More

    ಸಾಲ ವಿತರಣೆಯಲ್ಲಿ ತಾರತಮ್ಯವೆಸಗಿಲ್ಲ

    ಕೋಲಾರ: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಎಲ್ಲ ರೈತರು, ಹೆಣ್ಣು ಮಕ್ಕಳಿಗೆ ಸಮಾನವಾಗಿ ಸಾಲ ವಿತರಿಸಲಾಗಿದೆ. ಸಾಲ ವಿತರಣೆಯಲ್ಲಿ ತಾರತಮ್ಯದ ಆರೋಪ ಮಾಡುತ್ತಿರುವವರು ಕೇಂದ್ರ ಕಚೇರಿಗೆ ಬಂದು ಪರಿಶೀಲಿಸಿ ವಾಸ್ತವಾಂಶ ಅರಿತು ಮಾತನಾಡಲಿ ಎಂದು ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.

    ನಗರದ ಡಿಸಿಸಿ ಬ್ಯಾಂಕ್ ಆವರಣದಲ್ಲಿ ಸೋಮವಾರ ಸೀಶಕ್ತಿಯ 11 ಸಂಘಗಳಿಗೆ 58 ಲಕ್ಷ ರೂ. ಸಾಲ ನೀಡಿ ಮಾತನಾಡಿ, ರೈತರು, ಮಹಿಳೆಯರು ವಿವಿಧ ಸಾಲ ಯೋಜನೆಗಳಿಂದ ವಂಚಿತರಾಗಿದ್ದ ಸಂದರ್ಭದಲ್ಲಿ ಕಷ್ಟಪಟ್ಟು ಬ್ಯಾಂಕ್ ಬೆಳೆಸಿದ್ದೇವೆ. ಎರಡೂ ಜಿಲ್ಲೆಗಳಿಗೆ ಸಮನಾಗಿ 1200 ಕೋಟಿ ರೂ. ಸಾಲ ವಿತರಿಸಿದ್ದೇವೆ. ಇದರಲ್ಲಿ ಯಾವುದೇ ತಾರತಮ್ಯ ಎಸಗಿಲ್ಲ ಎಂದರು.

    ಬ್ಯಾಂಕ್ ಬಗ್ಗೆ ಸುಳ್ಳು ಆರೋಪ ಮಾಡಿ ಕೆಟ್ಟ ಹೆಸರು ತರುವ ಪ್ರಯತ್ನ ಬೇಡ, ಬ್ಯಾಂಕಿಗೆ ಬಂದು ವಾಸ್ತವಾಂಶ ಅರಿತು ಮಾತನಾಡಲಿ. ತಪ್ಪುಗಳಾಗಿದ್ದಲ್ಲಿ ನೇರವಾಗಿ ಬಂದು ಹೇಳಿದರೆ ಸರಿಪಡಿಸಿಕೊಳ್ಳುತ್ತೇವೆ. ಅದು ಬಿಟ್ಟು ರಾಜಕೀಯ ಪ್ರೇರಿತವಾಗಿ ಆರೋಪ ಮಾಡಿ ಸಂಸ್ಥೆ ಹಾಳಾದರೆ ಅದು ಎರಡೂ ಜಿಲ್ಲೆಯ ರೈತರು, ಮಹಿಳೆಯರಿಗೆ ಮಾಡಿದ ದ್ರೋಹ ಎಂದು ಎಚ್ಚರಿಸಿದರು.

    ಬ್ಯಾಂಕ್ ವಿರುದ್ಧ ಅಪಪ್ರಚಾರ ಮಾಡುವವರಿಗೆ ಬ್ಯಾಂಕ್ ಏಳಿಗೆಗೆ ಕಾರಣವಾದ ತಾಯಂದಿರೇ ಸರಿಯಾದ ಪಾಠ ಕಲಿಸಬೇಕು. ಮುಂದಿನ ದಿನಗಳಲ್ಲೂ ಇದೇ ರೀತಿ ಬ್ಯಾಂಕಿನ ಪರ ನಿಲ್ಲುವ ಜತೆಗೆ ಬ್ಯಾಂಕ್ ಬೆಳವಣಿಗೆಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
    ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಲ್. ಅನಿಲ್ ಕುಮಾರ್ ಮಾತನಾಡಿ, ಡಿಸಿಸಿ ಬ್ಯಾಂಕ್ ವ್ಯವಸ್ಥೆಯನ್ನು ಅಭದ್ರಗೊಳಿಸಲು ಕೆಲ ರಾಜಕೀಯ ವ್ಯಕ್ತಿಗಳು ಹುನ್ನಾರ ನಡೆಸುತ್ತಿದ್ದಾರೆ. ಹೆಣ್ಣುಮಕ್ಕಳು ನಮ್ಮ ಜತೆ ನಿಲ್ಲುವ ಮೂಲಕ ಬ್ಯಾಂಕ್ ಬಗ್ಗೆ ಅಪಪ್ರಚಾರ ಮಾಡುವ ವ್ಯಕ್ತಿಗಳಿಗೆ ಬುದ್ಧಿ ಕಲಿಸಬೇಕು. ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಹೆಣ್ಣಿಗೆ ಆರ್ಥಿಕವಾಗಿ ಶಕ್ತಿ ತುಂಬಲಾಗುತ್ತಿದೆ. ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಸುಮಾರು ಆರು ಲಕ್ಷ ಹೆಣ್ಣುಮಕ್ಕಳಿಗೆ ಸಾಲಸೌಲಭ್ಯ ನೀಡಿದ್ದು ಇದು ರಾಜ್ಯಕ್ಕೆ ಮಾದರಿಯಾಗಿದೆ ಎಂದರು.

    ಬ್ಯಾಂಕ್ ನಿರ್ದೇಶಕ ಯಲವಾರ ಸೊಣ್ಣೇಗೌಡ ಮಾತನಾಡಿ, ಸಹಕಾರ ಸಂಸ್ಥೆಗಳು ಸ್ವಸಹಾಯ ಸಂಘಗಳಿಗೆ ಸಾಲ ಸೌಲಭ್ಯ ನೀಡುವ ಮೂಲಕ ಸ್ವಾವಲಂಬಿ ಬದುಕಿಗೆ ನೆರವಾಗುತ್ತಿವೆ. ಸಣ್ಣ ವ್ಯಾಪಾರ ಮಾಡಲು, ಗ್ರಾಮೀಣ ಪ್ರದೇಶದಲ್ಲಿ ಹಸು ಸಾಕಲು ಅವಶ್ಯಕತೆಗೆ ಅನುಗುಣವಾಗಿ ಉದ್ಯಮ ಸ್ಥಾಪಿಸಲು ಸಾಲ ನೀಡಲಾಗುತ್ತದೆ ಎಂದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ ಮಾತನಾಡಿದರು. ಬ್ಯಾಂಕಿನ ಕೋಲಾರ ಶಾಖೆ ವ್ಯವಸ್ಥಾಪಕ ಅಂಬರೀಷ್, ಬ್ಯಾಂಕಿನ ಅಮೀನಾ, ಗೋಪಾಲಕೃಷ್ಣ ಮತ್ತಿತರರಿದ್ದರು.

    ಡಿಸಿಸಿ ಬ್ಯಾಂಕ್‌ನಿಂದ ಗುಡಿ ಕೈಗಾರಿಕೆ ಸ್ಥಾಪಿಸಲು 10 ಸಂಘಗಳಿಗೆ 10 ಲಕ್ಷದಂತೆ 1 ಕೋಟಿ ರೂ. ಸಾಲ ನೀಡಲಿದ್ದು, 50 ಲಕ್ಷಕ್ಕೆ ಯಾವುದೇ ಬಡ್ಡಿ ಇಲ್ಲ. ಇನ್ನುಳಿದ 50 ಲಕ್ಷಕ್ಕೆ ಶೇ.3 ರಷ್ಟು ಬಡ್ಡಿದರ ನೀಡಲಾಗುತ್ತಿದೆ. ಇದನ್ನು ಬಳಸಿಕೊಂಡು ಆರ್ಥಿಕವಾಗಿ ಮುಂದೆ ಬರಬೇಕು.
    ಎಂ.ಎಲ್. ಅನಿಲ್ ಕುಮಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts