More

    ಸುರಿಯದ ವರುಣ… ಅನ್ನದಾತ ಹೈರಾಣ..

    ಮುಂಡರಗಿ: ಪ್ರಸಕ್ತ ಮುಂಗಾರಿನಲ್ಲಿ ಸಮರ್ಪಕವಾಗಿ ಮಳೆಯಾಗದ ಕಾರಣ ಬಿತ್ತನೆ ಕಾರ್ಯಕ್ಕೆ ಹಿನ್ನಡೆಯಾಗುತ್ತಿದೆ. ಮುಂಗಾರು ಪ್ರಾರಂಭದಲ್ಲೇ ವರುಣನ ಕಣ್ಣಾಮುಚ್ಚಾಲೆ ಆಟವು ರೈತರನ್ನು ಆತಂಕಕ್ಕೆ ದೂಡಿದೆ. ಮುಂಗಾರು ಆರಂಭವಾಗಿದ್ದರೂ ಕೆಲವೆಡೆ ರೈತರು ಇನ್ನೂ ಬಿತ್ತನೆ ಕಾರ್ಯ ಕೈಗೊಂಡಿಲ್ಲ. ಜಮೀನುಗಳನ್ನು ಹದಗೊಳಿಸಿದ್ದು ಬಿತ್ತನೆಗಾಗಿ ಬೀಜ ಗೊಬ್ಬರ ಸಂಗ್ರಹಿಸಿಟ್ಟಿದ್ದಾರೆ. ನಾಲ್ಕೈದು ದಿನಗಳಿಂದ ಆಗಾಗ ಮೋಡ ಕವಿದ ವಾತಾವರಣವಿದ್ದು ಉತ್ತಮ ವರ್ಷಧಾರೆಯ ಲಕ್ಷಣಗಳು ಗೋಚರಿಸಿದರೂ ಮಳೆ ಸುರಿಯುತ್ತಿಲ್ಲ.

    ಪಟ್ಟಣ ಹಾಗೂ ವೆಂಕಟಾಪೂರ, ಹೈತಾಪುರ, ಹಳ್ಳಿಗುಡಿ, ಹಳ್ಳಿಕೇರಿ, ಹಾರೋಗೇರಿ, ಬಸಾಪುರ, ಬಾಗೇವಾಡಿ, ಜಾಲವಾಡಗಿ ಮೊದಲಾದ ಕಡೆಗಳಲ್ಲಿ ಅಲ್ಪಸ್ವಲ್ಪ ಮಳೆಯಾಗಿದೆ. ಹೀಗಾಗಿ, ಹೆಸರು, ಶೇಂಗಾ, ಗೋವಿನಜೋಳ ಮೊದಲಾದವುಗಳನ್ನು ಬಿತ್ತನೆ ಮಾಡಲಾಗಿದೆ. ಆದರೆ, ಬಿತ್ತನೆ ಮಾಡಿದ್ದ ಬೀಜವು ಚಿಗುರೊಡೆದಿದ್ದು ತೇವಾಂಶ ಕೊರತೆಯಿಂದ ಒಣಗುವ ಹಂತ ತಲುಪಿವೆ. ಭೂಮಿಗೆ ಬೀಜ ಹಾಕದ ರೈತರು ಆಕಾಶದತ್ತ ಮುಖ ಮಾಡಿದ್ದಾರೆ.

    ಮಳೆರಾಯ ಮುನಿಸಿಕೊಂಡಿದ್ದರಿಂದ ಮುಂಗಾರು ಬಿತ್ತನೆ ಪ್ರಮಾಣವು ಇಳಿಕೆಯಾಗಿದೆ. ಮಳೆಯಾಶ್ರಿತ ಒಣಬೇಸಾಯ ಜಮೀನಿನಲ್ಲಿ ಹೆಸರು 3576 ಹೆಕ್ಟೇರ್, ಗೋವಿನಜೋಳ 255 ಹೆಕ್ಟೇರ್, ಹೈಬ್ರಿಡ್ ಜೋಳ 154 ಹೆಕ್ಟೇರ್, ಸಜ್ಜೆ 13 ಹೆಕ್ಟೇರ್, ಶೇಂಗಾ 865 ಹೆಕ್ಟೇರ್, ಸೂರ್ಯಕಾಂತಿ 63 ಹೆಕ್ಟೇರ್, ತೊಗರಿ 198 ಹೆಕ್ಟೇರ್ ಕ್ಷೇತ್ರದಲ್ಲಿ ಬಿತ್ತನೆ ಮಾಡಲಾಗಿದೆ.

    ಮುಂಗಾರು ಹಂಗಾಮಿನಲ್ಲಿ ಒಟ್ಟು 41,400 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ. ಸದ್ಯ ತಾಲೂಕಿನಲ್ಲಿ ಮಳೆಯಾಗದ ಕಾರಣ ಇದುವರೆಗೆ 5,124 ಹೆಕ್ಟೇರ್ ಮಾತ್ರ ಬಿತ್ತನೆಯಾಗಿದೆ. ಶೇಂಗಾ, ಸೂರ್ಯಕಾಂತಿ, ಗೋವಿನಜೋಳ ಬೀಜವನ್ನು ಆಗಸ್ಟ್​ವರೆಗೂ ಬಿತ್ತನೆ ಮಾಡಬಹುದಾಗಿದೆ. ಆದರೆ, ಬಿತ್ತನೆ ಹಿನ್ನಡೆಯಾದರೆ ಬೆಳೆಗೆ ರೋಗ ಬೀಳುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತದೆ.

    ತಾಲೂಕಿನೆಲ್ಲೆಡೆ ವಾಡಿಕೆಗಿಂತಲೂ ಮಳೆ ಕಡಿಮೆ ಸುರಿದಿದೆ. ಏಪ್ರಿಲ್​ನಲ್ಲಿ 37ಮಿ.ಮೀ. ವಾಡಿಕೆ ಮಳೆ ಇದ್ದು, ಸುರಿದಿದ್ದು 18 ಮಿ.ಮೀ, ಮೇ ತಿಂಗಳಲ್ಲಿ 65 ಮಿ.ಮೀ ವಾಡಿಕೆ ಮಳೆ ಇದ್ದು 78 ಮಿ.ಮೀ. ಸುರಿದಿದೆ. ಜೂ. 15ರವರೆಗೆ 38 ಮಿ.ಮೀ. ವಾಡಿಕೆ ಮಳೆ ಇದ್ದು ಸುರಿದಿದ್ದು 23 ಮಿ.ಮೀ.

    ಮುಂಗಾರು ಆರಂಭದಲ್ಲಿ ಸುರಿದ ಅಲ್ಪಸ್ವಲ್ಪ ಮಳೆಯಿಂದ ಬಿತ್ತನೆ ಮಾಡಿದ್ದೇವೆ. ಆದರೆ, ಈಗ ಬೀಜವು ಚಿಗುರೊಡೆದಿದ್ದು ತೇವಾಂಶ ಕೊರತೆಯಾಗಿದೆ. ಮಳೆಯಾದರೆ ಬೆಳೆ ಉಳಿಸಿಕೊಳ್ಳಬಹುದು. ಕೆಲವೆಡೆ ಉತ್ತಮ ಹಸಿ ಮಳೆಯಾಗದ ಕಾರಣ ಬಿತ್ತನೆ ಕಾರ್ಯ ಕೈಗೊಂಡಿಲ್ಲ. ಸತತ ಬರಗಾಲದಿಂದ ತತ್ತರಿಸಿದ್ದೇವೆ. ಈ ವರ್ಷವಾದರೂ ಉತ್ತಮ ಬೆಳೆ ತೆಗೆಯುವ ನಿರೀಕ್ಷೆಯಲ್ಲಿದ್ದೇವೆ. ವರುಣ ಕೃಪೆ ತೋರಬೇಕಿದೆ.

    | ಪರುಶುರಾಮ ಹಟ್ಟಿ, ರೈತ

    ಇಷ್ಟೊತ್ತಿಗೆ ಬಿತ್ತನೆ ಕಾರ್ಯ ಚುರುಕಾಗಬೇಕಿತ್ತು. ಆದರೆ, ಮಳೆಯಾಗದ್ದರಿಂದ ಬಿತ್ತನೆ ಕಾರ್ಯ ಕೈಗೊಂಡಿಲ್ಲ. ಕೆಲವೆಡೆ ಮಾತ್ರ ರೈತರು ಹೆಸರು, ಶೇಂಗಾ ಬಿತ್ತನೆ ಮಾಡಿದ್ದಾರೆ. ಬಿತ್ತನೆ ಬೀಜ ಕೊರತೆಯಾಗದಂತೆ ನೋಡಿಕೊಳ್ಳಲಾಗಿದೆ. ರೈತರು ತಮ್ಮ ಜಮೀನು ಹದಗೊಳಿಸಿ ಬೀಜಗಳನ್ನು ಸಂಗ್ರಹಿಸಿಟ್ಟಿದ್ದಾರೆ. ಉತ್ತಮ ಮಳೆ ಸುರಿದ ತಕ್ಷಣ ಬಿತ್ತನೆ ಕಾರ್ಯ ಕೈಗೊಳ್ಳಲಿದ್ದಾರೆ.

    | ಪ್ರಮೋದ ತುಂಬಳ, ಸಹಾಯಕ ಕೃಷಿ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts