More

    ಸವಾಲುಗಳಿಗೆ ಪರಿಹಾರ ಸೂಚಿಸಲಿ

    ಧಾರವಾಡ: ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ)ಯ ಪುನಶ್ಚೇತನಕ್ಕೆ ಸರ್ಕಾರ ಅಗತ್ಯ ಸಹಕಾರ ನೀಡಲಿದೆ. ಕರೊನಾ ಪರಿಣಾಮ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಸಾಕಷ್ಟು ಸವಾಲುಗಳು ಎದುರಾಗಿವೆ. ಉತ್ತರ ಕರ್ನಾಟಕದ ಕೃಷ್ಣಾ ಎ ಮತ್ತು ಬಿ ಸ್ಕೀಂ, ಕಳಸಾ ಬಂಡೂರಿ ಸೇರಿ ವಿವಿಧ ಯೋಜನೆಗೆ ವಾಲ್ಮಿ ಮಾರ್ಗದರ್ಶನ ನೀಡಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.

    ಇಲ್ಲಿನ ವಾಲ್ಮಿಯ 35ನೇ ಸಂಸ್ಥಾಪನಾ ದಿನ ಅಂಗವಾಗಿ ಸಂಸ್ಥೆಯ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಕೃಷ್ಣಾ ಮೇಲ್ದಂಡೆ ಯೋಜನೆಯ ಎ ಮತ್ತು ಬಿ ಸ್ಕೀಂ ಅಡಿ ಹಂಚಿಕೆಯಾದ ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

    ರಾಜ್ಯದ ಎಲ್ಲ ನೀರಾವರಿ, ಏತ ನೀರಾವರಿ ಯೋಜನೆಗಳು ಸೇರಿ ಜಿಲ್ಲೆಯ ಬೆಣ್ಣೆಹಳ್ಳ, ತುಪ್ಪರಿಹಳ್ಳದಂಥ ಅಪಾರ ನೀರನ್ನು ಹಿಡಿದಿಟ್ಟುಕೊಂಡು ವೈಜ್ಞಾನಿಕವಾಗಿ ಸದುಪಯೋಗ ಮಾಡಿಕೊಳ್ಳುವ ಯೋಜನೆ ಅನುಷ್ಠಾನಗೊಳಿಸಿದರೆ ನಮಗೆ ಬೇರೆ ಜಲ ಮೂಲಗಳ ಅಗತ್ಯ ಇರವುದಿಲ್ಲ. ಈಗಾಗಲೇ ಜಿಲ್ಲೆಯ ಸ್ಥಳೀಯ ಶಾಸಕರೊಂದಿಗೆ ರ್ಚಚಿಸಿ ಯೋಜನೆ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ಯೋಜನೆ ಅನುಷ್ಠಾನವಾದರೆ ಜಿಲ್ಲೆ ಸಂಪೂರ್ಣವಾಗಿ ನೀರಾವರಿ ಸೌಲಭ್ಯ ಪಡೆಯಲಿದೆ ಎಂದರು.

    ಕಳಸಾ-ಬಂಡೂರಿ ನಾಲಾ ತಿರುವಿನಿಂದ ಮಲಪ್ರಭಾಕ್ಕೆ ಮೊದಲ ಹಂತದಲ್ಲಿ ಲಭ್ಯವಾಗಿರುವ ನೀರನ್ನು ಬಳಸಿಕೊಳ್ಳಲು ಕಳೆದ ಆಯವ್ಯಯದಲ್ಲಿ ಸರ್ಕಾರ 500 ಕೋಟಿ ರೂ. ಹಂಚಿಕೆ ಮಾಡಿದೆ. ವಾಲ್ಮಿಯಂತಹ ಸಂಸ್ಥೆಗಳು ಸಮರ್ಥವಾಗಿ ಮಾರ್ಗದರ್ಶನ ಮಾಡಬೇಕು. ರಾಜ್ಯದ ಉತ್ತರ ಭಾಗಕ್ಕೆ ಅಗತ್ಯವಿರುವ ಇಲಾಖೆಗಳು ಮತ್ತು ನಿಗಮ ಮಂಡಳಿ ಸ್ಥಳಾಂತರಿಸುವುದು ಮುಖ್ಯ. ಧಾರವಾಡವನ್ನು ಕೇಂದ್ರವಾಗಿ ಟ್ಟುಕೊಂಡು ವಾಲ್ಮಿ ಸಂಸ್ಥೆ ರಾಜ್ಯದ ಎಲ್ಲ ಜಿಲ್ಲೆಗಳ ನೆಲ ಮತ್ತು ಜಲ ನಿರ್ವಹಣೆಗೆ ಮಾರ್ಗದರ್ಶನ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

    ಐಐಟಿ ನಿರ್ದೇಶಕ ಡಾ. ಪಿ. ಶೇಷು ಮಾತನಾಡಿ, ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ ಏರಿಕೆ, ಅತಿವೃಷ್ಟಿ, ಮತ್ತು ಅನಾ ವೃಷ್ಟಿಗಳಿಗೆ ವಾಲ್ಮಿ ಸಂಸ್ಥೆ ಪರಿಹಾರಗಳನ್ನು ಸಂಶೋಧನೆ ಮಾಡುತ್ತಿದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಜಲ ಸಂಸ್ಥೆ, ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ., ಕೃಷಿ ವಿವಿ ಮತ್ತು ಐಐಟಿ ಸಂಸ್ಥೆಗಳೊಂದಿಗೆ ವಾಲ್ಮಿ ಒಪ್ಪಂದ ಮಾಡಿಕೊಂಡು ಹೊಸ ಸಂಶೋಧನಾ ಯೋಜನೆಗಳನ್ನು ರೂಪಿಸುತ್ತಿದೆ ಎಂದರು.

    ಅಧ್ಯಕ್ಷತೆ ವಹಿಸಿದ್ದ ವಾಲ್ಮಿ ನಿರ್ದೇಶಕ ಡಾ. ರಾಜೇಂದ್ರ ಪೋದ್ದಾರ ಮಾತನಾಡಿ, 2030ರ ಹೊತ್ತಿಗೆ ಜಗತ್ತಿನಲ್ಲಿ ನೀರಿಗಾಗಿ ಪೈಪೋಟಿ ಪ್ರಾರಂಭವಾಗಲಿದೆ. ತೀವ್ರ ಜಲ ಸಂಕಷ್ಟ ಎದುರಾಗುವ ಸಾಧ್ಯತೆಗಳಿವೆ. ಜಲ ಸಾಕ್ಷರತೆ, ನೀರಿನ ಶಿಸ್ತು ಮಾತ್ರ ಇದಕ್ಕೆ ಪರಿಹಾರ. ಜಲಸಾಕ್ಷರತೆ ಸಾಧಿಸಲು ಸಂಶೋಧನೆ, ತರಬೇತಿ, ಪ್ರಾತ್ಯಕ್ಷಿಕೆ ಅಗತ್ಯ. ರಾಜ್ಯದಲ್ಲಿ ಸಾರ್ವಜನಿಕ ವಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಏಕೈಕ ಸಂಸ್ಥೆ ವಾಲ್ಮಿಯಾಗಿದೆ. ಸಂಸ್ಥೆಯ ಪುನಶ್ಚೇತನಕ್ಕೆ ಸಿಬ್ಬಂದಿ ಮತ್ತು ಅನುದಾನದ ಅಗತ್ಯವಿದೆ ಎಂದರು.

    ಬಿ.ವೈ. ಬಂಡಿವಡ್ಡರ ಸ್ವಾಗತಿಸಿದರು. ಪ್ರದೀಪ ದೇವರಮನಿ ನಿರೂಪಿಸಿದರು. ಮೇಘನಾ ನಾಡಿಗೇರ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts