More

    ಸಾಹಿತ್ಯ ಸಮ್ಮೇಳನದ ಸಿದ್ಧತೆಗೆ ಸಚಿವ ಬಸವರಾಜ ಬೊಮ್ಮಾಯಿ ಸೂಚನೆ

    ಹಾವೇರಿ: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೆ ಕಸಾಪ ಕೇಂದ್ರ ಸಮಿತಿ ಫೆಬ್ರವರಿ 26ರಿಂದ 28ರ ದಿನಾಂಕ ನಿಗದಿಗೊಳಿಸಿದೆ. ಅದೇ ದಿನಾಂಕಕ್ಕೆ ಸಮ್ಮೇಳನ ನಡೆಸಲು ಸಿದ್ಧತೆ ಕೈಗೊಳ್ಳಿ. ಆದರೆ, ಒಂದೊಮ್ಮೆ ಕರೊನಾ 2ನೇ ಅಲೆ ಆರಂಭಗೊಂಡರೆ, ಸಮ್ಮೇಳನ ನಡೆಸುವ ಕುರಿತು ಸಿಎಂ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

    ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಆಯೋಜನೆ ಕುರಿತು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಭವನದಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಸದ್ಯ ಕರೊನಾ ಹರಡುವಿಕೆ ಕಡಿಮೆಯಾಗುತ್ತಿದೆ. ಇದೇ ನಿರೀಕ್ಷೆಯಲ್ಲಿಯೇ ನಾವು ಸಮ್ಮೇಳನ ಆಯೋಜಿಸಲು ಎಲ್ಲ ಸಿದ್ಧತೆ ನಡೆಸಬೇಕು. ಆದರೆ, ಜನವರಿ ಅಂತ್ಯದವರೆಗೆ ಖರ್ಚಿಲ್ಲದ ಎಲ್ಲ ಸಿದ್ಧತೆಗಳನ್ನು ಕಸಾಪ ಪದಾಧಿಕಾರಿಗಳು ಮಾಡಿಕೊಳ್ಳಬೇಕು. ಒಂದೊಮ್ಮೆ ಕರೊನಾ ಸೋಂಕು ಹೆಚ್ಚಾದರೆ ಸಿಎಂ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಸಮ್ಮೇಳನ ಆಯೋಜನೆ ಕುರಿತು ಅಂತಿಮ ನಿರ್ಣಯ ಕೈಗೊಳ್ಳಲಾಗುವುದು. ಈಗಾಗಲೇ ನಿಗದಿಯಾದ ದಿನದಂದೇ ಸಮ್ಮೇಳನ ನಡೆಸುವ ನಿರೀಕ್ಷೆಯೊಂದಿಗೆ ಎಲ್ಲ ಸಿದ್ಧತೆ ಕೈಗೊಳ್ಳಬೇಕು. ಆರ್ಥಿಕ ವೆಚ್ಚದ ಕೆಲಸಗಳನ್ನು ಮಾತ್ರ ಬಾಕಿ ಉಳಿಸಿಕೊಳ್ಳಬೇಕು ಎಂದರು.

    ಸಂತ, ದಾರ್ಶನಿಕರು, ಸಾಹಿತಿಗಳ ಪುಣ್ಯಭೂಮಿ ಹಾವೇರಿಗೆ ಮೊದಲ ಬಾರಿಗೆ ಸಮ್ಮೇಳನ ನಡೆಸುವ ಆತಿಥ್ಯ ಸಿಕ್ಕಿದೆ. ಇದು ಮಾದರಿ ಸಮ್ಮೇಳನವಾಗಬೇಕು. ಸಮ್ಮೇಳನಾಧ್ಯಕ್ಷರ ಆಯ್ಕೆ, ಕಾರ್ಯಕ್ರಮದ ರೂಪರೇಷೆ ಬಗೆಗೆ ಚಿಂತನೆಯಾಗಬೇಕು. ಕಸಾಪ ಪದಾಧಿಕಾರಿಗಳು ತಾವು ಎಲ್ಲ ಜವಾಬ್ದಾರಿ ತೆಗೆದುಕೊಳ್ಳಬೇಕು. ಇದು ಅಧಿಕಾರಿಗಳ ಸಮ್ಮೇಳನವಾಗಬಾರದು. ಎಲ್ಲದಕ್ಕೂ ಜಿಲ್ಲಾಧಿಕಾರಿಯತ್ತ ಬೆರಳು ಮಾಡಬಾರದು. ನಾನು 2 ಸಮ್ಮೇಳನಗಳ ಜವಾಬ್ದಾರಿ ನಿರ್ವಹಿಸಿದ್ದೇನೆ. ಅಲ್ಲಿನ ಕೆಲ ಅನುಭವಗಳು ಇಲ್ಲಿ ಮರುಕಳಿಸಬಾರದು. ಇದು ಎಲ್ಲರ ಮನೆಯ ಕಾರ್ಯಕ್ರಮದಂತೆ ನಡೆಯಬೇಕು. ಪ್ರತಿಕ್ಷಣವೂ ಎಲ್ಲರೂ ಜವಾಬ್ದಾರಿ ಹೊರಬೇಕು. ಅಧಿಕಾರಿಗಳತ್ತ ಬೆರಳು ತೋರಿಸಿ ನೀವು ಕೈಕಟ್ಟಿ ಕುಳಿತು ಜಿಲ್ಲೆಗೆ ಕೆಟ್ಟ ಹೆಸರು ತರುವ ಕೆಲಸವಾಗಬಾರದು. ಈ ವಿಷಯದಲ್ಲಿ ನಾನು ಈಗಲೇ ಎಲ್ಲರಿಗೂ ಎಚ್ಚರಿಕೆ ನೀಡುತ್ತೇನೆ. ಸುಲಭವಾಗಿ ತಿಳಿದುಕೊಂಡು ಬೆಂಗಳೂರಿನಲ್ಲಿ ಕುಳಿತ ಸಭೆಗಳನ್ನು ನಡೆಸಬೇಡಿ. ಇನ್ನುಮುಂದೆ ಎಲ್ಲವೂ ಇಲ್ಲಿಯೇ ಆಗಬೇಕು ಎಂದರು.

    ಕೃಷಿ ಸಚಿವ ಬಿ.ಸಿ. ಪಾಟೀಲ ಮಾತನಾಡಿ, ಉತ್ತರ ಕರ್ನಾಟಕದ ಹೆಬ್ಬಾಗಿಲಿಗೆ ಮೊದಲ ಬಾರಿಗೆ ಬಂದಿರುವ ಈ ಸಮ್ಮೇಳನ ಅದ್ದೂರಿ ಹಾಗೂ ಯಶಸ್ವಿಯಾಗಬೇಕು. ಜಿಲ್ಲೆಗೆ ಮೆರುಗು ತರುವಂತೆ ಆಯೋಜಿಸಬೇಕು. ಈ ಸಮ್ಮೇಳನ ರಾಜ್ಯಕ್ಕೆ ಮಾದರಿಯಾಗಬೇಕು ಎಂದರು. ಶಾಸಕ ನೆಹರು ಓಲೇಕಾರ ಮಾತನಾಡಿ, ಜಿಲ್ಲೆಯು ಅನೇಕ ಮಹಾತ್ಮರು, ಸಾಹಿತಿಗಳ ತವರೂರು. ಸಮ್ಮೇಳನ ಸಮಯದಲ್ಲಿ ಅವರ ಕುರಿತು ರೂಪಕ ಹೊರತರಬೇಕು ಎಂದರು.

    ಸಂಸದ ಶಿವಕುಮಾರ ಉದಾಸಿ ಮಾತನಾಡಿ, ಈ ಸಮ್ಮೇಳನವು ಕರೊನಾ ವೈರಸ್ ಹೋಗುವ ಸಮಯದಲ್ಲಿ ಜರುಗುತ್ತಿದ್ದು, ಕರೊನಾ ವೈರಸ್ ಸಂಪೂರ್ಣ ತೊಲಗಿ, ಕನ್ನಡಾಸಕ್ತಿಯ ವೈರಸ್ ಎಲ್ಲೆಡೆ ಹಬ್ಬುವಂತಾಗಬೇಕು. ಊಟದ ವ್ಯವಸ್ಥೆಗಿಂತ ಹೆಚ್ಚಾಗಿ ಸಾಹಿತ್ಯಿಕ ವಿಷಯಗಳ ಗೋಷ್ಠಿಗಳು ಮಾದರಿಯಾಗಬೇಕು ಎಂದರು.

    ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ, ಜಿಪಂ ಅಧ್ಯಕ್ಷ ಏಕನಾಥ ಬಾನುವಳ್ಳಿ, ಕಸಾಪ ಜಿಲ್ಲಾಧ್ಯಕ್ಷ ಎಚ್.ಬಿ. ಲಿಂಗಯ್ಯ, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿದರು.

    ಮಹತ್ವಪೂರ್ಣ ಚರ್ಚೆಗಳಿಗೆ ಆದ್ಯತೆ: ಸಮ್ಮೇಳನ ಕೇವಲ ಜಾತ್ರೆಯಾಗಬಾರದು. ಮಹತ್ವಪೂರ್ಣವಾದ ಚರ್ಚೆಗಳು ನಡೆದು ಅವುಗಳ ಅನುಷ್ಠಾನವಾಗಬೇಕು. ಊಟೋಪಚಾರ, ವಸತಿ, ಸಾರಿಗೆ ವ್ಯವಸ್ಥೆಯ ಬಗೆಗೂ ಈಗಿನಿಂದಲೇ ಸಿದ್ಧತೆಯಾಗಬೇಕು. ಸಮ್ಮೇಳನಕ್ಕೆ ಅವಶ್ಯವಾದ ಅನುದಾನವನ್ನು ನಾನು ಸಿಎಂ ಕಾಡಿಬೇಡಿ ತರುತ್ತೇನೆ. ಅನುದಾನಕ್ಕೆ ಯಾವುದೇ ಕೊರತೆಯಾಗದು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

    2-3ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ
    ಹಾವೇರಿಯಲ್ಲಿ ಸಮ್ಮೇಳನ ಆಯೋಜಿಸಲು ಜನಪ್ರತಿನಿಧಿಗಳು, ಸಾಹಿತ್ಯಾಸಕ್ತರು ಜಿಲ್ಲೆಯ ಜನರು ಉತ್ಸಾಹದಲ್ಲಿದ್ದಾರೆ. ಈ ಸಮ್ಮೇಳನದಲ್ಲಿ ಪ್ರತಿದಿನ 2ರಿಂದ 3ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಅದರ ಜತೆಗೆ ವಿದೇಶಗಳಿಂದಲೂ ಹಾವೇರಿ ಸಮ್ಮೇಳನಕ್ಕೆ ಬರುವ ಕುರಿತು ಕೆಲವರು ಈಗಾಗಲೇ ರ್ಚಚಿಸಿದ್ದಾರೆ. ಸೂಕ್ತ ಜಾಗ ಈಗಾಗಲೇ ಗುರುತಿಸಲಾಗಿದೆ. ಸಚಿವರು ಅಂತಿಮ ಅನುಮೋದನೆ ನೀಡಬೇಕು ಎಂದು ಕಸಾಪ ರಾಜ್ಯಾಧ್ಯಕ್ಷ ಮನು ಬಳಿಗಾರ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts