More

    ಸಿಐಡಿ ತನಿಖೆ ನಡೆಯುತ್ತಿದ್ದಾಗಲೇ ದೀಪಕ್ ಪತ್ನಿ ಆತ್ಮಹತ್ಯೆ

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

    ತಾಲೂಕಿನ ಗಂಗಿವಾಳ ಗ್ರಾಮ ಪಂಚಾಯಿತಿ ಸದಸ್ಯ ದೀಪಕ ಪಟದಾರಿ ಹತೆ್ಯೆ ಪ್ರಕರಣವನ್ನು ಸಿಐಡಿ ತನಿಖೆ ನಡೆಸುತ್ತಿದ್ದಾಗಲೇ ದೀಪಕ್ ಪತ್ನಿ ಪುಷ್ಪಾ, ನವನಗರದ ಮನೆಯೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ನವನಗರದ ಬಾಡಿಗೆ ಮನೆಯಲ್ಲಿ ಪುಷ್ಪಾ, ತನ್ನಿಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು. ಬುಧವಾರ ರಾತ್ರಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    5 ವರ್ಷದ ಹಿಂದೆ ದೀಪಕ, ಮೇಟಿ ಕುಟುಂಬದ ಪುಷ್ಪಾ ಎನ್ನುವವರನ್ನು ಪ್ರೀತಿಸಿ ಮದುವೆ ಆಗಿದ್ದರು. ಇದಕ್ಕೆ ಹುಡುಗಿ ಮನೆಯವರ ಸಮ್ಮತಿ ಇರಲಿಲ್ಲ. ಇತ್ತೀಚೆಗೆ ರಾಯನಾಳ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಮೇಲೆ ಅವಿಶ್ವಾಸ ನಿರ್ಣಯ ಮಂಡಿಸಲಾಗಿತ್ತು. ಇದೇ ವಿಚಾರವಾಗಿ ಆಕ್ರೋಶಗೊಂಡು, ಆರೋಪಿಗಳು ದೀಪಕನನ್ನು ಜು. 4ರಂದು ಹತ್ಯೆಗೈದಿದ್ದಾರೆ ಎಂದು ಆರೋಪಿಸಿ ದೀಪಕನ ಸಹೋದರ ಸಂಜಯ ಪಟದಾರಿ, ಹಳೇ ಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪೊಲೀಸರು, ಐವರು ಆರೋಪಿಗಳನ್ನು ಈಗಾಗಲೇ ಬಂಧಿಸಿದ್ದಾರೆ. ಮೂವರು ಆರೋಪಿಗಳು ನಾಪತ್ತೆಯಾಗಿದ್ದಾರೆ.

    ‘‘ಈ ಪ್ರಕರಣದಲ್ಲಿ ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಮೂವರು ಪೊಲೀಸ್ ಸಿಬ್ಬಂದಿಯೇ ಕೊಲೆ ಪ್ರಕರಣದ ಸೂತ್ರಧಾರಿಗಳಾಗಿದ್ದು, ತನಿಖೆ ದಾರಿ ತಪ್ಪುತ್ತಿದೆ. ಈ ಕಾರಣಕ್ಕಾಗಿ ಪ್ರಕರಣವನ್ನು ಸಿಐಡಿಗೆ ಒಪ್ಪಿಸಬೇಕೆಂದು’ ಕೆಲ ದಿನಗಳ ಹಿಂದೆ ಪುಷ್ಪಾ, ಮಾಧ್ಯಮದ ಮೂಲಕ ಒತ್ತಾಯಿಸಿದ್ದರು. ಬಳಿಕ ಪ್ರಕರಣವನ್ನು ಸಿಐಡಿಗೆ ಒಪ್ಪಿಸಲಾಗಿತ್ತು. ಕಳೆದೆರಡು ದಿನಗಳಿಂದ ಸಿಐಡಿ ತಂಡ ತನಿಖೆಯನ್ನೂ ಆರಂಭಿಸಿತ್ತು. ಈ ಮಧ್ಯೆ ಪುಷ್ಪಾ ಆತ್ಮಹತ್ಯೆಗೆ ಶರಣಾಗಿದ್ದು, ಅಚ್ಚರಿ ಮತ್ತು ಅನುಮಾನ ಮೂಡಿಸಿದೆ. ನವನಗರ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts