More

    ಸಾರಿಗೆ ನೌಕರರ ಜೈಲ್ ಬರೋ ಚಳವಳಿ

    ಕೋಲಾರ: ಜೈಲ್ ಬರೋ ಚಳವಳಿ ನಡೆಸಲು ಮುಂದಾದ ಸಾರಿಗೆ ನೌಕರರನ್ನು ಬಂಧಿಸಿದ್ದು, ಪೊಲೀಸರ ಕ್ರಮ ಖಂಡಿಸಿ ನೌಕರರು ಗ್ರಾಮಾಂತರ ಠಾಣೆ ಮುಂಭಾಗ ಪ್ರತಿಭಟಿಸಿದ್ದರಿಂದ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು.

    ನಿಷೇಧಾಜ್ಞೆ ನಡುವೆಯೂ ಪ್ರತಿಭಟನೆ ನಡೆಸಿದ ಸಂಬಂಧ 32 ಸಾರಿಗೆ ನೌಕರರನ್ನು ಬಂಧಿಸಿರುವ ಪೊಲೀಸರು ಎಲ್ಲರ ಮೇಲೂ ಕೇಸು ದಾಖಲಿಸಿದ್ದಾರೆ. ಪೊಲೀಸರು ನಡೆಸಿದ ಲಾಠಿ ಪ್ರಹಾರದಿಂದ ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

    6ನೇ ವೇತನ ಆಯೋಗದ ಶಿಫಾರಸಿನಂತೆ ವೇತನ ಜಾರಿಗೆ ಪಟ್ಟು ಹಿಡಿದಿರುವ ಸಾರಿಗೆ ನೌಕರರು 14ನೇ ದಿನದ ಪ್ರತಿಭಟನೆಯ ಭಾಗವಾಗಿ ಕೆಎಸ್‌ಆರ್‌ಟಿಸಿ ಡಿಪೋ ಮುಂದೆ ಜೈಲ್‌ಭರೋ ನಡೆಸಲು ಸಿದ್ಧತೆ ನಡೆಸಿದ್ದರು. ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದನ್ನು ಮನಗಂಡ ಸಾರಿಗೆ ಸಿಬ್ಬಂದಿ ಚಿಕ್ಕಬಳ್ಳಾಪುರ ರಸ್ತೆಯ ಸಂಗೊಂಡಹಳ್ಳಿ ಬಳಿ ನೂರಾರು ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದರು.

    ವಿಷಯ ತಿಳಿದ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರಲ್ಲದೆ ಈಗಾಗಲೆ 144 ಸೆಕ್ಷನ್‌ನಂತೆ ನಿಷೇಧಾಜ್ಞೆ ಜಾರಿಗೊಳಿಸಿರುವುದರಿಂದ ಪ್ರತಿಭಟನೆಗೆ ಅವಕಾಶವಿಲ್ಲ, ಎಲ್ಲರೂ ವಾಪಸ್ ತೆರಳುವಂತೆ ಸೂಚಿಸಿದರು. ಆದರೆ ಜಗ್ಗದ ನೌಕರರು ಪ್ರತಿಭಟನೆ ನಡೆಸಲು ಮುಂದಾದಾಗ ಪೊಲೀಸರು 20 ಮಂದಿ ನೌಕರರನ್ನು ವಶಕ್ಕೆ ಪಡೆದು ಜೀಪುಗಳನ್ನು ಗ್ರಾಮಾಂತರ ಠಾಣೆಗೆ ಕರೆತಂದರು. ಈ ವೇಳೆ ಪೊಲೀಸರು ಮತ್ತು ನೌಕರರ ನಡುವೆ ಮಾತಿನ ಚಕಮಕಿ ಉಂಟಾಯಿತು. ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದರು.

    ಲಾಠಿ ಪ್ರಹಾರ: ಬಂಧನಕ್ಕೊಳಗಾಗಿರುವ ನೌಕರರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ನೌಕರರು ಗ್ರಾಮಾಂತರ ಠಾಣೆ ಎದುರು ಧರಣಿ ಕುಣಿತರು. ನ್ಯಾಯಯುತ ಬೇಡಿಕೆಗೆ ಒತ್ತಾಯಿಸಿ ಪ್ರತಿಭಟಿಸುತ್ತಿದ್ದರೂ ಪೊಲೀಸರು ವಿನಾ ಕಾರಣ ನೌಕರರನ್ನು ಬಂಧಿಸಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿ ಘೋಷಣೆ ಕೂಗಿದರು. ಪೊಲೀಸರು ಕ್ರಮದ ಎಚ್ಚರಿಕೆ ನೀಡಿ ಜಾಗ ಖಾಲಿ ಮಾಡುವಂತೆ ತಾಕೀತು ಮಾಡಿದರು.

    ನೌಕರರು ಪಟ್ಟು ಸಡಿಲಿಸದೆ ಪೊಲೀಸ್ ಠಾಣೆ ಕಡೆಗೆ ನುಗ್ಗಿ ಬರಲಾರಂಭಿಸಿದಾಗ ಪರಸ್ಪರ ಮಾತಿನ ಚಕಮಕಿ ನಡೆಯಿತು. ಪೊಲೀಸರು ಪ್ರತಿಭಟನಾ ನಿರತರನ್ನು ತೆರಳುವಂತೆ ತಳ್ಳಲಾರಂಭಿಸಿದಾಗ ನೂಕು ನುಗ್ಗಲು ಉಂಟಾಗಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಪರಿಸ್ಥಿತಿ ನಿಯಂತ್ರಿಸಲು ಪೋಲಿಸರು ಲಾಠಿ ಪ್ರಹಾರ ನಡೆಸುತ್ತಾ ಅಟ್ಟಾಡಿಸಿಕೊಂಡು ಹೊಡೆದರು. ನೌಕರರು ಜಾಗ ಖಾಲಿ ಮಾಡಿದ ನಂತರ ಪರಿಸ್ಥಿತಿ ತಿಳಿಯಾಯಿತು.

    ಕಿಂಚಿತ್ತೂ ಮನ್ನಣೆ ನೀಡುತ್ತಿಲ್ಲ: ಕರೊನಾ ಮಾರ್ಗಸೂಚಿ ಉಲ್ಲಂಘಿಸದೆ ಊರ ಹೊರವಲಯದಲ್ಲಿ ಪ್ರತಿಭಟನೆ ನಡೆಸುತ್ತಿದ್ದರೂ ಹೋರಾಟ ಹತ್ತಿಕ್ಕುವ ನಿಟ್ಟಿನಲ್ಲಿ ಸರ್ಕಾರ ನಡೆದುಕೊಳ್ಳುತ್ತಿದೆ. ಪೊಲೀಸರನ್ನು ಬಿಟ್ಟು ನಮ್ಮ ಧ್ವನಿಗಳನ್ನು ಕ್ಷೀಣಿಸುವಂತೆ ಮಾಡುತ್ತಿದೆ. ಕಳೆದ 14 ದಿನಗಳಿಂದಲೂ ಪ್ರತಿಭಟನೆ ನಡೆಸುತ್ತಿದ್ದೇವೆ. ಸರ್ಕಾರ ನಮ್ಮ ಬೇಡಿಕೆಗಳಿಗೆ ಕಿಂಚಿತ್ತೂ ಮನ್ನಣೆ ನೀಡುತ್ತಿಲ್ಲ. ಬೇಡಿಕೆ ಈಡೇರುವವರೆಗೆ ಮುಷ್ಕರ ಮುಂದುವರಿಯಲಿದೆ ಎಂದು ನೌಕರರು ಆಕ್ರೋಶ ವ್ಯಕ್ತಪಡಿಸಿದರು.

    11 ನೌಕರರು ಎತ್ತಂಗಡಿ: ಸಾರಿಗೆ ನೌಕರರ ಮುಷ್ಕರ ಅರ್ಧ ತಿಂಗಳಿಗೆ ಕಾಲಿಟ್ಟಿದ್ದು, ಮಂಗಳವಾರವೂ 11 ಸಿಬ್ಬಂದಿಯನ್ನು ಮಂಗಳೂರು ವಿಭಾಗಕ್ಕೆ ವರ್ಗಾವಣೆ ಮಾಡಿ ಸಾರಿಗೆ ನಿಗಮ ಆದೇಶ ಹೊರಡಿಸಿದೆ. ಜಿಲ್ಲೆಯ 5 ಡಿಪೋ ವ್ಯಾಪ್ತಿಯಿಂದ 110 ಬಸ್‌ಗಳು ಪೊಲೀಸ್ ಭದ್ರತೆಯೊಂದಿಗೆ ಸಂಚಾರ ನಡೆಸಿದ್ದು, ದಿನ ಕಳೆದಂತೆ ಪ್ರಯಾಣಿಕರ ಸಂಖ್ಯೆ ಏರಿಕೆಯಾಗುತ್ತಿದೆ. ಸಾರಿಗೆ ಬಸ್ ಹೊರತುಪಡಿಸಿ ಖಾಸಗಿ ಬಸ್ ಇನ್ನಿತರ ಪ್ರಯಾಣಿಕ ವಾಹನಗಳನ್ನು ಜನ ಅವಲಂಬಿಸುವಂತಾಗಿದೆ. ಇತ್ತ ಸಾರಿಗೆ ನೌಕರರು ಹೋರಾಟ ತೀವ್ರಗೊಳಿಸಿದ್ದು, ಜೈಲ್ ಬರೋ ಚಳವಳಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ಸಂಬಂಧ ಪ್ರತಿಭಟನೆಯ ಮುಂಚೂಣಿಯಲ್ಲಿದ್ದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ 32 ನೌಕರರ ಮೇಲೆ ಕೇಸು ದಾಖಲಾಗಿದೆ. ಇನ್ನೊಂದೆಡೆ 11 ಸಿಬ್ಬಂದಿಯನ್ನು ಎತ್ತಂಗಡಿ ಮಾಡಲಾಗಿದೆ. ಕರ್ತವ್ಯಕ್ಕೆ ಹಾಜರಾಗುವಂತೆ ಎಲ್ಲ 230ಕ್ಕೂ ಹೆಚ್ಚು ಪರೀಕ್ಷಾರ್ಥಿ ಅಭ್ಯರ್ಥಿಗಳಿಗೆ ವೈಯಕ್ತಿಕವಾಗಿ ಕರೆಯೋಲೆ ರವಾನಿಸಿರುವ ನಿಗಮದ ಅಧಿಕಾರಿಗಳು ಅಭ್ಯರ್ಥಿಗಳ ಆಗಮನದ ನಿರೀಕ್ಷೆಯಲ್ಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts