More

    ಸಾಹಿತಿ ಗೋಗೇರಿ ಇನ್ನಿಲ್ಲ

    ಹುಬ್ಬಳ್ಳಿ: ಮಕ್ಕಳ ಸಾಹಿತ್ಯ, ವಿಡಂಬನೆ, ಪ್ರಬಂಧಗಳ ಮೂಲಕ ಸಾಹಿತ್ಯಲೋಕದಲ್ಲಿ ಹೆಸರು ಮಾಡಿದ್ದ ಇಲ್ಲಿಯ ನವ ಅಯೋಧ್ಯ ನಗರದ ನಿವಾಸಿ ಎಂ.ಡಿ. ಗೋಗೇರಿ (85) ಅವರು ಭಾನುವಾರ ಬೆಳಗ್ಗೆ ನಿಧನ ಹೊಂದಿದರು. ಅವರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.

    ಎಂ.ಡಿ. ಗೋಗೇರಿ ಅವರ ಮೂಲ ಹೆಸರು ಮಹ್ಮದ್ ಅಲಿ ದಸ್ತಗೀರಸಾಬ್ ಪಿಂಜಾರ. ಮೂಲತಃ ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಗೋಗೇರಿ ಗ್ರಾಮದವರು. ಬಡತನದಲ್ಲಿಯೇ ಬೆಳೆದ ಗೋಗೇರಿ ಅವರು ಓದಿದ್ದು ಎಂಎ, ಬಿಎಡ್. ಶಿಕ್ಷಕರಾಗಿ ವೃತ್ತಿ ಆರಂಭಿಸಿ ಹುಬ್ಬಳ್ಳಿಗೆ ಬಂದು ನೆಲೆಸಿದ್ದರು. ಹಾಗಾಗಿಯೆ ಅವರು ‘ಹಳ್ಳಿಯಿಂದ ಹೂಬ್ಬಳ್ಳಿ’ಗೆ ಎಂಬ ಆತ್ಮಕಥನ ಬರೆದಿದ್ದರು. ಮಕ್ಕಳ ಸಾಹಿತ್ಯ, ವಿಡಂಬನೆ, ಚುಟುಕು, ಪ್ರಬಂಧ ಸೇರಿ 35 ಕೃತಿಗಳ ಮೂಲಕ ಸಾರಸ್ವತ ಲೋಕದಲ್ಲಿ ತಮ್ಮ ಛಾಪು ಮೂಡಿಸಿದ್ದರು. ಹುಬ್ಬಳ್ಳಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಗದಗ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

    ಬೇರೆ ಸಾಹಿತಿಗಳ ಕವನ/ಗೀತೆಗಳನ್ನು ಅನುಕರಿಸಿ ಹಾಸ್ಯ, ವಿಡಂಬನಾತ್ಮಕ ಗೀತೆಗಳನ್ನು ಸಹ ರಚಿಸಿದ್ದರು. ಉತ್ತಮ ಗಾಯಕ ಹಾಗೂ ಹಾಮೋನಿಯಂ ವಾದಕ ಸಹ ಆಗಿದ್ದರು. ತಮ್ಮ ಕವನಗಳಿಗೆ ತಾವೇ ರಾಗ ಸಂಯೋಜಿಸಿ ಹಾಡುತ್ತಿದ್ದರು. ಹರ್ಡೆಕರ ಮಂಜಪ್ಪ ಪ್ರಶಸ್ತಿ, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಸೇರಿ ವಿವಿಧ ಗೌರವಗಳು ಅವರಿಗೆ ಸಂದಿವೆ.

    ಸಂತಾಪ: ಎಂ.ಡಿ. ಗೋಗೇರಿ ನಿಧನದಿಂದ ಅವಳಿ ನಗರದ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಅಪಾರ ಹಾನಿಯಾಗಿದೆ ಎಂದು ಡಿ.ಎಸ್. ರ್ಕ ಸಾಹಿತ್ಯ ವೇದಿಕೆ ಅಧ್ಯಕ್ಷ ಎಂ.ಎ. ಸುಬ್ರಹ್ಮಣ್ಯ, ಮಾಜಿ ಅಧ್ಯಕ್ಷ ಎನ್.ಬಿ. ರಾಮಾಪುರ, ಪದಾಧಿಕಾರಿಗಳಾದ ಗೋಪಾಲಕೃಷ್ಣ ಹೆಗಡೆ, ಬಿ.ಎಸ್. ಮಾಳವಾಡ, ಡಾ. ರಾಮು ಮೂಲಗಿ, ಇತರರು; ಸಚಿವರಾದ ಪ್ರಲ್ಹಾದ ಜೋಶಿ, ಜಗದೀಶ ಶೆಟ್ಟರ್, ಶಾಸಕ ಪ್ರಸಾದ ಅಬ್ಬಯ್ಯ, ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ, ವಾಕರಸಾ ಸಂಸ್ಥೆ ಮಾಜಿ ಅಧ್ಯಕ್ಷ ಸದಾನಂದ ಡಂಗನವರ ಮೊದಲಾದವರು ಸಂತಾಪ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts