More

    ಸರ್ಕಾರಕ್ಕೆ ಕೋಟ್ಯಂತರ ರೂ. ಧೋಖಾ!

    ಜಿ.ಟಿ. ಹೆಗಡೆ ಹುಬ್ಬಳ್ಳಿ

    ಅರ್ಹತೆ ಇಲ್ಲದಿದ್ದರೂ ಸುಳ್ಳು ಮಾಹಿತಿ ನೀಡಿ ಕೇಂದ್ರ ಶ್ರೇಣಿಯ ವೇತನ ಪಡೆಯುತ್ತಿರುವ ಪ್ರಕರಣದ ಕಡತವೊಂದು ರಾಜ್ಯ ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಅತ್ತಿಂದಿತ್ತ ಅಲೆದಾಡುತ್ತಿದ್ದು, ವಿಲೇವಾರಿಗೆ ಮೀನಮೇಷ ಎಣಿಸುತ್ತಿರುವುದಾಗಿ ತಿಳಿದುಬಂದಿದೆ.

    ಈ ವಿಷಯದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡರೆ ಸರ್ಕಾರಕ್ಕೆ ಕೋಟ್ಯಂತರ ರೂ. ಉಳಿತಾಯವಾಗುವ ಸಾಧ್ಯತೆಯಿದೆ.

    ಹುಬ್ಬಳ್ಳಿ ತಾಲೂಕಿನ ತಾರಿಹಾಳ ರೂರಲ್ ಪಾಲಿಟೆಕ್ನಿಕ್​ಗೆ ಸಂಬಂಧಿಸಿದ ಈ ಪ್ರಕರಣ ತನಿಖೆ ಪೂರ್ಣಗೊಂಡರೆ, ರಾಜ್ಯದ 35-40 ಅನುದಾನಿತ ಮತ್ತು ಸರ್ಕಾರಿ ಪಾಲಿಟೆಕ್ನಿಕ್​ಗಳಲ್ಲಿಯ ಹಲವು ಉಪನ್ಯಾಸಕರ ಕೇಂದ್ರ ವೇತನ ಶ್ರೇಣಿಯ ಹೂರಣವೂ ಹೊರಗೆ ಬರಬಹುದು. ಇದೇ ಕಾರಣಕ್ಕಾಗಿ, ಕಾಣದ ಕೈಗಳು ತನಿಖೆ ಪೂರ್ಣ ಗೊಳ್ಳಲು ಬಿಡುತ್ತಿಲ್ಲ ಎಂದು ಹೇಳಲಾಗಿದೆ.

    ಅಕ್ರಮ ವೇತನ ಕುರಿತು ಧಾರವಾಡದ ಪ್ರವೀಣ ಎಸ್. ಎಂಬವರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ಅರ್ಜಿ ಕಳುಹಿಸಿದ್ದರು. ಇದು ನೇರವಾಗಿ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಎಸಿಬಿ ಅಧಿಕಾರಿಗಳು ತಾಂತ್ರಿಕ ಶಿಕ್ಷಣ ಇಲಾಖೆಗೆ ಪತ್ರ ಕಳುಹಿಸಿ, ಪರಿಶೀಲಿಸಿ ಕ್ರಮ ಕೈಗೊಳ್ಳಲು ಸಲಹೆ ಮಾಡಿದ್ದರು. ಪ್ರಕರಣ ಕುರಿತು ತಾಂತ್ರಿಕ ಶಿಕ್ಷಣ ಇಲಾಖೆ ಮುಖ್ಯ ಜಾಗೃತ ಅಧಿಕಾರಿ ಮಾಹಿತಿ ಸಂಗ್ರಹಿಸಿದ್ದಾರೆ. ಆದರೆ, ವಿಷಯ ಇನ್ನೂ ರ್ತಾಕ ಅಂತ್ಯ ಕಂಡಿಲ್ಲ.

    ಎಐಸಿಟಿಇ ನಿಯಮಗಳ ಪ್ರಕಾರ 2001ರ ನಂತರ ಕೆಲಸಕ್ಕೆ ಸೇರಿದ ಪ್ರಾಧ್ಯಾಪಕರು ಬಿ.ಇ.ಯಲ್ಲಿ ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದರೆ ಮಾತ್ರ ಕೇಂದ್ರ ಶ್ರೇಣಿ ವೇತನಕ್ಕೆ ಅರ್ಹರು. ಹೀಗಾಗಿ, 2003-04ರಲ್ಲಿ ಕೆಲಸಕ್ಕೆ ಸೇರಿದ ಬಿ.ಇ. ಪ್ರಥಮ ದರ್ಜೆ ಹೊಂದಿಲ್ಲದ ಕೆಲವರು, ತಾವು 8-10 ವರ್ಷ ಹಿಂದೆ, ಅನುದಾನಕ್ಕೆ ಒಳಪಡುವ ಪೂರ್ವದಲ್ಲೇ ಕೆಲಸಕ್ಕೆ ಸೇರಿರುವುದಾಗಿ ಸುಳ್ಳು ಮಾಹಿತಿ ನೀಡಿ, 2008ರಿಂದ ಎಐಸಿಟಿಇ ವೇತನ ಪಡೆಯುತ್ತಿದ್ದಾರೆ ಎನ್ನುವುದು ದೂರಿನ ಸಾರಾಂಶ.

    ಬೇರೆ ಇಲಾಖೆಯಲ್ಲಿ ಇಂಥ ಪ್ರಕರಣದಲ್ಲಿ ಹಿಂದಿನ ಪಿಎಫ್ ಯಾದಿ ತೆಗೆದು ಹೋಲಿಸಿ ಕ್ರಮ ಕೈಗೊಂಡಿದ್ದಿದೆ. ತಾಂತ್ರಿಕ ಶಿಕ್ಷಣ ಇಲಾಖೆಯೂ ಶಂಕಿತರ 2000ನೇ ಇಸ್ವಿಗಿಂತ ಹಿಂದಿನ ಪಿಎಫ್ ಯಾದಿ ತೆಗೆದರೆ ಸತ್ಯಾಸತ್ಯತೆ ಗೊತ್ತಾಗುತ್ತದೆ. ಆದರೆ, ಯಾವುದೋ ಕಾರಣಕ್ಕೆ ಅಂಥ ಕ್ರಮ ಮಾತ್ರ ನಡೆಯುತ್ತಿಲ್ಲ ಎಂದು ತಿಳಿದುಬಂದಿದೆ.

    ಬೊಕ್ಕಸಕ್ಕೆ ನಷ್ಟ ಹೇಗೆ?: ಕೇಂದ್ರ ಶ್ರೇಣಿಯಂತೆ ಪ್ರತಿ ಪ್ರಾಧ್ಯಾಪಕರಿಗೆ ರಾಜ್ಯ ಸರ್ಕಾರ ಮಾಸಿಕ 1.5 ಲಕ್ಷ ರೂ.; ರಾಜ್ಯ ಶ್ರೇಣಿಯಾದರೆ ಅಂದಾಜು 90 ಸಾವಿರ ವೇತನ ನೀಡುತ್ತದೆ. ತಾರಿಹಾಳ ಪಾಲಿಟೆಕ್ನಿಕ್ ಒಂದರಲ್ಲೇ 15ಕ್ಕಿಂತ ಹೆಚ್ಚು ನೌಕರರಿಗೆ ವರ್ಷಕ್ಕೆ ಕೋಟಿ ರೂ.ಗಿಂತ ಹೆಚ್ಚು ಹಣ ಅಕ್ರಮವಾಗಿ ಪಾವತಿಯಾಗುತ್ತಿದೆ. ಎಐಸಿಟಿಇ ವೇತನದ ಇಂಥ ಎಲ್ಲ ಪಾಲಿಟೆಕ್ನಿಕ್ ನೌಕರರ ಕೂಲಂಕಷ ಮಾಹಿತಿ ಸಂಗ್ರಹಿಸಿದರೆ ರಾಜ್ಯ ಸರ್ಕಾರಕ್ಕೆ ಹಲವು ಕೋಟಿ ರೂ. ಉಳಿತಾಯವಾಗುವ ಸಾಧ್ಯತೆ ಇದೆ.

    ಇಲಾಖೆಯ ಜಾಗೃತ ಕೋಶದ ಮುಖ್ಯ ಜಾಗೃತ ಅಧಿಕಾರಿಗಳು ಈ ಹಿಂದೆ ಕೆಲವು ಮಾಹಿತಿ ನೀಡುವಂತೆ ಪತ್ರ ಕಳುಹಿಸಿದ್ದರು. ಆ ಪ್ರಕಾರ ನಮ್ಮಲ್ಲಿ ಲಭ್ಯವಿದ್ದ ಮಾಹಿತಿಯನ್ನು ಕಳುಹಿಸಲಾಗಿದೆ. | ಎ.ಬಿ. ಕುಲಕರ್ಣಿ ತಾರಿಹಾಳ ರೂರಲ್ ಪಾಲಿಟೆಕ್ನಿಕ್ ಪ್ರಾಚಾರ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts