More

    ಸಿಹಿ ಉಳ್ಳಾಗಡ್ಡಿಗೆ ಪರಿಹಾರಧನ ನೀಡಿ

    ಕುಮಟಾ: ಕೀಟ ಬಾಧೆ ತಗುಲಿ ಹಾನಿ ಅನುಭವಿಸಿರುವ ತಾಲೂಕಿನ ಸಿಹಿ ಉಳ್ಳಾಗಡ್ಡಿ ಬೆಳೆಗಾರರಿಗೆ ಸರ್ಕಾರ ಕೂಡಲೇ ಪರಿಹಾರಧನ ನೀಡಬೇಕು ಎಂದು ಒತ್ತಾಯಿಸಿ ಉಳ್ಳಾಗಡ್ಡಿ ಬೆಳೆಗಾರರು ತಹಸೀಲ್ದಾರ್ ಕಚೇರಿ ನೌಕರನ ಮೂಲಕ ಸೋಮವಾರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

    ಈ ವೇಳೆ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ, ತಾಲೂಕಿನ ವನ್ನಳ್ಳಿ, ಹಂದಿಗೋಣ, ಧಾರೇಶ್ವರ, ಸುವರ್ಣಗದ್ದೆ ಇತರ ಭಾಗದಲ್ಲಿ ಸಿಹಿ ಉಳ್ಳಾಗಡ್ಡಿ ಬೆಳೆಯನ್ನೇ ನಂಬಿ ರೈತರು ಬದುಕು ನಡೆಸುತ್ತಿದ್ದಾರೆ. ಇಲ್ಲಿನ ಸಿಹಿ ಉಳ್ಳಾಗಡ್ಡಿಗೆ ಉತ್ತಮ ಬೇಡಿಕೆಯೂ ಇದೆ. ಆದರೆ, ಕಳೆದ ಕೆಲವು ವರ್ಷಗಳಿಂದ ಉಳ್ಳಾಗಡ್ಡಿಗೆ ಕೀಟಬಾಧೆ ಹಾಗೂ ಹಾವು ಸುಳಿರೋಗದಂತಹ ಸಮಸ್ಯೆಗಳು ಕಾಡುತ್ತಿವೆ. ರೈತರು ಈ ವಿಷಯವನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಆದರೆ, ಒಮ್ಮೆಯೂ ಮಣ್ಣು ಪರೀಕ್ಷೆಯಾಗಲೀ ಕೀಟನಾಶಕ ಇತರ ಸೂಕ್ತ ಔಷಧ ವಿತರಣೆಯನ್ನಾಗಲಿ ಮಾಡಿಲ್ಲ ಎಂದು ಆರೋಪಿಸಿದರು.

    ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕೂಡಲೇ ಬೆಳೆ ಹಾನಿಯ ಸಮೀಕ್ಷೆ ನಡೆಸಿ ಸೂಕ್ತ ಔಷಧ ಹಾಗೂ ಹಾನಿ ಪರಿಹಾರಧನ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

    ಸ್ಥಳದಲ್ಲಿದ್ದ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಚೇತನ ನಾಯ್ಕ ಪ್ರತಿಕ್ರಿಯಿಸಿ, ಈಗಾಗಲೇ ವನ್ನಳ್ಳಿ ಭಾಗದಲ್ಲಿ ಉಳ್ಳಾಗಡ್ಡಿಗೆ ಕಾಡಿದ ಹಾವು ಸುಳಿ ರೋಗ ತಡೆ ಬಗ್ಗೆ ಸ್ಥಳದಲ್ಲೇ ತರಬೇತಿ ಶಿಬಿರ ಮಾಡಿದ್ದೇವೆ. ಅಳ್ವೇಕೋಡಿ, ಹಂದಿಗೋಣ ಭಾಗಕ್ಕೂ ಭೇಟಿ ನೀಡಿ ರೈತರಿಗೆ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದೇವೆ. ಅಲ್ಲದೆ, ರೋಗಬಾಧೆಯ ಸಮೀಕ್ಷೆ ಮಾಡಿ ಸರ್ಕಾರಕ್ಕೆ ವರದಿಯನ್ನೂ ಕೊಟ್ಟಿದ್ದೇವೆ ಎಂದರು.

    ಕೆಲ ವರ್ಷದ ಹಿಂದೆ ಬೆಳೆ ಹಾನಿ ಹಾವು ಸುಳಿರೋಗದ ಬಗ್ಗೆ ಹಂದಿಗೋಣದಲ್ಲಿ ತಜ್ಞರಿಂದ ಪ್ರಾಯೋಗಿಕ ಪರೀಕ್ಷೆ ನಡೆಸುವ ಮೂಲಕ ರೈತರಿಗೆ ಮಾರ್ಗದರ್ಶನ ನೀಡಲಾಗಿದೆ. ರೈತರ ಒತ್ತಾಯದ ಮೇರೆಗೆ ಒಂದೆರಡು ದಿನಗಳಲ್ಲಿ ಅಳ್ವೇಕೋಡಿಯಲ್ಲಿ ರೈತರ ಸಭೆ ನಡೆಸಲಾಗುವುದು ಎಂದು ಹೇಳಿದರು. ತೋಟಗಾರಿಕೆ ಅಧಿಕಾರಿ ಎಚ್.ಎಸ್. ಪಟಗಾರ, ಕಂದಾಯ ಅಧಿಕಾರಿ ವಸಂತ ಸಾವಂತ, ಕಲಭಾಗ ಪಂಚಾಯಿತಿ ಅಧ್ಯಕ್ಷ ವಿರೂಪಾಕ್ಷ ನಾಯ್ಕ, ಈರುಳ್ಳಿ ಬೆಳೆಗಾರರಾದ ರಾಮ ಪಟಗಾರ, ತಿಮ್ಮ ಪಟಗಾರ, ನಾಗಪ್ಪ ಗಾವಡಿ, ಲಿಂಗಪ್ಪ ಗಾವಡಿ, ಸುಶೀಲಾ ಗಾವಡಿ, ಲತಾ ಗಾವಡಿ, ನೇತ್ರಾವತಿ ಗಾವಡಿ, ದೇವು ಪಟಗಾರ, ನಾರಾಯಣ ಪಟಗಾರ, ಕಾಶೀನಾಥ ನಾಗೇಕರ, ವಿನಾಯಕ ಪಟಗಾರ ಸೇರಿ ವಿವಿಧ ಗ್ರಾಮಗಳ ನೂರಾರು ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts