More

    ಸಾರಿಗೆ ಬಸ್, ಪರ್ಯಾಯ ಸ್ಮಶಾನ ಕಲ್ಪಿಸಿ.. ಗ್ರಾಮವಾಸ್ತವ್ಯದಲ್ಲಿ ಶಂಕರನಹಳ್ಳಿ ಗ್ರಾಮಸ್ಥರ ಅಹವಾಲು

    ದಾವಣಗೆರೆ: ನಮ್ಮೂರಿಗೆ ಕೋವಿಡ್‌ಗಿಂತ ಮುನ್ನ ಗೌರ್ಮೆಂಟ್ ಬಸ್ ಬರ‌್ತಿತ್ತು, ಈಗಿಲ್ಲ. ಬಸ್ ವ್ಯವಸ್ಥೆ ಮಾಡಿಕೊಡಿ. ಅಲ್ಲಲ್ಲಿ ವಿದ್ಯುತ್ ತಂತಿ ಹರಿದು ಬಿದ್ದಿವೆ, ಸರಿಪಡಿಸಿಕೊಡಿ. ಶಾಲೆ ಹಿಂಬದಿಯಲ್ಲಿ ತೆರೆದ ಬಾವಿ ಇದ್ದು ಮಕ್ಕಳು ಬೀಳುವ ಅಪಾಯವಿದೆ, ಇದರ ಬಗ್ಗೆ ಕ್ರಮ ಕೈಗೊಳ್ಳಿ. ಊರಿನ ಸ್ಮಶಾನ ಶವಸಂಸ್ಕಾರಕ್ಕೆ ಸಾಲದು, ಪರ್ಯಾಯ ವ್ಯವಸ್ಥೆ ಕಲ್ಪಿಸಿ..

    ತಾಲೂಕಿನ ಮಾಯಕೊಂಡ ಸಮೀಪದ ಶಂಕರನಹಳ್ಳಿಯಲ್ಲಿ ದಾವಣಗೆರೆ ತಾಲೂಕು ಆಡಳಿತದಿಂದ ಬುಧವಾರ ಹಮ್ಮಿಕೊಂಡಿದ್ದ ಗ್ರಾಮವಾಸ್ತವ್ಯದಲ್ಲಿ ಕೇಳಿಬಂದ ಅಹವಾಲುಗಳಿವು. ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಡಾ.ಎಂ.ಬಿ.ಅಶ್ವತ್ಥ್ ದೂರುಗಳಿಗೆ ಸ್ಪಂದಿಸಿ, ಕೆಲವನ್ನು ಸ್ಥಳದಲ್ಲೇ ಪರಿಹರಿಸಲು ಸೂಚನೆ ನೀಡಿದರು.
    ಗೋಕಟ್ಟೆ ಸರ್ವೇ ಮಾಡಿಸಬೇಕು. ಶಾಲಾ ಕೊಠಡಿ ಹಾಳಾಗಿದ್ದು ಬೇರೆ ವ್ಯವಸ್ಥೆ ಮಾಡಿಕೊಡಬೇಕು. ಅಂಗನವಾಡಿ ಕೇಂದ್ರಕ್ಕೆ ಸೂಕ್ತ ಕಟ್ಟಡ ನೀಡಬೇಕು. ಸಂಚಾರಿ ಚಿಕಿತ್ಸಾ ವಾಹನ ಮರು ಚಾಲನೆಗೊಳಿಸಬೇಕು. ಇ-ಸ್ವತ್ತು ಪಡೆಯಲು ಇರುವ ತಾಂತ್ರಿಕ ತೊಂದರೆ ನಿವಾರಿಸುವಂತೆಯೂ ಗ್ರಾಮಸ್ಥರು, ಮುಖಂಡರು ಆಗ್ರಹಿಸಿದರು.
    ಮುಜುರಾಯಿ ಇಲಾಖೆ ವ್ಯಾಪ್ತಿಯ ರಂಗಪ್ಪನ ದೇವಸ್ಥಾನಕ್ಕೆ ಅರ್ಚಕರನ್ನು ನಿಯೋಜನೆ ಬೇಡಿಕೆ ಸಂಬಂಧ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿರುವುದಾಗಿ ತಹಸೀಲ್ದಾರ್ ಪ್ರತಿಕ್ರಿಯಿಸಿದರು. ಸುಮಾರು 35 ಅರ್ಜಿ ಸಲ್ಲಿಕೆಯಾದವು. ಕೆಲವರಿಗೆ ವೃದ್ಧಾಪ್ಯ ವೇತನ, ವಿಧವಾ ವೇತನ ಮಂಜೂರಾತಿ ಪತ್ರ ನೀಡಲಾಯಿತು. ಕೃಷಿ ಇಲಾಖೆಯ ಪರಿಕರಗಳನ್ನು ವಿತರಿಸಲಾಯಿತು.
    ಗ್ರಾಮವಾಸ್ತವ್ಯ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಹಸೀಲ್ದಾರ್, ಅಧಿಕಾರಿಗಳು ಗ್ರಾಮಗಳ ವಾಸ್ತವ ಸ್ಥಿತಿ ಅರಿತು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಗ್ರಾಮ ವಾಸ್ತವ್ಯ ಕಾರ್ಯಕ್ರಮ ನೆರವಾಗಿವೆ, ಅಧಿಕಾರಿಗಳು- ಜನರ ನಡುವೆ ಬಾಂಧವ್ಯ ಬೆಸೆಯುವುದೇ ಇದರ ಉದ್ದೇಶವಾಗಿದೆ ಎಂದು ಹೇಳಿದರು.
    ಗ್ರಾಪಂ ಉಪಾಧ್ಯಕ್ಷೆ ರತ್ನಮ್ಮ ಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಸದಸ್ಯ ಅನಿಲ್ಕುಮಾರ್, ಉಪ ತಹಸೀಲ್ದಾರ್ ಹಾಲೇಶಪ್ಪ, ತೋಟಗಾರಿಕೆ ಇಲಾಖೆಯ ರೇಷ್ಮಾ ಪರ್ವೀನ್,ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀಧರಮೂರ್ತಿ,ಸಿಡಿಪಿಒ ಪ್ರಿಯದರ್ಶಿನಿ, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಹಾಲಸ್ವಾಮಿ, ಅರಣ್ಯಾಧಿಕಾರಿ ಉಮೇಶ್, ಆಹಾರ ಇಲಾಖೆ ಶಿರಸ್ತೇದಾರ್ ಬುಡೇನ್‌ಸಾಬ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಬೇಬಿ ಸುನಿತಾ, ಬಿಸಿಎಂ ಅಧಿಕಾರಿ ಗಾಯತ್ರಿ ದೇವಿ, ಪಂಚಾಯತ್‌ರಾಜ್ ಇಲಾಖೆ ಇಂಜಿನಿಯರ್ ಪುಟ್ಟಸ್ವಾಮಿ, ಅಣಬೇರು ಗ್ರಾಮ ಪಂಚಾಯಿತಿ ಸದಸ್ಯರು, ಪಿಡಿಒ ಮಹೇಶ್, ಪಿಎಸ್‌ಐ ಮಂಜಣ್ಣ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts