More

    ಸಿಎಂ ಸಹಿತ ಗಣ್ಯರ ಸ್ವಾಗತಕ್ಕೆ ಕುಡ್ಲ ಸಜ್ಜು


    ಮಂಗಳೂರು: ನಗರದಲ್ಲಿ 5ರಂದು ನಡೆಯಲಿರುವ ರಾಜ್ಯ ಕಾರ್ಯಕಾರಿಣಿ ಸಭೆ, ಕೋರ್ ಕಮಿಟಿ ಸಭೆ ಮತ್ತು ಸಿಎಂ ಸಹಿತ ಗಣ್ಯರ ಸ್ವಾಗತಕ್ಕಾಗಿ ಮಂಗಳೂರು ಸಜ್ಜಾಗಿದೆ.

    2 ದಶಕದ ಬಳಿಕ ಮಂಗಳೂರಿನಲ್ಲಿ ನಡೆಯುತ್ತಿರುವ ಕಾರ್ಯಕಾರಿಣಿಗಾಗಿ ನಗರವನ್ನು ಶೃಂಗಾರಗೊಳಿಸಲಾಗಿದೆ. ಕೊಡಿಯಾಲ್‌ಬೈಲ್‌ನಲ್ಲಿರುವ ದ.ಕ ಜಿಲ್ಲಾ ಬಿಜೆಪಿ ಕಚೇರಿಯನ್ನು ವಿದ್ಯುದ್ದೀಪಗಳಿಂದ ಅಲಂಕಾರಿಸಲಾಗಿದೆ. ನಗರದ ಎಲ್ಲ ಮುಖ್ಯ ರಸ್ತೆ ಹಾಗೂ ಸರ್ಕಲ್‌ಗಳನ್ನು ಬಿಜೆಪಿ ಧ್ವಜ ಹಾಗೂ ತೋರಣಗಳಿಂದ ಅಲಂಕರಿಸಲಾಗಿದೆ. ರಾಜ್ಯ ಕಾರ್ಯಕಾರಿಣಿಗೆ ಆಗಮಿಸುವ ಮುಖ್ಯಮಂತ್ರಿ ಹಾಗೂ ಪಕ್ಷದ ಹಿರಿಯ ನಾಯಕರಿಗೆ ಸ್ವಾಗತ ಕೋರುವ ಹೋರ್ಡಿಂಗ್‌ಗಳು ನಗರದೆಲ್ಲೆಡೆ ರಾರಾಜಿಸುತ್ತಿವೆ.

    ಶಾರ್ಪಿ ಲೈಟ್ ಆಕರ್ಷಣೆ: ಕದ್ರಿ, ಕೊಟ್ಟಾರ, ಲೇಡಿಹಿಲ್, ಪಂಪ್‌ವೆಲ್, ಲೈಟ್‌ಹೌಸ್ ಹಿಲ್ ಸಹಿತ ನಗರದ ಹತ್ತು ಪ್ರದೇಶದ ಬೃಹತ್ ಕಟ್ಟಡದ ಮೇಲೆ ಶಾರ್ಪಿ ಬೀಮ್ ಲೈಟ್ ಅಳವಡಿಸಲಾಗಿದ್ದು ವೃತ್ತಾಕಾರಲ್ಲಿ ಚಲಿಸುವ ಇದರ ಬೆಳಕು ಇಡೀ ನಗರವನ್ನು ಆಕರ್ಷಿಸುತ್ತಿದೆ. ಈ ಬೆಳಕಿಗೆ ಬಿಜೆಪಿ ಧ್ವಜದ ಕೇಸರಿ ಹಾಗೂ ಹಸಿರು ಬಣ್ಣ ಹಾಯಿಸಲಾಗಿದ್ದು ಇನ್ನಷ್ಟು ಮೆರಗು ನೀಡಿದೆ.

    ಕಾರ್ಯಕಾರಿಣಿಯಿಂದ ಸಂಘಟನೆಗೆ ಬಲ ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿಶ್ವಾಸ: ಮಂಗಳೂರು ನಗರದಲ್ಲಿ 5ರಂದು ನಡೆಯಲಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಮುಂಬರುವ ಸರಣಿ ಚುನಾವಣೆ ಹಿನ್ನೆಲೆಯಲ್ಲಿ ಮಹತ್ವ ಪಡೆದುಕೊಂಡಿದೆ. ಪಕ್ಷದ ಸಂಘಟನೆ ಹಾಗೂ ಚುನಾವಣಾ ಕಾರ್ಯತಂತ್ರ ಕುರಿತು ಈ ಸಂದರ್ಭ ವಿಸ್ತೃತ ಚರ್ಚೆ ಹಾಗೂ ತೀರ್ಮಾನ ನಡೆಯಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

    ಬಿಜೆಪಿ ರಾಜ್ಯ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ನಂತರ ನಡೆಯುವ ಪ್ರಥಮ ಕಾರ್ಯಕಾರಿಣಿ ಸಭೆ ಇದಾಗಿದೆ. ಸಭೆಯಲ್ಲಿ ಪಕ್ಷದ ವರಿಷ್ಠರ ಮಾರ್ಗದರ್ಶನ ಪಡೆಯಲಾಗುವುದು ಎಂದು ಬಿಜೆಪಿ ಜಿಲ್ಲಾ ಕಚೇರಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಮಾತನಾಡಿ, ಮಂಗಳೂರಿನಲ್ಲಿ ರಾಜ್ಯ ಕಾರ್ಯಕಾರಿಣಿ ಯಶಸ್ಸಿಗೆ ಬಿಜೆಪಿ ದ.ಕ. ಜಿಲ್ಲಾ ಘಟಕ ಕಳೆದ 8ದಿನಗಳಿಂದ ಶ್ರಮ ವಹಿಸುತ್ತಿದೆ. ಆಗಮಿಸುವ 140 ಮಂದಿ ಪ್ರತಿನಿಧಿಗಳಿಗೆ ಬೇಕಾದ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಕಲ್ಪಿಸಲು ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ಸಭೆಯಲ್ಲಿ ಎರಡು ನಿರ್ಣಯ ಕೈಗೊಳ್ಳಲಾಗುವುದು ಎಂದರು.
    ಬಿಜೆಪಿ ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ಸಹಪ್ರಭಾರಿಗಳಾದ ಗೋಪಾಲಕೃಷ್ಣ ಹೇರಳೆ, ರಾಜೇಶ್ ಕಾವೇರಿ, ಜಿಲ್ಲಾಧ್ಯಕ್ಷ ಸುದರ್ಶನ ಎಂ., ಜಿಲ್ಲಾ ವಕ್ತಾರ ಜಗದೀಶ ಶೇಣವ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts