More

    ಸರ್ಕಾರದ ಅನಾದರ, ಸಂಚಾರಕ್ಕೆ ಸಂಚಕಾರ

    ಕಾರವಾರ: ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಗಂಗಾವಳಿಯಲ್ಲಿ ನದಿಯಲ್ಲಿ ಸೆಳೆವು ಹೆಚ್ಚಿದೆ. ಹೀಗಾಗಿ, ಅಂಕೋಲಾ ತಾಲೂಕಿನ ಡೋಂಗ್ರಿ ಭಾಗಕ್ಕೆ ದೋಣಿ ಸಂಚಾರವನ್ನು ಬುಧವಾರ ಬಂದ್ ಮಾಡಲಾಗಿದೆ.

    ಕಳೆದ ಬಾರಿ ಆಗಸ್ ್ಟ ನಲ್ಲಿ ಗಂಗಾವಳಿ ನದಿ ಉಕ್ಕಿ ಹರಿದ ಪರಿಣಾಮ ರಾಮನಗುಳಿ- ಕಲ್ಲೇಶ್ವರ, ಸುಂಕಸಾಳ- ಡೋಂಗ್ರಿ- ಈ ಎರಡೂ ತೂಗು ಸೇತುವೆಗಳು ಕೊಚ್ಚಿ ಹೋಗಿವೆ. ಈ ಕಾರಣ ದಿಂದಾಗಿ, ಗ್ರಾಮಸ್ಥರಿಗೆ ತಾತ್ಕಾಲಿಕವಾಗಿ ಸಂಚಾರ ಮಾಡಲು ರಾಮನಗುಳಿ- ಕಲ್ಲೇಶ್ವರ ನಡುವೆ ಗಂಗಾವಳಿ ನದಿಯಲ್ಲಿ ಗ್ರಾಪಂನಿಂದ ದೋಣಿ ವ್ಯವಸ್ಥೆ ಮಾಡಲಾಗಿತ್ತು. ಆದರೆ, ನದಿಯಲ್ಲಿ ನೀರಿನ ಹರಿವು ಸ್ವಲ್ಪ ಹೆಚ್ಚಾದರೂ ದೋಣಿ ಸಂಚಾರ ಬಂದಾಗುತ್ತದೆ. ಕಲ್ಲೇಶ್ವರ ಸೇರಿ ಹತ್ತಾರು ಗ್ರಾಮಗಳ ಸಾವಿರಾರು ಜನಕ್ಕೆ ಕೂಗಳತೆ ದೂರದಲ್ಲಿ ರಾಷ್ಟ್ರೀಯ ಹೆದ್ದಾರಿ 63 ಇದೆ. ಆದರೆ, ದೋಣಿ ಸಂಚಾರ ಸ್ಥಗಿತಗೊಂಡರೆ ಅದನ್ನು ತಲುಪಲು 36 ಕಿಮೀ ಸುತ್ತಿ ಕಚ್ಚಾ ದಾರಿಯಲ್ಲಿ ಗುಳ್ಳಾಪುರಕ್ಕೆ ಹೋಗಿ ಸೇರಬೇಕಾಗುತ್ತದೆ. ಈ ಹಿಂದಿನಂತೆಯೇ ಮತ್ತೆ ತೂಗು ಸೇತುವೆ ನಿರ್ಮಾಣ ಮಾಡುವ ಬದಲು ಒಂದು ವಾಹನ ಸಂಚಾರಕ್ಕೆ ಅನುವಾಗುವಂತೆ ದೊಡ್ಡ ಸೇತುವೆ ನಿರ್ಮಾಣ ಮಾಡಲು ಸರ್ಕಾರ ಯೋಜಿಸಿದೆ. ಅದಕ್ಕೆ 17 ಕೋಟಿ ರೂ. ಮಂಜೂರಾಗಿದೆ ಎಂದು ಶಾಸಕಿ ರೂಪಾಲಿ ನಾಯ್ಕ ತಿಳಿಸಿದ್ದಾರೆ. ಆದರೆ, ಈ ಬಾರಿ ಕರೊನಾ ಮಿತವ್ಯಯದ ಹಿನ್ನೆಲೆಯಲ್ಲಿ ಸೇತುವೆ ನಿರ್ವಣಕ್ಕೆ ಹಣ ಬಾರದೇ ಇರಬಹುದು ಎಂಬುದು ಗ್ರಾಮಸ್ಥರ ಆತಂಕವಾಗಿದೆ.

    ಸೇತುವೆ ನಿರ್ವಣಕ್ಕೆ ತಾಂತ್ರಿಕ ಅಭಿಪ್ರಾಯ ಬೇಕಿದ್ದು, ಮಳೆಗಾಲ ಮುಗಿದ ತಕ್ಷಣ ಅದನ್ನು ಪಡೆದು ಕಾಯಂ ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗುವುದು.
    | ರೂಪಾಲಿ ನಾಯ್ಕ ಶಾಸಕಿ, ಕಾರವಾರ-ಅಂಕೋಲಾ ಕ್ಷೇತ್ರ

    ಬಂಗಣೆ ಸೇತುವೆ ಮರುನಿರ್ವಣ
    ಕುಮಟಾ:
    ಕಳೆದ ಬಾರಿ ಕೊಚ್ಚಿ ಹೋದ ಒಂದು ಸೇತುವೆಯನ್ನು ಮಾತ್ರ ಯುದ್ಧೋಪಾದಿಯಲ್ಲಿ ಕಾರ್ಯನಿರ್ವಹಿಸಿ ಮರು ನಿರ್ಮಾಣ ಮಾಡಲಾಗಿದೆ. ಕುಮಟಾ- ಬಂಗಣೆ ಹಳ್ಳಕ್ಕೆ ಇದ್ದ ತೂಗು ಸೇತುವೆ ಕೊಚ್ಚಿ ಹೋಗಿತ್ತು. ಪಿಡಬ್ಲ್ಯುಡಿ ಅಪೆಂಡಿಕ್ಸ್ ಇ ಅಡಿಯಲ್ಲಿ 2.25 ಕೋಟಿ ರೂ. ಅನುದಾನದಲ್ಲಿ ಬಂಗಣೆ ಹಳ್ಳಕ್ಕೆ ಕಾಯಂ ಸೇತುವೆ ನಿರ್ಮಾಣ ಮಾಡಲಾಗಿದೆ. ಇದರಿಂದ ಗ್ರಾಮಸ್ಥರು ಖುಷಿಯಾಗಿದ್ದಾರೆ.

    ಶಿಥಿಲಗೊಂಡಿದ್ದ ದುಸಗಿ ಸೇತುವೆ ಕೆಲಸ ನಿಧಾನ
    ಹಳಿಯಾಳ:
    ಕಳೆದ ವರ್ಷದ ಪ್ರವಾಹದಲ್ಲಿ ಶಿಥಿಲಗೊಂಡಿದ್ದ ದುಸಗಿಯ ಹೊಸ ಸೇತುವೆಯ ದುರಸ್ತಿ ಕಾರ್ಯವು ಕರೊನಾ ಲಾಕ್​ಡೌನ್ ಪರಿಣಾಮ ಮಂದಗತಿಯಲ್ಲಿ ಸಾಗಿದೆ. ಇದರಿಂದ ಈ ಮಳೆಗಾದಲ್ಲಿ ಮತ್ತೆ ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾಗುವ ಆತಂಕ ಎದುರಾಗಿದೆ.

    ಸದ್ಯ ಈ ಹೊಸ ಸೇತುವೆಯ ಮೂಲಕ ಸಂಚಾರವನ್ನು ನಿರ್ಬಂಧಿಸಿ, ಪಕ್ಕದಲ್ಲಿರುವ 146 ವರ್ಷ ಹಳೆಯದಾಗಿರುವ ಸೇತುವೆಯ ಮೇಲೆ ಸಂಚಾರ ಆರಂಭಿಸಲಾಗಿದೆ. ಇದರಿಂದ ಯಾವುದೇ ಸಂದರ್ಭದಲ್ಲೂ ಅಪಾಯ ಸಂಭವಿಸುವ ಸಾಧ್ಯತೆ ಇದೆ.

    ದುರಸ್ತಿ ವಿಳಂಬ: ಆಗಸ್ಟ್ ನಲ್ಲಿ ತಟ್ಟಿಹಳ್ಳದಲ್ಲಿ ಉಂಟಾದ ಪ್ರವಾಹದಿಂದ ಖಾನಾಪುರ-ತಾಳಗುಪ್ಪ ಹೆದ್ದಾರಿಯ ಅಳ್ನಾವರ ರಸ್ತೆಯಲ್ಲಿನ ದುಸಗಿ ಸೇತುವೆ ಶಿಥಿಲಗೊಂಡಿತ್ತು. ಸೇತುವೆ ಬಳಿಯ ರಸ್ತೆಯು ಕೊಚ್ಚಿ ಹೋಗಿತ್ತು. ಪಿಡಬ್ಲ್ಯುಡಿ ಅಧಿಕಾರಿಗಳು ತಕ್ಷಣ ರಸ್ತೆ ದುರಸ್ತಿ ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು. ಆದರೆ, ಮತ್ತೆ ಅಕ್ಟೋಬರ್​ನಲ್ಲಿ ಹಳ್ಳದಲ್ಲಿ ನೀರು ಹೆಚ್ಚಿದ ಪರಿಣಾಮ ಇದೇ ಸೇತುವೆಯಲ್ಲಿ ಬಿರುಕು ಬಂದು, ಕಂಬವೊಂದು ವಾಲಿದ್ದು ಕಾಣಿಸಿಕೊಂಡಿತ್ತು. ರಾಜ್ಯ ಹೆದ್ದಾರಿ ನಿರ್ವಹಣೆಯ 20 ಲಕ್ಷ ರೂ. ಅನುದಾನದಲ್ಲಿ ದುರಸ್ತಿ ಕಾರ್ಯವನ್ನು ಪಿಡಬ್ಲ್ಯುಡಿಯು ಮುಂಬೈ ಮೂಲದ ಗುತ್ತಿಗೆ ಕಂಪನಿಗೆ ಟೆಂಡರ್ ನೀಡಿದೆ. ಬೃಹತ್ ಜಾಕ್ ಮೂಲಕ ಸೇತುವೆ ಮೇಲೆತ್ತಿ ಕಂಬವನ್ನು ನೇರ ಮಾಡಬೇಕಿದೆ. ಹಳ್ಳದಲ್ಲಿ ನೀರು ಇರುವ ಕಾರಣ ರಿಪೇರಿಗೆ ಮಾರ್ಚ್​ವರೆಗೂ ಕಾಯಲಾಯಿತು. ನಂತರ ಕಾಮಗಾರಿ ಪ್ರಾರಂಭವಾದರೂ ಕೆಲವೇ ದಿನದಲ್ಲಿ ಕರೊನಾ ಲಾಕ್​ಡೌನ್​ನಿಂದ ಸ್ಥಗಿತವಾಯಿತು.

    ಸೇತುವೆಯನ್ನು ಮೇಲಕೆತ್ತಿ ವಾಲಿದ ಕಂಬವನ್ನು ನೆರವಾಗಿ ನಿಲ್ಲಿಸಲು 200 ಟನ್ ಸಾಮರ್ಥ್ಯದ ಜಾಕ್ ಹಾಗೂ ರೋಪ್​ಗಳನ್ನು ತರಿಸಲಾಗುತ್ತಿದ್ದು, ಇನ್ನೂ ಹದಿನೈದು ದಿನಗಳಲ್ಲಿ ಈ ಕಾಮಗಾರಿ ಪೂರ್ಣಗೊಳಿಸಲು ಯೋಜಿಸಲಾಗಿದೆ.
    | ಆರ್.ಎಚ್.ಕುಲಕರ್ಣಿ ಹಳಿಯಾಳ ಪಿಡಬ್ಲ್ಯುಡಿ ಎಇಇ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts