More

    ಸರ್ಕಾರಿ ಆದೇಶಕ್ಕಿಲ್ಲ ಬೆಲೆ, ಸೋಂಕಿತರಿಗೆ ಹಾಸಿಗೆ ಮೀಸಲಿಡದ ಖಾಸಗಿ ಆಸ್ಪತ್ರೆಗಳು, ಕರೊನಾ ಪೀಡಿತರ ಚಿಕಿತ್ಸೆಗೆ ಭಾರಿ ತೊಂದರೆ

    ನೆಲಮಂಗಲ: ಖಾಸಗಿ ಆಸ್ಪತ್ರೆಗಳು ಶೇ.50 ಹಾಸಿಗೆಗಳನ್ನು ಕರೊನಾ ಸೋಂಕಿತರ ಚಿಕಿತ್ಸೆಗಾಗಿ ಮೀಸಲಿಡಬೇಕು ಎಂಬ ಸರ್ಕಾರದ ಆದೇಶಕ್ಕೆ ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿಗಳು ಬೆಲೆ ನೀಡುತ್ತಿಲ್ಲ.

    ತಾಲೂಕಿನಾದ್ಯಂತ ಇರುವ ಖಾಸಗಿ ಆಸ್ಪತ್ರೆಗಳಿಗೆ ಶೇ.50 ಹಾಸಿಗೆಗಳನ್ನು ಸೋಂಕಿತರ ಚಿಕಿತ್ಸೆಗಾಗಿ ಮೀಸಲಿಟ್ಟು ಮಾಹಿತಿ ನೀಡಬೇಕು ಎಂದು ಸರ್ಕಾರ ಈಗಾಗಲೇ 2 ಬಾರಿ ನೋಟಿಸ್ ಜಾರಿ ಮಾಡಿದೆ. ಯಾದರೆ, ಇದಕ್ಕೆ ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿಗಳಿಂದ ಪ್ರತಿಕ್ರಿಯೆ ಬಂದಿಲ್ಲ. ಇದರಿಂದ, ಸೋಂಕಿತರ ಚಿಕಿತ್ಸೆಗೆ ಭಾರಿ ತೊಂದರೆಯುಂಟಾಗುತ್ತಿದೆ.

    ಖಾಸಗಿ ಆಸ್ಪತ್ರೆಗಳು ಶೇ.50 ಹಾಸಿಗೆ ಮೀಸಲಿಡುವ ಮುನ್ನ ಸುವರ್ಣ ಆರೋಗ್ಯ ಟ್ರಸ್ಟ್‌ನಲ್ಲಿ (ಎಸ್‌ಎಟಿ) ನೋಂದಣಿ ಮಾಡಿಕೊಳ್ಳಬೇಕು. ಆದರೆ ಬೆರಳೆಣಿಕೆ ಆಸ್ಪತ್ರೆಗಳನ್ನು ಹೊರತುಪಡಿಸಿ ಬಹುತೇಕ ಆಸ್ಪತ್ರೆಗಳು 5 ವರ್ಷಕ್ಕೊಮ್ಮೆ ಕೆಪಿಎಂಎನಿಂದ ಮಾಡಿಸಿಕೊಳ್ಳಬೇಕಾದ ಪರವಾನಗಿ ನವೀಕರಣ ಮಾಡಿಸಿಕೊಂಡಿಲ್ಲ. ಈ ಕಾರಣದಿಂದ ಆರೋಗ್ಯ ಟ್ರಸ್ಟ್‌ನಿಂದ ಕರೊನಾ ಚಿಕಿತ್ಸೆಗೆ ಪ್ರಮಾಣಪತ್ರ ಸಿಗುತ್ತಿಲ್ಲ. ನೆಪಮಾತ್ರಕ್ಕೆ ಅರ್ಜಿ ಸಲ್ಲಿಸಿ ಖಾಸಗಿ ಆಸ್ಪತ್ರೆಗಳು ಸುಮ್ಮನಾಗಿವೆ. ಹೆಚ್ಚಿನ ಹಣ ಕೊಡುವ ಸೋಂಕಿತರಿಗೆ ಮಾತ್ರ ಚಿಕಿತ್ಸೆ ಮುಂದುವರಿಸಿವೆ.

    ವೈದ್ಯಕೀಯ ಸೌಲಭ್ಯ ಕೊಡುತ್ತಿಲ್ಲ: ತಾಲೂಕಿನ ಟಿ. ಬೇಗೂರು ಸಮೀಪದ ಸಿದ್ಧಾರ್ಥ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯನ್ನು ಜಿಲ್ಲಾಡಳಿತ ಕರೊನಾ ಚಿಕಿತ್ಸಾ ಕೇಂದ್ರವಾಗಿ ಪರಿವರ್ತಿಸಿದೆ. ಇಲ್ಲಿ ದಾಖಲಾಗುವ ಯಾವೊಬ್ಬ ಸೋಂಕಿತರಿಗೂ ಯಾವುದೇ ವೈದ್ಯಕೀಯ ಸೌಲಭ್ಯ ನೀಡುತ್ತಿಲ್ಲ, ವೈದ್ಯರು, ನರ್ಸ್‌ಗಳು ಸಮರ್ಪಕವಾಗಿ ಆರೈಕೆ ಮಾಡುತ್ತಿಲ್ಲ. ಆದರೆ ರೋಗಿಗಳ ಸಂಖ್ಯೆಗನುಗುಣವಾಗಿ ಸರ್ಕಾರದ ಹಣವನ್ನು ಮಾತ್ರ ಪಡೆದುಕೊಳ್ಳಲಾಗುತ್ತಿದೆ ಎಂದು ರೋಗಿಗಳು ಆರೋಪಿಸಿದ್ದಾರೆ.

    ಚಿಕಿತ್ಸೆ ಪಡೆಯಲು ಹಿಂದೇಟು: ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತಿನಿತ್ಯ 120ಕ್ಕೂ ಹೆಚ್ಚು ಮಂದಿ ಆಂಟಿಜನ್ ಮತ್ತು ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಗಾಗುತ್ತಿದ್ದಾರೆ. ಆರ್‌ಟಿಪಿಸಿಆರ್ ಪರೀಕ್ಷೆಯ ವರದಿ 3 ದಿನಗಳ ಬಳಿಕ ದೊರೆಯುತ್ತಿದೆ. ಸೋಂಕಿತರಿಗೆ ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವಂತೆ ತಿಳಿಸಿದರೂ ಯಾರೂ ಸ್ಪಂದಿಸುತ್ತಿಲ್ಲ. ಕಳೆದ ಬಾರಿಯಂತೆ ಸೀಲ್‌ಡೌನ್ ಹಾಗೂ ಸ್ಯಾನಿಟೈಸ್ ಮಾಡುತ್ತಿಲ್ಲ. ಸಮಸ್ಯೆ ಗಂಭೀರವಾದಾಗ ಆಸ್ಪತ್ರೆಗಳಿಗೆ ಬರುತ್ತಿದ್ದು ಸಕಾಲಕ್ಕೆ ಚಿಕಿತ್ಸೆ ದೊರೆಯದೆ ಹಾಗೂ ಭಯದಿಂದಾಗಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

    ವಾಹನಗಳ ಬಿಲ್ ಕೊಟ್ಟಿಲ್ಲ: ಕರೊನಾ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವ ಉದ್ದೇಶದಿಂದ ಸರ್ಕಾರೇತರ ವಾಹನಗಳನ್ನು ಬಾಡಿಗೆ ಪಡೆದುಕೊಳ್ಳಲಾಗಿದೆ. ಆದರೆ 6 ತಿಂಗಳಿಂದಲೂ ವಾಹನಗಳ ಬಾಡಿಗೆಯನ್ನು ಜಿಲ್ಲಾ ಆರೋಗ್ಯಾಧಿಕಾರಿಗಳು ಪಾವತಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.

    ಕರೊನಾ ಸೋಂಕಿತರಿಗೆ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಸಕಾಲಕ್ಕೆ ಕಲ್ಪಿಸಿಕೊಡಬೇಕು. ಆದರೆ ಸಿದ್ಧಾರ್ಥ ಆಸ್ಪತ್ರೆ, ಸರ್ಕಾರಿ ವಿದ್ಯಾರ್ಥಿನಿಲಯಗಳಲ್ಲಿ ಸೌಲಭ್ಯಗಳು ಸಿಗುತ್ತಿಲ್ಲ. ಇದರಿಂದ ರೋಗಿಗಳು ಕಂಗಾಲಾಗಿದ್ದಾರೆ. ಆದ್ದರಿಂದ ಜಿಲ್ಲಾಡಳಿತ ಕೂಡಲೇ ಎಚ್ಚೆತ್ತುಕೊಳ್ಳಬೇಕು. ಇಲ್ಲವಾದಲ್ಲಿ ಸಾವುಗಳ ಹೊಣೆ ಹೊತ್ತುಕೊಳ್ಳಬೆಕಾಗುತ್ತದೆ.
    ಹನುಮಯ್ಯ, ಟಿ.ಬೇಗೂರು ನಿವಾಸಿ

    ಸರ್ಕಾರದ ಆದೇಶದಂತೆ ಕಡ್ಡಾಯವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಶೇ.75 ಹಾಸಿಗೆಗಳನ್ನು ಕರೊನಾ ಸೋಂಕಿತರ ಚಿಕಿತ್ಸೆಗೆ ಮೀಸಲಿಡಬೇಕು ಎಂದು ನೋಟಿಸ್ ನೀಡಲಾಗಿದೆ. ಇದಕ್ಕೆ ಪ್ರತಿಕ್ರಿಯಿಸದ ಆಸ್ಪತ್ರೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.
    ರವಿಕುಮಾರ್, ಜಿಪಂ ಸಿಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts