More

    ಸರ್ಕಾರಿ ಸೌಲಭ್ಯಕ್ಕೆ ಪಡೆಯಲು ಪರದಾಟ

    ಶಿರಸಿ: ರೈತರ ಜಮೀನಿನ ಪಹಣಿ ಪತ್ರಿಕೆಯಲ್ಲಿ ಬೆಳೆ ದಾಖಲಾತಿಗಳು ತಪ್ಪಾಗಿ ನಮೂದಾಗುತ್ತಿದ್ದು, ಇಲಾಖೆಗಳ ತಪ್ಪಿನಿಂದ ರೈತರು ಬೆಳೆ ಸಾಲ ಸೇರಿ ಅನೇಕ ಸರ್ಕಾರಿ ಸೌಲಭ್ಯ ಪಡೆಯಲು ಪರದಾಡುವಂತಾಗಿದೆ.

    ಪಹಣಿ ಪಡೆಯಲು ರೈತರಿಗೆ ಆಗುತ್ತಿದ್ದ ವಿಳಂಬ ತಪ್ಪಿಸುವ ಉದ್ದೇಶದಿಂದ ಸರ್ಕಾರವು ಭೂಮಿ ತಂತ್ರಾಂಶ ರೂಪಿಸಿ ಸುಲಭವಾಗಿ ಕೈಗೆಟುಕುವಂತೆ ಮಾಡಿತ್ತು. ಆದರೆ, ರೈತರು ಪಡೆಯುವ ಬಹುತೇಕ ಪಹಣಿಗಳ ಬೆಳೆ ಕಾಲಂನಲ್ಲಿ ಆ ಸರ್ವೆ ನಂಬರ್​ನಲ್ಲಿ ಮುಖ್ಯ ಬೆಳೆಯಲ್ಲಿ ಮಿಶ್ರ ಬೆಳೆ ಅಥವಾ ನೋ ಕ್ರಾಪ್ ಎಂದು ನಮೂದಾಗಿದೆ. ಕೆಲವೊಂದು ಸರ್ವೆ ನಂಬರ್​ಗಳಲ್ಲಿ ಮಾವು, ಗೇರುಗಳಿದ್ದರೂ ಹುಲ್ಲು ಎಂದು ದಾಖಲಾಗಿದೆ. ಬ್ಯಾಂಕ್​ಗಳಲ್ಲಿ ಸಾಲ ಪಡೆಯಲು, ಬೆಳೆ ವಿಮೆ ಮತ್ತಿತರ ಕಾರಣಗಳಿಗೆ ಜಮೀನಿನಲ್ಲಿ ಯಾವ ಬೆಳೆ ಬೆಳೆಯಲಾಗಿದೆ ಎಂಬುದನ್ನು ಪಹಣಿಯಲ್ಲಿ ನಮೂದಿಸುವುದು ಮುಖ್ಯ. ಜಮೀನಿನಲ್ಲಿರುವ ಬೆಳೆಗಳಿಗೆ ಅನುಗುಣವಾಗಿ ಬ್ಯಾಂಕ್​ಗಳಲ್ಲಿ ಸಾಲ ಸೌಲಭ್ಯ ನೀಡಲಾಗುತ್ತದೆ. ಬೆಳೆ ವಿಮೆ ಮಾಡಿಸುವಾಗ ಕೂಡ ಪಹಣಿಯಲ್ಲಿರುವ ಬೆಳೆಯನ್ನೇ ಪರಿಗಣಿಸಲಾಗುತ್ತದೆ. ಬೆಳೆ ವಿಮೆ ಮಾಡಿಸುವಾಗ ಪಹಣಿಯಲ್ಲಿರುವ ಬೆಳೆಗೂ, ರೈತ ತನ್ನ ಜಮೀನಿನಲ್ಲಿ ಬೆಳೆದಿರುವ ಬೆಳೆಗೂ ವ್ಯತ್ಯಾಸವಿದ್ದರೆ ಅಂತಹ ರೈತರಿಗೆ ಪರಿಹಾರ ಬರುವುದಿಲ್ಲ. ಹೀಗಾಗಿ, ಪಹಣಿಯಲ್ಲಿನ ದೋಷಪೂರಿತ ಮಾಹಿತಿಯಿಂದ ಬ್ಯಾಂಕ್ ಹಾಗೂ ಪ್ರಾಥಮಿಕ ಸಂಘಗಳು ಬೆಳೆ ಸಾಲ ನೀಡಲು ಹಿಂದೇಟು ಹಾಕುವಂತಾಗಿದೆ.

    ಎರಡು ವರ್ಷಗಳಿಂದ ಪಹಣಿ ಪತ್ರಿಕೆಯ ದಾಖಲಾತಿಯಲ್ಲಿ ದೋಷ ಕಂಡು ಬರುತ್ತಿದ್ದು, ಈ ಬಾರಿ ತಾಲೂಕಿನಲ್ಲಿ ಬಹುತೇಕ ಎಲ್ಲ ಪಹಣಿ ಪತ್ರಿಕೆಯಲ್ಲಿ ಈ ಸಮಸ್ಯೆ ಉಂಟಾಗಿದೆ. ಖಾಸಗಿ ಏಜೆನ್ಸಿಗಳ ಮೂಲಕ ಸರ್ವೆ ನಂಬರ್​ಗಳಿಗೆ ದರ ನಿಗದಿ ಮಾಡಿ ಸರ್ವೆ (ಜಿಪಿಎಸ್) ಮಾಡಿಸಿದ್ದು, ಅವರೇ ಸ್ಥಳಕ್ಕೆ ಭೇಟಿ ನೀಡಿ ಪಹಣಿ ಪತ್ರಿಕೆಗಳಲ್ಲಿ ಬೆಳೆ ದಾಖಲು ಮಾಡಿದ್ದಾರೆ. ಆದರೆ, ಬಹುತೇಕ ಕಡೆ ತಪ್ಪು ಮಾಹಿತಿ ನೀಡಿದ್ದು, ಸಾಫ್ಟ್​ವೇರ್ ಸಮಸ್ಯೆಯಿಂದ ಕೆಲವೊಂದು ಬೆಳೆಗಳ ದಾಖಲಾತಿ ಆಗಿಲ್ಲ. ಇದರಿಂದ ರೈತರಿಗೆ ತಮ್ಮ ಪಹಣಿಯಲ್ಲಿನ ದೋಷ ಸರಿಪಡಿಸಲು ಓಡಾಟದ ಜತೆಗೆ ಬೆಳೆ ಸಾಲ ಕೈ ತಪ್ಪುವ ಭೀತಿ ಎದುರಾಗಿದೆ.

    ರೈತರು ತಮ್ಮ ಜಮೀನಿನಲ್ಲಿ ಏನು ಬೆಳೆ ಬೆಳೆಯುತ್ತಿದ್ದಾರೆ ಎಂಬ ಬಗ್ಗೆ ವೈಜ್ಞಾನಿಕವಾಗಿ ಪರಿಶೀಲನೆ ನಡೆಸಿ ಪಹಣಿಯಲ್ಲಿ ನಮೂದಿಸಬೇಕು. ಪಹಣಿಯಲ್ಲಿ ಬೆಳೆ ವ್ಯತ್ಯಾಸವಾಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು. ಆದರೂ ತಪ್ಪಾಗಿ ನಮೂದಾಗುತ್ತಿದ್ದು, ರೈತರನ್ನು ಪದೆಪದೇ ತಿರುಗಾಡಿಸುವ ಬದಲು ಆದ ತಪ್ಪನ್ನು ಸ್ವತಃ ಗ್ರಾಮ ಲೆಕ್ಕಾಧಿಕಾರಿಗಳೇ ತಹಸೀಲ್ದಾರ್ ಕಚೇರಿಯಲ್ಲಿ ಕುಳಿತು ಸರಿಪಡಿಸಿ ಮಾ. 31ರೊಳಗೆ ಎಲ್ಲ ರೈತರಿಗೂ ಅಗತ್ಯವಾದ ಪಹಣಿ ದೊರಕುವಂತೆ ಮಾಡಬೇಕು. | ನರಸಿಂಹ ಹೆಗಡೆ ಕೃಷಿಕ

    ಸಾಫ್ಟ್​ವೇರ್ ಸಮಸ್ಯೆಯಿಂದ ಪಹಣಿ ಪತ್ರಿಕೆಯಲ್ಲಿ ದಾಖಲೆಗಳು ತಪ್ಪಾಗಿ ನಮೂದಾಗುತ್ತಿವೆ. ಮುಖ್ಯ ಬೆಳೆ ಸಹ ಮಿಶ್ರ ಬೆಳೆಯ ಅಡಿಯಲ್ಲಿ ದಾಖಲಾಗಿದೆ. ಇದರ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಇದನ್ನು ಸರಿಪಡಿಸಿಲು ಪ್ರಯತ್ನಿಸಲಾಗುವುದು. | ಎಂ.ಆರ್. ಕುಲಕರ್ಣಿ ತಹಸೀಲ್ದಾರ್

    ತಪ್ಪು ಯಾರದ್ದು?: ಪಹಣಿ ಪತ್ರಿಕೆಗಳ ಬೆಳೆ ಕಾಲಂನಲ್ಲಿ ಬೆಳೆ ಬಿಟ್ಟು ಹೋಗಲು, ತಪ್ಪಾಗಿ ನಮೂದಾಗಲು ಕಾರಣವೇನು ಎಂಬುದು ನಿಗೂಢವಾಗಿದೆ. ತಾಂತ್ರಿಕ ದೋಷದಿಂದ ಹೀಗಾಗುತ್ತಿದೆ ಎಂದು ಹೇಳುತ್ತಿದ್ದರೂ ಶೇ. 30ಕ್ಕೂ ಹೆಚ್ಚು ಪಹಣಿಗಳಲ್ಲಿ ಬೆಳೆ ಹೆಸರು ಬಿಟ್ಟು ಹೋಗಲು, ಶೇ. 50ರಷ್ಟು ಪಹಣಿಯಲ್ಲಿ ಬೆಳೆ ಅದಲು ಬದಲಾಗಲು ತಾಂತ್ರಿಕ ದೋಷ ಕಾರಣವಲ್ಲ. ಗ್ರಾಮ ಲೆಕ್ಕಿಗರು, ಖಾಸಗಿ ಏಜೆನ್ಸಿಗಳು ಸರಿಯಾಗಿ ಬೆಳೆ ಸರ್ವೆ ಮಾಡಿ ನಮೂದಿಸುತ್ತಿಲ್ಲ ಎಂಬ ದೂರುಗಳು ಇವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts