More

    ಸರ್ಕಾರ ವಿದ್ಯುತ್ ದರ ಹೆಚ್ಚಳ ನಿರ್ಧಾರ ಹಿಂಪಡೆಯಲಿ

    ಯರಗಟ್ಟಿ (ಬೆಳಗಾವಿ) : ದೇಶದಲ್ಲಿ ಕರೊನಾ ಹೊಡೆತಕ್ಕೆ ಎರಡು ವರ್ಷಗಳಿಂದ ಹೋಟೆಲ್ ಉದ್ಯಮ ಸಂಪೂರ್ಣ ನೆಲಕಚ್ಚಿದ್ದು, ಸದ್ಯ ಸುಧಾರಣೆಯ ಹಂತದಲ್ಲಿದೆ. ಆದರೆ, ಇಂತಹ ಸಂಧರ್ಭದಲ್ಲಿ ಸರ್ಕಾರ ಪ್ರತಿ ಯೂನಿಟ್‌ಗೆ 43 ಪೈಸೆ ವಿದ್ಯುತ್ ದರ ಹೆಚ್ಚಿಸುವ ಮೂಲಕ ಬರೆ ಎಳೆದಿದೆ. ಸರ್ಕಾರ ಈ ನಿರ್ಧಾರ ಹಿಂಪಡೆಯಬೇಕು ಎಂದು ಹೋಟೆಲ್ ಉದ್ಯಮಿ ಹಾಗೂ ಬಂಟರ ಸಂಘದ ಅಧ್ಯಕ್ಷ ವಿಠ್ಠಲ ಹೆಗ್ಡೆ ಒತ್ತಾಯಿಸಿದರು.

    ಸಮೀಪದ ಲೋಕಾಪುರದ ಪಟ್ಟಣದ ಬೆಳಗಾವಿ ರಸ್ತೆಯಲ್ಲಿ ಸೋಮವಾರ ಗುಣಾಕರ ಶೆಟ್ಟಿ ಒಡೆತನದ ಶಾಂತಿ ಗ್ರ್ಯಾಂಡ್ ಹೋಟೆಲ್ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರತಿ ತಿಂಗಳು ಲಕ್ಷಾಂತರ ರೂ. ಖರ್ಚು-ವೆಚ್ಚ ಇರುವ ಹೋಟೆಲ್ ಉದ್ಯಮವು ಕರೊನಾ ಕಾಲದಲ್ಲಿ ಸಾಕಷ್ಟು ನಲುಗಿದೆ. ಅಂತಹ ಸಂದರ್ಭದಲ್ಲಿಯೂ ನಾವು ಸರ್ಕಾರದಿಂದ ಯಾವುದೇ ಪರಿಹಾರ ಕೇಳಿಲ್ಲ. ವಿದ್ಯುತ್ ದರ ಹೆಚ್ಚಳದ ಸಮಸ್ಯೆಯನ್ನಾದರೂ ಪರಿಹರಿಸಬೇಕು ಎಂದು ಒತ್ತಾಯಿಸಿದರು. ಹೋಟೆಲ್ ಉದ್ಯಮಿ ಜೆ. ರತ್ನಾಕರ ಶೆಟ್ಟಿ ಮಾತನಾಡಿ, ರಾಜ್ಯದ ಎಲ್ಲ ಪಟ್ಟಣ, ನಗರ ಪ್ರದೇಶದಲ್ಲಿಯೂ ಉಡುಪಿ ಹೋಟೆಲ್ ಕಾರ್ಯನಿರ್ವಹಿಸುತ್ತಿವೆ. ನಮಗೆ ಅನ್ನ, ನೀರು ಕೊಟ್ಟು ನಿಮ್ಮ ಸೇವೆಗೆ ಅವಕಾಶ ಕಲ್ಪಿಸಿದ ಉತ್ತರ ಕರ್ನಾಟಕದ ಜನರ ಸಹಾಯ, ಸಹಕಾರ ನಾವು ಎಂದೂ ಮರೆಯಲು ಸಾಧ್ಯವಿಲ್ಲ, ಈ ಋಣವನ್ನು ನಾವು ಸೇವೆ ಮೂಲಕ ತೀರಿಸಲು ಮಾತ್ರ ಸಾಧ್ಯ ಎಂದರು.

    ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ಮಾತನಾಡಿ, ಸ್ವಚ್ಚತೆ ಮತ್ತು ಶಿಸ್ತಿನಿಂದ ಉಟೋಪಚಾರ ನಿರ್ವಹಿಸುವ ಉಡುಪಿ ಹೋಟೆಲ್‌ಗಳು ಎಂತಹ ಕಷ್ಟದ ಪರಿಸ್ಥಿತಿಯಲ್ಲಿಯೂ ಸೇವೆ ಒದಗಿಸುತ್ತಾರೆ. ಆದರೆ, ಸರ್ಕಾರ ಅವರಿಗೆ ಸಹಕಾರ ನೀಡದಿದ್ದರೆ ಉದ್ಯಮಕ್ಕೆ ಭಾರಿ ಹೊಡೆತ ಬೀಳಲಿದೆ. ಹಾಗಾಗಿ, ಸರ್ಕಾರ ಉತ್ತಮ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.

    ಬ್ರಹ್ಮಾನಂದ ಸ್ವಾಮೀಜಿ, ಡಾ.ಚಂದ್ರಶೇಖರ ಸ್ವಾಮೀಜಿ, ಮಹಾರುದ್ರಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಉದ್ಯಮಿ ಜಯಶೀಲ ಶೆಟ್ಟಿ, ಯುವ ಮುಖಂಡ ಅರುಣ ಕಾರಜೋಳ ಉದ್ಘಾಟಿಸಿದರು. ಸತೀಶ ಬಂಡಿವಡ್ಡರ, ಗುರುರಾಜ ಉದಪುಡಿ, ವೀರೇಶ ಪಂಚಗಟ್ಟಿಮಠ, ಗುಣಾಕರ ಶೆಟ್ಟಿ, ಪ್ರಿಯಾಂಕಾ ಶೆಟ್ಟಿ, ಮಹಾವೀರ ಟೋಪನ್ನವರ, ವಿಜಯ ಶೆಟ್ಟಿ, ಸುಧಾಕರ ಶೆಟ್ಟಿ, ಸುರೇಶ ಶೆಟ್ಟಿ, ಪ್ರಭಾಕರ ಶೆಟ್ಟಿ, ದಿವಾಕರ ಶೆಟ್ಟಿ, ಪ್ರಶಾಂತ ಶೆಟ್ಟಿ, ಆನಂದ ಪೂಜಾರಿ, ಅರುಣ ಶೆಟ್ಟಿ, ರಮೇಶ ಶೆಟ್ಟಿ, ರಕ್ಷಿತ ಶೆಟ್ಟಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts