More

    ಸಾಂಬ್ರಾ ವಿಮಾನ ನಿಲ್ದಾಣದ ಹೆದ್ದಾರಿ ಪಕ್ಕದಲ್ಲಿ ಕೊಳಚೆ ನೀರು

    ಬೆಳಗಾವಿ: ನಗರದ ಎಸ್​.ಸಿ. ಮೋಟರ್ಸ್​ ಮಾರುತಿ ನಗರದ ಬಳಿಯ ಬಾಗಲಕೋಟೆ& ಬೆಳಗಾವಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಕೊಳಚೆ ನೀರು ಸಂಗ್ರಹವಾಗುತ್ತಿದ್ದು, ನಾಗರಿಕರಿಗೆ ತೊಂದರೆಯಾಗುತ್ತಿದೆ.

    ಅಮನ್​ ನಗರ, ನ್ಯೂ ಗಾಂಧಿನಗರ, ಉಜ್ವಲ ನಗರ ಮಾರುತಿ ನಗರ ಸೇರಿ ಸುತ್ತಲಿನ ಪ್ರದೇಶದ ಚರಂಡಿ ನೀರು ರಾಷ್ಟ್ರೀಯ ಹೆದ್ದಾರಿಗೆ ಹರಿದು ಬರುತ್ತಿದ್ದು, ವಾಹನ ಸವಾರರು ಮೂಗು ಮುಚ್ಚಿಕೊಂಡು ಸಂಚರಿಸುವ ಪರಿಸ್ಥಿತಿ ಸೃಷ್ಟಿಯಾಗಿದೆ. ಬಾಗಲಕೋಟೆ&ಬೆಳಗಾವಿ ಹೆದ್ದಾರಿ ಪಕ್ಕದ ಪ್ರದೇಶಗಳಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲ. ಹೀಗಾಗಿ ಈ ಪ್ರದೇಶದಲ್ಲಿ ಖುಲ್ಲಾ ಜಾಗ ಹಾಗೂ ಹೊಲಗಳಲ್ಲಿ ಕೊಳಚೆ ನೀರು ಈಗ ರಾಷ್ಟ್ರೀಯ ಹೆದ್ದಾರಿಗೆ ಹರಿದು ಬರುತ್ತಿರುವುದರಿಂದ ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿದೆ.

    ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆಯಾಗಿದ್ದರಿಂದ ಪ್ರತಿನಿತ್ಯ ಈ ರಸ್ತೆ ಮೂಲಕ ಗಣ್ಯ ವ್ಯಕ್ತಿ ಹಾದು ಹೋಗುತ್ತಾರೆ. ಜತೆಗೆ ವಿಮಾನ ನಿಲ್ದಾಣದ ಮೂಲಕ ಬೇರೆ ಬೇರೆ ನಗರಗಳಿಗೆ ತೆರುಳುವುದಕ್ಕೆ ಹೊರಗಿನಿಂದ ಬರುವ ಜನ ಇಲ್ಲಿಯ ಅವ್ಯವಸ್ಥೆ ಬಗ್ಗೆ ಆಡಿಕೊಳ್ಳುವಂತಾಗಿದೆ. ಈ ರಸ್ತೆಯ ಅಕ್ಕಪಕ್ಕ ಕೆಲವು ಅಕ್ರಮ ಬಡಾವಣೆಗಳು ಇವೆ.

    ಅವು ಮಹಾನಗರ ಪಾಲಿಕೆಗೆ ಹಸ್ತಾಂತರವಾಗಿಲ್ಲ. ಹೀಗಾಗಿ ರಸ್ತೆ, ಒಳಚರಂಡಿ ಸೇರಿ ಮೂಲ ಸೌಕರ್ಯಗಳು ಇಲ್ಲ. 8&10 ಅಡಿ ರಸ್ತೆಗಳನ್ನು ಕಲ್ಪಿಸಲಾಗಿದ್ದು, ಇಲ್ಲಿಯ ಜನ ಕನಿಷ್ಠ ಸೌಲಭ್ಯದಲ್ಲೇ ಬದುಕುತ್ತಿದ್ದಾರೆ. ಅನಧಿಕೃತವಾಗಿ ಬಡಾವಣೆಗಳು ನಿರ್ಮಾಣವಾಗಿರುವುದರಿಂದ ಮಹಾನಗರ ಪಾಲಿಕೆಯಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗುವುದಿಲ್ಲ. ಹೀಗಾಗಿ ಈ ಪ್ರದೇಶದಲ್ಲಿ ಪ್ರಮುಖವಾಗಿ ಒಳಚರಂಡಿ ವ್ಯವಸ್ಥೆ ಇಲ್ಲದ್ದರಿಂದ ನಿವಾಸಿಗಳಿಗೆ ತೊಂದರೆಯಾಗುತ್ತಿದೆ.

    ಜನಪ್ರತಿನಿಧಿಗಳು ಮನಸ್ಸು ಮಾಡುತ್ತಿಲ್ಲ: ಬಾಗಲಕೋಟೆ&ಬೆಳಗಾವಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಕೆಲವು ಅಕ್ರಮ ಬಡಾವಣೆಗಳನ್ನು ಸಕ್ರಮಗೊಳಿಸಿ, ಮೂಲ ಸೌಲಭ್ಯಗಳನ್ನು ಕಲ್ಪಿಕೊಡುವುದಕ್ಕೆ ಇಲ್ಲಿಯ ಜನಪ್ರತಿನಿಧಿಗಳು ಮನಸ್ಸು ಮಾಡುತ್ತಿಲ್ಲ. ಹೀಗಾಗಿ ಈ ಪ್ರದೇಶದ ನಿವಾಸಿಗಳು ದಶಕದಿಂದ ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಬೆಳಗಾವಿ ಸ್ಮಾರ್ಟ್​ಸಿಟಿ ಎಂಬ ಹೆಸರು ಪಡೆಯುತ್ತಿದೆ. ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆ ಪಕ್ಕದಲ್ಲೇ ಕೊಳಚೆ ನೀರು ಸಂಗ್ರಹವಾಗುವುದು ಸ್ಮಾರ್ಟ್​ಸಿಟಿ ಶೋಭೆ ತರುವುದಿಲ್ಲ ಎಂದು ನಾಗರಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

    ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಕೊಳಚೆ ನೀರು ಸಂಗ್ರಹವಾಗಿದ್ದರಿಂದ ಇಲ್ಲಿ ಗಬ್ಬು ವಾಸನೆ ಬರುತ್ತಿದೆ. ವಾಹನ ಸವಾರರು ಮೂಗು ಮುಚ್ಚಿಕೊಂಡು ಸಂಚರಿ ಸುತ್ತಿದ್ದಾರೆ. ಈ ರಸ್ತೆ ಮೂಲಕ ನಿತ್ಯ ಸಾವಿರಾರು ಜನರು ಹಾದು ಹೋಗುತ್ತಾರೆ. ಹೀಗಾಗಿ ಕೊಳಚೆ ನೀರು ಸಂಗ್ರಹವಾಗದಂತೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸಬೇಕು.
    | ಸಿದ್ದಪ್ಪ ಕಮತಗಿ, ವಾಹನ ಸವಾರ, ಸಾಂಬ್ರಾ

    ಅನಧಿಕೃತ ಬಡಾವಣೆಗಳಿಗೆ ಮಾನವೀಯ ದೃಷ್ಟಿಯಿಂದ ರಸ್ತೆ, ನೀರು, ವಿದ್ಯುತ್​ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ಅದಕ್ಕೆ ಪ್ರತಿಯಾಗಿ ಹೆಚ್ಚುವರಿಯಾಗಿ ಆಸ್ತಿ ತೆರಿಗೆ ಕಟ್ಟಿಸಿಕೊಳ್ಳಲಾಗುತ್ತದೆ. ಆದರೆ, ಅಕ್ರಮ ಬಡಾವಣೆಗಳನ್ನು ಸಕ್ರಮಗೊಳಿಸುವುದಕ್ಕೆ ಪಾಲಿಕೆಗೆ ಸರ್ಕಾರದಿಂದ ಯಾವುದೇ ಪ್ರಸ್ತಾವನೆ ಇಲ್ಲ.
    | ರುದ್ರೇಶ ಘಾಳಿ, ಆಯುಕ್ತ ಮಹಾನಗರ ಪಾಲಿಕೆ, ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts