಡೋಣ

  ನಂಜನಗೂಡು: ಸಂಸದ ವಿ.ಶ್ರೀನಿವಾಸಪ್ರಸಾದ್ ಅವರ ರಾಜಕೀಯ ಬದುಕು ಮತ್ತು ಸಂದೇಶಗಳು ನಮ್ಮೆಲ್ಲರಿಗೂ ಪ್ರೇರಣೆಯಾಗಿದ್ದು, ಅವರು ನಂಬಿದ್ದ ತತ್ವಾದರ್ಶಗಳನ್ನು ನಾವೆಲ್ಲರೂ ಮೈಗೂಡಿಕೊಳ್ಳುವ ಮೂಲಕ ಅವರ ಕನಸಿನಂತೆ ನಂಜನಗೂಡನ್ನು ಸ್ಯಾಟಲೈಟ್ ಸಿಟಿಯನ್ನಾಗಿ ಮಾಡುವ ನಿಟ್ಟಿನಲ್ಲಿ ನಾವೆಲ್ಲರೂ ಸಂಕಲ್ಪ ಮಾಡೋಣ ಎಂದು ಮಾಜಿ ಶಾಸಕ ಬಿ.ಹರ್ಷವರ್ಧನ್ ಹೇಳಿದರು.

  ನಗರದ ನಂದಿ ಕನ್ವೆನ್ಷನ್ ಹಾಲ್‌ನಲ್ಲಿ ಬಿಜೆಪಿ ವತಿಯಿಂದ ಗುರುವಾರ ಆಯೋಜಿಸಿದ್ದ ಸಂಸದ ವಿ.ಶ್ರೀನಿವಾಸಪ್ರಸಾದ್ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.

  ಚಾಮರಾಜನಗರವನ್ನು ಕರ್ಮಭೂಮಿಯನ್ನಾಗಿಸಿಕೊಂಡು 50 ವಷಗಳ ರಾಜಕೀಯ ಜೀವನವನ್ನು ನಡೆಸಿದ್ದ ವಿ.ಶ್ರೀನಿವಾಸ ಪ್ರಸಾದ್ ಅವರಿಗೆ ನಂಜನಗೂಡಿನ ಬಗ್ಗೆ ವಿಶೇಷ ಪ್ರೀತಿಯಿತ್ತು. ಸ್ಯಾಟಲೈಟ್ ಸಿಟಿಯಾಗಿ ಅಭಿವೃದ್ಧಿಪಡಿಸುವ ಗುರಿ ಹೊಂದಿದ್ದರು. ಆ ಕಾರಣಕ್ಕಾಗಿ ನಂಜನಗೂಡಿಗೆ ಬೇಕಾದ ಎಲ್ಲ ಮೂಲ ಯೋಜನೆಗಳನ್ನು ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ನಂಜನಗೂಡು ಅಭಿವೃದ್ಧಿ ಕುರಿತು ಸಾಕಷ್ಟು ಮಾರ್ಗದರ್ಶನ ನೀಡುತ್ತಿದ್ದರು. ಅವರ ಆಶಯದಂತೆ ಸರ್ವ ಜನಾಂಗಗಳ ಸಮುದಾಯ ಭವನಗಳ ಸಮುಚ್ಚಯ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ನಾವೆಲ್ಲರೂ ಸಣ್ಣಪುಟ್ಟ ವೈಷಮ್ಯ ಮರೆತು ಜತೆಯಾಗಿ ದುಡಿಯೋಣ ಎಂದರು.

  ಅವರ ನಿಧನದ ಬಳಿಕ ಮೈಸೂರು, ಚಾಮರಾಜನಗರ ಹಾಗೂ ಮಂಡ್ಯ ಸೇರಿದಂತೆ ಇತರ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಅಭಿಮಾನಿಗಳು ಅಂತಿಮ ದರ್ಶನ ಪಡೆದು ಪ್ರಸಾದ್ ಅವರ ಸಾಧನೆಗಳನ್ನು ಸ್ಮರಿಸಿದ್ದರು. ಇನ್ನು ರಾಜ್ಯ ಸರ್ಕಾರ ಹಾಗೂ ಮೈಸೂರು ಜಿಲ್ಲಾಡಳಿತ ವಿ.ಶ್ರೀನಿವಾಸಪ್ರಸಾದ್ ಅವರ ಅಂತ್ಯಸಂಸ್ಕಾರಕ್ಕೆ ಸಂಪೂರ್ಣ ಸಹಕಾರ ಹಾಗೂ ಅಗತ್ಯ ಭದ್ರತೆಯನ್ನು ನೀಡಿ ವ್ಯವಸ್ಥಿತವಾಗಿ ಅಂತಿಮ ವಿಧಿ-ವಿಧಾನಗಳು ನಡೆಯಲು ಸಹಕಾರ ನೀಡಿದ್ದಾರೆ. ಅವರಿಗೆ ನಮ್ಮ ಕುಟುಂಬದ ಪರವಾಗಿ ಧನ್ಯವಾದಗಳನ್ನು ತಿಳಿಸಿದ್ದೇವೆ ಎಂದು ಹೇಳಿದರು.

  ಸಕ್ರಿಯ ರಾಜಕಾರಣದಿಂದ ನಿವೃತ್ತರಾದ ಬಳಿಕ ಶ್ರೀನಿವಾಸಪ್ರಸಾದ್ ಅವರು ಸಂಸದರಾಗಿದ್ದ ಸಂದರ್ಭದಲ್ಲಿ ಏಳು ಪ್ರಧಾನಮಂತ್ರಿಗಳ ಒಡನಾಟದ ಬಗ್ಗೆ ಪುಸ್ತಕ ಬರೆಯುವ ಹಂಬಲವನ್ನು ಹೊಂದಿದ್ದರು. ದುರಾದೃಷ್ಟವಶಾತ್ ಅದು ನೆರವೇರಲಿಲ್ಲ. ಇನ್ನು 2023ರ ವಿಧಾನಸಭಾ ಚುನಾವಣೆಯಲ್ಲಿ ನನಗೆ ಸೋಲುಂಟಾದಾಗ ತೀವ್ರ ನೊಂದಿದ್ದ ಅವರು ಕೆಲ ದಿನಗಳ ಬಳಿಕ ನನಗೆ ಸಮಾಧಾನ ಹೇಳಿದ್ದಲ್ಲದೆ ಮುಂಬರುವ ದಿನಗಳಲ್ಲಿ ಖಂಡಿತಾ ಕ್ಷೇತ್ರದ ಜನರು ನಿನ್ನನ್ನು ಮತ್ತೊಮ್ಮೆ ಬೆಂಬಲಿಸಲಿದ್ದಾರೆ. ಧೃತಿಗೆಡುವುದು ಬೇಡ ಎಂದು ಧೈರ್ಯ ತುಂಬಿದ್ದರು. ಅವರೊಂದಿಗಿನ ಸುದೀರ್ಘ ಒಡನಾಟ ಹಾಗೂ ಮಾರ್ಗದರ್ಶನದಿಂದಾಗಿ ಪಕ್ಷದ ಕಾರ್ಯಕರ್ತರು ಹಾಗೂ ಪ್ರಸಾದ್ ಅವರ ಬೆಂಬಲಿಗರನ್ನು ಒಟ್ಟಿಗೆ ಕರೆದೊಯ್ಯುವ ಮೂಲಕ ಪಕ್ಷ ಸಂಘಟನೆ ಮಾಡುತ್ತೇನೆ ಎಂದು ಹೇಳಿದರು.

  ಜೆಡಿಎಸ್ ಜಿಲ್ಲಾಧ್ಯಕ್ಷ ಎನ್.ನರಸಿಂಹಸ್ವಾಮಿ ಮಾತನಾಡಿ, ನಮ್ಮನ್ನಗಲಿದ ಪ್ರಸಾದ್ ಅವರು ಪಕ್ಷಾತೀತವಾಗಿ ಜನಮನ್ನಣೆ ಪಡೆದಿದ್ದರು. ಅವರ ತತ್ವಾದರ್ಶಗಳನ್ನು ರೂಢಿಸಿಕೊಂಡು ಅವರ ಆಶಯದಂತೆ ರಾಜಕೀಯವಾಗಿ ಮುನ್ನಡೆಯಲು ಪ್ರಸಾದ್ ಅಳಿಯ ಮಾಜಿ ಶಾಸಕ ಬಿ.ಹರ್ಷವರ್ಧನ್ ಅವರಿಗೆ ಅಗತ್ಯ ಶಕ್ತಿಯನ್ನು ಕಾರ್ಯಕರ್ತರು ನೀಡಬೇಕಿದೆ ಎಂದು ಹೇಳಿದರು.

  ಶ್ರೀನಿವಾಸಪ್ರಸಾದ್ ಅವರ ದೀರ್ಘಕಾಲದ ಒಡನಾಡಿಗಳಾಗಿದ್ದ ಪ್ರಥಮದರ್ಜೆ ಗುತ್ತಿಗೆದಾರ ಯು.ಎನ್.ಪದ್ಮನಾಭರಾವ್, ಕುಂಬ್ರಹಳ್ಳಿ ಸುಬ್ಬಣ್ಣ, ಜಿಪಂ ಮಾಜಿ ಸದಸ್ಯರಾದ ಮಂಗಳಾ ಸೋಮಶೇಖರ್, ಸಿಂಧುವಳ್ಳಿ ಕೆಂಪಣ್ಣ, ಸಿ.ಚಿಕ್ಕರಂಗನಾಯಕ, ವಕೀಲ ನಂಜುಂಡಸ್ವಾಮಿ, ಬಾಲಚಂದ್ರು, ರಾಜ್ಯ ಕಾಂಪೋಸ್ಟ್ ನಿಗಮದ ಮಾಜಿ ಅಧ್ಯಕ್ಷ ಎಸ್.ಮಹದೇವಯ್ಯ, ಖಾದಿ ಗ್ರಾಮೋದ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಎನ್.ಆರ್.ಕೃಷ್ಣಪ್ಪಗೌಡ, ಹೆಮ್ಮರಗಾಲ ಸೋಮಣ್ಣ, ಮಂಡ್ಯ ಮಹದೇವ್ ಸೇರಿದಂತೆ ಹಲವರು ಮಾತನಾಡಿದರು.

  ಬಿಜೆಪಿ ಮಂಡಲ ಅಧ್ಯಕ್ಷ ಕೆಂಡಗಣ್ಣಪ್ಪ, ನಗರಾಧ್ಯಕ್ಷ ಸಿದ್ದರಾಜು, ಬಿಜೆಪಿ ಬಿಸಿಎಂ ಜಿಲ್ಲಾಧ್ಯಕ್ಷ ಬಾಲಚಂದ್ರ, ನಗರಸಭಾ ಸದಸ್ಯರಾದ ಮಹದೇವಸ್ವಾಮಿ, ಮಹದೇವಪ್ರಸಾದ್, ಕಪಿಲೇಶ್, ಮುಖಂಡರಾದ ಎನ್.ಮಹೇಶ್, ಎನ್.ಸಿ.ಬಸವಣ್ಣ, ಕ್ರಾಂತಿಕಾರಿ ಜಗದೀಶ್ ಉಪಸ್ಥಿತರಿದ್ದರು.
  ಸಭೆಯಲ್ಲಿ ಸಂಸದ ವಿ.ಶ್ರೀನಿವಾಸಪ್ರಸಾದ್‌ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು. ತಾಪಂ. ಮಾಜಿ ಸದಸ್ಯ ಬಿ.ಎಸ್.ರಾಮು ಕ್ರಾಂತಿಗೀತೆ ಹಾಡಿ ನಮನ ಸಲ್ಲಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts