More

    ಸರ್ವಾಧಿಕಾರಿ ಧೋರಣೆಯ ಇಒ ವಿರುದ್ಧ ಪ್ರತಿಭಟನೆ

    ರೋಣ: ರೋಣ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ ಪಾಟೀಲ ಅವರ ಸರ್ವಾಧಿಕಾರಿ ಧೋರಣೆ ಖಂಡಿಸಿ ತಾಪಂ ಸದಸ್ಯರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಅವರ ವಿರುದ್ಧ ಬೀದಿಗಿಳಿದು ಹೋರಾಟ ನಡೆಸುವ ಎಚ್ಚರಿಕೆ ನೀಡಿದ ಘಟನೆ ತಾಪಂ ಸಾಮಾನ್ಯ ಸಭೆಯಲ್ಲಿ ಬುಧವಾರ ನಡೆಯಿತು.

    ಪಟ್ಟಣದ ತಾಪಂ ಸಭಾಭವನದಲ್ಲಿ ತಾಪಂ ಅಧ್ಯಕ್ಷೆ ಪ್ರೇಮವ್ವ ನಾಯಕ ಅಧ್ಯಕ್ಷತೆಯಲ್ಲಿ ಬುಧವಾರ ಜರುಗಿದ ಸಭೆಯಲ್ಲಿ ತಾಪಂ ಕಾಂಗ್ರೆಸ್ ಸದಸ್ಯ ಪ್ರಭು ಮೇಟಿ ಮಾತನಾಡಿ, ಪ್ರತಿ ವರ್ಷ ಫೆಬ್ರವರಿ ಮೊದಲ ದಿನ ಮತ್ತು ಹತ್ತನೇ ದಿನದ ನಡುವೆ ನಡೆಸುವ ತಾಪಂ ಸಭೆಯಲ್ಲಿ ಮುಂಬರುವ ವರ್ಷದ ಆರ್ಥಿಕ ಬಜೆಟ್ ಮಂಡಿಸಬೇಕು ಎಂಬ ಕಾನೂನಿದೆ. ಆದರೆ, ಈ ಕಾನೂನನ್ನು ಗಾಳಿಗೆ ತೂರಿದ ಇಒ ಸಂತೋಷ ಪಾಟೀಲ, ತಾಪಂನ ಯಾವೊಬ್ಬ ಸದಸ್ಯರ ಗಮನಕ್ಕೆ ತರದೇ ತನ್ನ ಮನಸೋ ಇಚ್ಚೆ ಬಜೆಟ್ ಸಿದ್ಧಪಡಿಸಿದ್ದಾನೆ. ಅಲ್ಲದೆ, ತಾಪಂ ಅಧ್ಯಕ್ಷೆ ಹಾಗೂ ಸದಸ್ಯರನ್ನು ಸೌಜನ್ಯಕ್ಕೂ ಗಣನೆಗೆ ತೆಗೆದುಕೊಳ್ಳದೇ ಅಧಿಕಾರ ನಡೆಸುತ್ತಿದ್ದಾನೆ ಎಂದು ಆರೋಪಿಸಿದರು.

    ಆಗ, ಆಡಳಿತಾರೂಢ ಬಿಜೆಪಿ ಸದಸ್ಯ ಮಹಮ್ಮದ ತರಫದಾರ ದನಿಗೂಡಿಸಿ ನಾವು ಊಟಕ್ಕೆ ಉಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ ಎಂದರು. ಇನ್ನೋರ್ವ ಬಿಜೆಪಿ ಸದಸ್ಯ ಸಂದೇಶ ದೊಡ್ಡಮೇಟಿ ಮಾತನಾಡಿ, ತಾಪಂ ಇಒ ಸಂತೋಷ ತಾನು ಮಾಡಿದ ತಪ್ಪಿಗೆ ಕ್ಷಮೆ ಯಾಚಿಸಬೇಕು. ಮುಂದೆ ಈ ರೀತಿಯಾಗದಂತೆ ನಡೆದುಕೊಳ್ಳುತ್ತೇನೆ ಎಂದು ಸಭೆಗೆ ತಿಳಿಸುವ ಮೂಲಕ ಠರಾವು ಪುಸ್ತಕದಲ್ಲಿ ಬರೆದು ಅದನ್ನು ಗದಗ ಜಿಪಂ ಕಾರ್ಯನಿರ್ವಾಹಕ ಅಧಿಕಾರಿಗೆ ಕಳುಹಿಸಬೇಕು. ಅಂದರೆ ಮಾತ್ರ ಸಭೆ ನಡೆಸಬೇಕು, ಇಲ್ಲದಿದ್ದರೆ ಸಭೆಯಿಂದ ಹೊರ ನಡೆಯುತ್ತೇನೆ ಎಂದರು.

    ಕಾಂಗ್ರೆಸ್, ಬಿಜೆಪಿ ಸದಸ್ಯರೆಲ್ಲರೂ ಪಕ್ಷಾತೀತವಾಗಿ ಧ್ವನಿ ಎತ್ತಿದ್ದರಿಂದ ಗರ ಬಡಿದವರಂತಾದ ತಾಪಂ ಇಒ ಸಂತೋಷ ಪಾಟೀಲ ಕ್ಷಮೆಯಾಚಿಸಿ ಠರಾವು ಪುಸ್ತಕದಲ್ಲಿ ಬರೆಸಿದರು.

    ತಾಪಂ ಸದಸ್ಯ ಸಿದ್ದಣ್ಣ ಯಾಳಗಿ ಮಾತನಾಡಿ, ಲಾಕ್​ಡೌನ್ ವೇಳೆ ಗೋವಾದಿಂದ ಸಾಕಷ್ಟು ಜನ ನಮ್ಮಲ್ಲಿ ಬಂದು ರಾಜಾರೋಷವಾಗಿ ತಿರುಗಾಡಿದರು. ಈ ಬಗ್ಗೆ ನೀವು ಯಾವುದೆ, ಕ್ರಮ ಕೈಗೊಳ್ಳಲಿಲ್ಲ ಎಂದು ಟಿಎಚ್​ಒ ಡಾ ಬಿ.ಎಸ್. ಭಜಂತ್ರಿ ಅವರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಡಾ. ಭಜಂತ್ರಿ, ಗೋವಾದಿಂದ ಬಂದವರಿಗೆ ಯಾವುದೆ ರೀತಿಯ ಕ್ವಾರಂಟೈನ್ ಮಾಡದಂತೆ ಸರ್ಕಾರ ನಮಗೆ ಸ್ಪಷ್ಟ ನಿರ್ದೇಶನ ನೀಡಿತ್ತು ಎಂದರು.

    ಕರೊನಾ ಜಾಗೃತಿ ಪುರವಣಿಗೆ ಮೆಚ್ಚುಗೆ

    ‘ವಿಜಯವಾಣಿ’ ಕರೊನಾ ಜಾಗೃತಿ ಪುರವಣಿಯಲ್ಲಿ ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ. ಗಿರಡ್ಡಿ ಕುರಿತು ಪ್ರಕಟಿಸಿದ ವರದಿಗೆ ಸದಸ್ಯ ಪ್ರಭು ಮೇಟಿ ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ಮಾತನಾಡಿದ ಅವರು, ಇಂದು ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಧೋರಣೆಯ ಬಗ್ಗೆ ಜನರು ಹಿಡಿಶಾಪ ಹಾಕುತ್ತಾರೆ. ಇದಕ್ಕೆ ಅಪವಾದವೆಂಬಂತೆ ಡಾ. ಗಿರಡ್ಡಿ ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ. ಅವರು ಇನ್ನೂ ಹೆಚ್ಚಿನ ರೀತಿಯಲ್ಲಿ ಬಡ ರೋಗಿಗಳಿಗೆ ಶಸ್ತ್ರ ಚಿಕಿತ್ಸೆ ಮಾಡಬೇಕೆಂದರೆ, ಈ ಆಸ್ಪತ್ರೆಯಲ್ಲಿ ಅನಸ್ತೇಶಿಯಾ ನೀಡುವ ನೀಡುವ ವೈದ್ಯರಿಲ್ಲ. ಹೀಗಾಗಿ ಬಡಜನರು ಗಿರಡ್ಡಿಯವರ ಸೇವೆಯಿಂದ ವಂಚಿತರಾಗುತ್ತಿದ್ದಾರೆ. ತಕ್ಷಣವೇ ಇಲ್ಲಿ ಅನಸ್ತೇಶಿಯಾ ವೈದ್ಯರನ್ನು ನಿಯುಕ್ತಿಗೊಳಿಸಬೇಕು ಎಂದು ಸಭೆಯಲ್ಲಿ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತಾಲೂಕು ವೈದ್ಯಾಧಿಕಾರಿ ಡಾ ಬಿ.ಎಸ್. ಭಜಂತ್ರಿ, ಈ ಬಗ್ಗೆ ಕೂಡಲೆ ಡಿಎಚ್​ಒ ಅವರ ಜತೆಗೆ ಮಾತನಾಡುವುದಾಗಿ ಭರವಸೆ ನೀಡಿದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts