More

    ಸುಕ್ಕಿನ ಮೊಗದಲ್ಲಿ ನಗುವಿನ ಚೇತನ

    ಕಲಬುರಗಿ: ಮುಖದ ಮೇಲಿನ ಚರ್ಮ ಸುಕ್ಕಾಗಿ, ಬಾಯಿಯಲ್ಲಿ ಹಲ್ಲಿಲ್ಲದಿದ್ದರೂ ಮೊಗದಲ್ಲಿ ಮೂಡುತ್ತಿದ್ದ ಒಮ್ಮೆ ನಗು-ಮತ್ತೊಮ್ಮೆ ನೋವಿನ ಗೆರೆಗಳು. ಮಾಸ್ಕ್ ಎಂಬ ಮಾಯೆ ಅವರ ಬೊಚ್ಚು ಬಾಯಿ ಮುಚ್ಚಿ ಮರೆಯಾಗಿಸಿದ ನಗೆ, ಶಿಷ್ಟಾಚಾರದಂತೆ ಸುಳಿಯದ ಆಮಂತ್ರಣ ಪತ್ರಿಕೆಯಲ್ಲಿದ್ದ ಹೆಸರಿನ ಅತಿಥಿಗಳು…
    ಹಿರಿಯರ ಸೇವೆಯಲ್ಲಿ ತೊಡಗಿರುವ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಡಿ ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆಗಳು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯಲ್ಲಿ ಕಂಡುಬಂದ ದೃಶ್ಯಗಳಿವು.
    ಬೊಚ್ಚು ಬಾಯಿ, ಸುಕ್ಕಿನ ಮೊಗದಲ್ಲಿ ಕಂಡ ಕೊಂಚ ನಗುವಿನ ಚೇತನ ಜತೆಗೆ ನಾವೂ ಒಂದು ದಿನ ಮುದುಕರಾಗುತ್ತೇವೆ. ಇಳಿ ವಯಸ್ಸಿನಲ್ಲಿ ಚೆನ್ನಾಗಿರಲು ಈಗ ನಮ್ಮ ಹಿರಿಯರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಸಂದೇಶ ಸಹ ಈ ಕಾರ್ಯಕ್ರಮ ರವಾನಿಸಿತು. ತಮಗೆ ಪಿಂಚಣಿ ಬರುತ್ತಿಲ್ಲ ಎಂದು ಹೇಳಿಕೊಂಡ ಕೆಲವರಿಗೆ ಸ್ಥಳದಲ್ಲಿದ್ದ ಎನ್ಜಿಒದವರಿಂದ ಜಿಲ್ಲಾಡಳಿತ ಗಮನಕ್ಕೆ ತಂದು ಕೊಡಿಸುವ ಅಭಯ ಸಿಕ್ಕಿತು.
    ಕಾರ್ಯಕ್ರಮ ಉದ್ಘಾಟಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಭಾರಿ ಉಪ ನಿದರ್ೇಶಕ ಶಿವಶರಣಪ್ಪ ಮಾತನಾಡಿ, ಮನೆಯ ಹಿರಿಯರನ್ನು ಗೌರವ ಮತ್ತು ಪ್ರೀತಿಯಿಂದ ನೋಡಿಕೊಳ್ಳುವುದು ಪ್ರತಿಯೊಬ್ಬರ ಹೊಣೆ. ಮಕ್ಕಳು ಅಥವಾ ಬೇರೆಯವರು ಅವರಿಗೆ ಇಲ್ಲದ ತೊಂದರೆ ಕೊಡುವುದು, ಮನೆಯಿಂದ ಹೊರಗೆ ಹಾಕುವುದನ್ನು ಮಾಡಿದರೆ ಕಾನೂನು ಅಸ್ತ್ರ ಪ್ರಯೋಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
    ಹಿರಿಯರ ಯೋಗಕ್ಷೇಮಕ್ಕಾಗಿಯೇ ಸರ್ಕಾರ ಹಲವು ಕಾಯ್ದೆ-ಕಾನೂನು, ವೃದ್ಧಾಪ್ಯ ವೇತನ ಇತರ ಯೋಜನೆಗಳನ್ನು ಜಾರಿಗೆ ತಂದಿದೆ. ಇಲಾಖೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಹಿರಿಯರಿಗೆ ಸಿಗಬೇಕಿರುವ ಸವಲತ್ತುಗಳನ್ನು ತಲುಪಿಸಲು ಶ್ರಮಿಸಬೇಕು ಎಂದು ಸಲಹೆ ನೀಡಿದರು.
    ಹಿರಿಯ ನ್ಯಾಯವಾದಿ ಶಿವಶರಣಪ್ಪ ರಾಜೆ ಮಾತನಾಡಿ, ಹಿರಿಯರನ್ನು ನಡೆಸಿಕೊಳ್ಳುವ ರೀತಿ ಮಾದರಿ ಆಗಿರಬೇಕು. ವಿನಾಕಾರಣ ಅವರಿಗೆ ತೊಂದರೆ ನೀಡಿದರೆ ಮಕ್ಕಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿದೆ. ಕಾನೂನು ಇದೆ ಎನ್ನುವುದಕ್ಕಿಂತ ಅವರು ನಮ್ಮ ಹೆತ್ತವರು. ಅವರನ್ನು ಚೆನ್ನಾಗಿ ನೋಡಿಕೊಳ್ಳುವ ಹೊಣೆಯನ್ನು ಪ್ರತಿಯೊಬ್ಬರೂ ನಿಭಾಯಿಸಬೇಕು ಎಂದು ಕಿವಿಮಾತು ಹೇಳಿದರು.
    ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ಸಾದಿಕ್ ಹುಸೇನ್, ನಿವೃತ್ತ ನೌಕರರ ಸಂಘದ ಉಪಾಧ್ಯಕ್ಷ, ಅಧೀಕ್ಷಕರಾದ ವೆಂಕಟೇಶ ದೇಶಪಾಂಡೆ ಮತ್ತು ಸಂಗಮ್ಮ, ಮಾರ್ಗದರ್ಶಿ ಸಂಸ್ಥೆ ನಿರ್ದೇಶಕ ಆನಂದರಾಜ, ಸಾಮಾಜಿಕ ಕಾರ್ಯಕರ್ತರಾದ ಮಸ್ತಾನ್ ಬಿರಾದಾರ, ಮೌಲಾ ಪಟೇಲ್, ಬಾಲಾಜಿ ಪಾಟೀಲ್, ಪ್ರಕಾಶ ಜಾಧವ್, ಅಮರೇಶ, ಆಂಜನೇಯ ಇತರರಿದ್ದರು. ಪ್ರಕಾಶ ಭಜಂತ್ರಿ ನಿರೂಪಣೆ ಮಾಡಿ ವಂದಿಸಿದರು.

    ಅವಿಭಕ್ತ ಕುಟುಂಟಗಳ ಸಂಖ್ಯೆ ಕಡಿಮೆ ಆಗುತ್ತಿರುವುದರಿಂದ ಹಿರಿಯರಿಲ್ಲದ ಮನೆಗಳ ಸಂಖ್ಯೆಯೂ ಹೆಚ್ಚುತ್ತಿದೆ. ಅದರಲ್ಲೂ ನಗರ ಪ್ರದೇಶದಲ್ಲಿ ಹಿರಿಯ ಜೀವಿಗಳಿಲ್ಲದ ಮನೆಗಳ ಪ್ರಮಾಣ ಮಿತಿಮೀರಿ ಏರಿಕೆ ಆಗುತ್ತಿರುವುದು ಅತಂಕಕಾರಿ ಸಂಗತಿ. ಇದರಿಂದ ಹಿರಿಯರ ಜತೆ ಬೆಳೆಯವ ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ.
    | ಶಿವಶರಣಪ್ಪಉಪ ನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts