More

    ಸಿಗದ ಮಾಸಾಶನ, ಸಂಕಷ್ಟದಲ್ಲಿ ಮಾಜಿ ಪೈಲ್ವಾನರ ಜೀವನ

    ಬೆಳಗಾವಿ: ಅನುದಾನ ಕೊರತೆಯಿಂದಾಗಿ ಜಿಲ್ಲೆಯಲ್ಲಿ ಕಳೆದ 6 ತಿಂಗಳಿಂದ ಮಾಜಿ ಕುಸ್ತಿಪಟುಗಳಿಗೆ ಮಾಸಾಶನ ನೀಡಿಲ್ಲ. ಹಾಗಾಗಿ ಕರೊನಾ ಸಂಕಷ್ಟ ಸಮಯದಲ್ಲಿ ಪೈಲ್ವಾನರು ತಮ್ಮ ಕುಟುಂಬ ನಿರ್ವಹಣೆ ಮಾಡಲಾಗದೆ ಹೆಣಗಾಡುತ್ತಿದ್ದಾರೆ.

    ರಾಷ್ಟ್ರಮಟ್ಟದ ಮಾಜಿ ಕುಸ್ತಿಪಟುಗಳಿಗೆ ಮಾಸಿಕ 3 ಸಾವಿರ ರೂ., ರಾಜ್ಯಮಟ್ಟದವರಿಗೆ 2,500 ರೂ. ಮಾಸಾಶನ ನೀಡಲಾಗುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿ 62 ರಾಷ್ಟ್ರಮಟ್ಟದ ಕುಸ್ತಿಪಟುಗಳು, 116 ರಾಜ್ಯಮಟ್ಟದ ಕುಸ್ತಿಪಟುಗಳು ಮಾಸಾಶನ ಪಡೆಯುತ್ತಿದ್ದಾರೆ. 2021ರ ಜನವರಿವರೆಗಿನ ಮಾಸಾಶನ ಸಿಕ್ಕಿದೆ.

    ಕುಸ್ತಿಪಟುಗಳು ಕಂಗಾಲು: ಮಹಾರಾಷ್ಟ್ರ ಹಾಗೂ ಗೋವಾದೊಂದಿಗೆ ಗಡಿ ಹಂಚಿಕೊಂಡಿರುವ ಬೆಳಗಾವಿ ಜಿಲ್ಲೆಯು ಕುಸ್ತಿಯಲ್ಲಿ ಇಂದಿಗೂ ತನ್ನ ಖದರ್ ಉಳಿಸಿಕೊಂಡಿದೆ. ಗಡಿನಾಡಿನ ಜಟ್ಟಿಗಳು ರಾಜ್ಯ ಮಾತ್ರವಲ್ಲದೆ, ಹೊರರಾಜ್ಯದ ‘ಕುಸ್ತಿ ಕಣ’ಗಳಲ್ಲೂ ಗೆಲುವು ಸಾಧಿಸುತ್ತ ಬಂದಿದ್ದಾರೆ. ಇವರಲ್ಲಿ ಆರ್ಥಿಕವಾಗಿ ಹಿಂದುಳಿದ ಹಾಗೂ 50 ವರ್ಷ ಮೇಲ್ಪಟ್ಟ ಮಾಜಿ ಕುಸ್ತಿಪಟುಗಳು ಸರ್ಕಾರದ ಮಾಸಾಶನವನ್ನೇ ನೆಚ್ಚಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಕೆಲವರು ಆರೋಗ್ಯ ಸಮಸ್ಯೆಯನ್ನೂ ಎದುರಿಸುತ್ತಿದ್ದಾರೆ. ಆದರೆ, ಸಕಾಲಕ್ಕೆ ಸೌಲಭ್ಯ ಸಿಗದೆ ಕಂಗಾಲಾಗಿದ್ದಾರೆ.

    ಕೂಲಿ ಮಾಡುತ್ತಿರುವ ಕುಸ್ತಿಪಟುಗಳು: ನಾನು, ನನ್ನ ಇಬ್ಬರು ಮಕ್ಕಳು ರಾಷ್ಟ್ರಮಟ್ಟದ ಕುಸ್ತಿಪಟುಗಳು. ಮಾಸಾಶನ ಬಾರದ್ದರಿಂದ ಆರ್ಥಿಕ ಸಮಸ್ಯೆ ಎದುರಾಗಿದೆ. ಹಾಗಾಗಿ ಹಿರಿಯ ಮಗನೊಂದಿಗೆ ಕೂಲಿ ಕೆಲಸ ಮಾಡುತ್ತ ಬದುಕಿನ ಬಂಡಿ ದೂಡುತ್ತಿದ್ದೇನೆ. ಕೋವಿಡ್ ಸಂಕಷ್ಟ ಕಾಲದಲ್ಲೂ ಅಗತ್ಯ ಸುರಕ್ಷತಾ ಕ್ರಮ ಎದುರಿಸಿ, ನಿತ್ಯವೂ ತಾಲೀಮು ಅಭ್ಯಾಸ ನಡೆಸುತ್ತಿದ್ದೇವೆ. ಸಕಾಲಕ್ಕೆ ಮಾಸಾಶನ ಸಿಕ್ಕರೆ ಅನುಕೂಲವಾಗಲಿದೆ ಎನ್ನುತ್ತಾರೆ ಸವದತ್ತಿ ತಾಲೂಕಿನ ಉಗರಗೋಳದ ಮಾಜಿ ಕುಸ್ತಿಪಟು ರಾಜೇಸಾಬ್ ಬೇವಿನಗಿಡದ.

    ಅನುದಾನ ಬಿಡುಗಡೆ ಮಾಡಿ: ನನ್ನದು ಒಂದು ಎಕರೆ ಒಣಬೇಸಾಯ ಭೂಮಿ ಇದೆ. ಆದರೆ, ಉತ್ತಮ ಸಲು ಬರುತ್ತಿಲ್ಲ. ಆಗಾಗ ಅನಾರೋಗ್ಯ ಸಮಸ್ಯೆ ಕಾಡುತ್ತಲೇ ಇದೆ. ಮಾಸಾಶನ ಬಾರದ್ದರಿಂದ ಸಾಕಷ್ಟು ಸಮಸ್ಯೆಯಾಗಿದೆ. ಸರ್ಕಾರ ತ್ವರಿತವಾಗಿ ಅನುದಾನ ಬಿಡುಗಡೆಗೊಳಿಬೇಕು ಎಂದು ದಢೇರಕೊಪ್ಪದ ಯಲ್ಲಪ್ಪ ನಂದೆಣ್ಣವರ ಒತ್ತಾಯಿಸುತ್ತಾರೆ.

    ಸಾವಿರಾರು ಕುಸ್ತಿಪಟುಗಳು ಅತಂತ್ರ

    ಮಾಸಾಶನ ಸಿಗದೆ ಮಾಜಿ ಪೈಲ್ವಾನರು ಪರದಾಡುತ್ತಿದ್ದರೆ, ಇತ್ತ ಕುಸ್ತಿ ಪಂದ್ಯಾವಳಿಗಳಲ್ಲಿ ಬರುವ ನಗದು ಬಹುಮಾನವನ್ನೇ ನೆಚ್ಚಿಕೊಂಡು ಬದುಕು ಸಾಗಿಸುತ್ತಿದ್ದ ಬೆಳಗಾವಿ ಜಿಲ್ಲೆಯ ಸಾವಿರಾರು ಪೈಲ್ವಾನರು ಈಗ ಅತಂತ್ರರಾಗಿದ್ದಾರೆ. ಪ್ರತಿವರ್ಷ ಕಿತ್ತೂರು ಚನ್ನಮ್ಮ ಉತ್ಸವ, ಬೆಳವಡಿ ಮಲ್ಲಮ್ಮ ಉತ್ಸವ, ಸಂಗೊಳ್ಳಿ ರಾಯಣ್ಣ ಉತ್ಸವ ಹಾಗೂ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಜರುಗುವ ಜಾತ್ರಾ ಮಹೋತ್ಸವಗಳಲ್ಲೂ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗುತ್ತಿತ್ತು. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಒಂದೂವರೆ ವರ್ಷದಿಂದ ಎಲ್ಲಿಯೂ ಕುಸ್ತಿ ಪಂದ್ಯಾವಳಿ ನಡೆದಿಲ್ಲ. ಕರೊನಾ ಹಾವಳಿ ತಗ್ಗಿದ್ದರೂ ಗರಡಿಮನೆ ತೆರೆದಿಲ್ಲ. ಹಾಗಾಗಿ ಪೈಲ್ವಾನರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಕುಸ್ತಿಪಟುಗಳಿಗೆ ಪೌಷ್ಟಿಕ ಆಹಾರ ಬೇಕಾಗುತ್ತದೆ. ಆದರೆ, ಕುಸ್ತಿ ಪಂದ್ಯ ನಡೆಯದ್ದರಿಂದ ದೈಹಿಕ ಸಾಮರ್ಥ್ಯ ಕಾಪಾಡಿಕೊಳ್ಳಲು ಬೇಕಾಗುವ ಆಹಾರ ಸೇವನೆಗೂ ಈಗ ತೊಡಕಾಗುತ್ತಿದೆ. ಕೋವಿಡ್ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ದಿಕ್ಕೇ ತೋಚದಾಗಿದೆ. ಸರ್ಕಾರ ನಮಗೂ ಆರ್ಥಿಕ ನೆರವು ೋಷಿಸಬೇಕು ಎನ್ನುತ್ತಾರೆ ಖಾನಾಪುರ ತಾಲೂಕಿನ ಇಟಗಿಯ ಪೈಲ್ವಾನರಾದ ಅಡಿವೆಪ್ಪ ಕರಮಲ್ಲನವರ, ಯುಸ್ೂ ಕಿತ್ತೂರ.

    ಮಾಜಿ ಕುಸ್ತಿಪಟುಗಳಿಗೆ 6 ತಿಂಗಳ ಮಾಸಾಶನ ನೀಡಲು ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ಜಿಲ್ಲೆಯ ಉಳಿದ ಕುಸ್ತಿಪಟುಗಳು ತಮಗೆ ಆರ್ಥಿಕ ನೆರವು ಒದಗಿಸುವಂತೆ ಕೋರಿದ್ದು, ಅವರ ಬೇಡಿಕೆಯನ್ನೂ ಸರ್ಕಾರದ ಗಮನಕ್ಕೆ ತರುತ್ತೇನೆ.
    | ಬಸವರಾಜ ಮಿಲ್ಲಾನಟ್ಟಿ ಪ್ರಭಾರ ಉಪನಿರ್ದೇಶಕ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಬೆಳಗಾವಿ

    | ಇಮಾಮಹುಸೇನ್ ಗೂಡುನವರ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts