More

    ದಿನದಿಂದ ದಿನಕ್ಕೆ ಬಡವಾಗುತ್ತಿರುವ ಕನ್ನಡ ಭಾಷೆ

    ಚನ್ನರಾಯಪಟ್ಟಣ: ಕನ್ನಡ ಭಾಷೆ ಹಲವಾರು ಬರಹಗಾರರನ್ನು ತನ್ನ ತೆಕ್ಕೆಯಲ್ಲಿಟ್ಟುಕೊಂಡು ಶ್ರೀಮಂತಿಕೆಯಲ್ಲಿದೆ. ಆದರೆ ಅನ್ಯ ಭಾಷೆಗಳ ಆಕ್ರಮಣದಿಂದ ನಿರಂತರವಾಗಿ ಬಡವವಾಗುತ್ತಲೇ ಇದೆ ಎಂದು ಮಕ್ಕಳ ಸಾಹಿತ್ಯ ಸಮ್ಮೇಳನಾಧ್ಯಕ್ಷೆ, ವಿದ್ಯಾರ್ಥಿನಿ ಬಿ.ಸಿ.ವಿಸ್ಮಯ ಅಭಿಪ್ರಾಯಪಟ್ಟರು.


    ಪಟ್ಟಣದ ಸರ್ಕಾರಿ ಮಾಧ್ಯಮಿಕ ಶಾಲಾ ಆವರಣದಲ್ಲಿ ಸೋಮವಾರ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ಚನ್ನರಾಯಪಟ್ಟಣ ತಾಲೂಕು ದ್ವಿತೀಯ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದರು.


    ತ್ರಿಭಾಷಾ ಸೂತ್ರದಡಿ ಹಿಂದಿ ಬಲವಂತದ ಹೇರಿಕೆ, ಇಂಗ್ಲಿಷ್ ಹಾಗೂ ಗಡಿ ಭಾಗದಲ್ಲಿ ಅನ್ಯರಾಜ್ಯಗಳ ಪ್ರಭಾವದಿಂದ ನಮ್ಮ ಕನ್ನಡ ಭಾಷೆ ನಿರಂತರವಾಗಿ ಕುಗ್ಗುತ್ತಿದೆ. ಆದ್ದರಿಂದ ರಾಜ್ಯದಲ್ಲಿ ಅದರಲ್ಲೂ ಅತಂತ್ರವಾಗಿರುವ ಗಡಿನಾಡಿನಲ್ಲಿ ಕನ್ನಡ ಭಾಷೆ ಉಳಿವಿಗಾಗಿ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.


    ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
    ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಚಲನಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣ, ಮೊಬೈಲ್ ಜಗತ್ತಿನಲ್ಲಿ ಕಳೆದು ಹೋಗುತ್ತಿರುವ ಯುವ ಜನಾಂಗವನ್ನು ಹೊಸ ಲೋಕಕ್ಕೆ ತರಲು ಮಕ್ಕಳ ಸಾಹಿತ್ಯ ಪರಿಷತ್ ಪೂರಕವಾಗಿದೆ. ಪ್ರತಿ ವ್ಯಕ್ತಿಯಲ್ಲಿಯೂ ಕಥೆಗಾರ, ಭಾಷಣಗಾರ, ಕವಿತೆಯನ್ನು ರಚಿಸುವ ಕಲೆಗಳಿರುತ್ತವೆ. ಆದರೆ ಅಭಿವ್ಯಕ್ತಿಗೆ ಅವಕಾಶವಿಲ್ಲದೇ ಅವು ಮುದುಡಿ ಹೋಗುತ್ತವೆ. ಇಂತಹ ಕಾರ್ಯಕ್ರಮಗಳಿಂದ ಪ್ರತಿಭಾನ್ವಿತ ಮಕ್ಕಳಿಗೆ ಅವಕಾಶ ದೊರೆತಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.


    ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ವಿದ್ಯಾರ್ಥಿಗಳು ಅಂಕ ಗಳಿಸುವುದೇ ದೊಡ್ಡ ಸಾಧನೆ ಎಂದು ತಿಳಿಯಬಾರದು. ಜೀವನದಲ್ಲಿ ಇತರ ಚಟುವಟಿಕೆ ಕೂಡ ಅಷ್ಟೇ ಮುಖ್ಯ. ಶಾಲೆಗಳಲ್ಲಿ ಸಾಹಿತ್ಯದ ಆಸಕ್ತಿ ಹೆಚ್ಚಿಸುವ ಪೂರಕ ವಾತಾವರಣ ಸೃಷ್ಟಿಯಾಗಬೇಕು ಎಂದರು.


    ಶ್ರೀ ಶಂಭುನಾಥ ಸ್ವಾಮೀಜಿ ಆಶೀರ್ವಚನ ನೀಡಿ, ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಯನ್ನು ಮಾತನಾಡುವವರು ಇತ್ತೀಚೆಗೆ ಅತ್ಯಂತ ವಿರಳವಾಗುತ್ತಿದ್ದಾರೆ. ಪ್ರತಿ ಶಬ್ದಗಳ ನಡುವೆಯೂ ಆಂಗ್ಲ ಭಾಷೆಯ ಪದಗಳ ಜೋಡಣೆ ಸಾಮಾನ್ಯವಾಗಿದೆ. ಆಂಗ್ಲ ಭಾಷಾ ವ್ಯಾಮೋಹದಿಂದ ಮೊದಲು ನಾವು ಹೊರಬರಬೇಕಿದೆ ಎಂದರು.


    ಸಮ್ಮೇಳನದಲ್ಲಿ ಪುರಸಭಾ ಅಧ್ಯಕ್ಷೆ ರೇಖಾ ಅನಿಲ್, ಉಪಾಧ್ಯಕ್ಷೆ ಲಕ್ಷ್ಮೀ ವೆಂಕಟೇಶ್, ಸ್ಥಾಯಿ ಸಮಿತಿ ಅಧ್ಯಕ್ಷೆ ಬನಶಂಕರಿ ರಘು, ಮುಖ್ಯಾಧಿಕಾರಿ ಕೆ.ಎನ್.ಹೇಮಂತ್, ವೆಂಕಟೇಶ್, ನಾಗಪ್ಪ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಲ್ಲೇಶ್ ಗೌಡ, ತಾಲೂಕು ಅಧ್ಯಕ್ಷ ಹಡೇನಹಳ್ಳಿ ಲೋಕೇಶ್, ಬಿಇಒ ಸೋಮನಾಥ್, ಬಿಆರ್‌ಸಿ ಅನಿಲ್ , ಮಹದೇವ್, ಗಂಗಾಧರ್, ಭಾರತಿ ನಾಗೇಶ್, ಜಗದೀಶ್, ಪುಟ್ಟಸ್ವಾಮಿಗೌಡ, ಸಾಹಿತಿ ಗಿರಿರಾಜ್, ಕುಸುಮ ಬಾಲಕೃಷ್ಣ, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಹಾಜರಿದ್ದರು.


    ಮಕ್ಕಳ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಸಿ.ಎನ್.ಅಶೋಕ್ ಆಶಯ ನುಡಿ ನುಡಿಗಳನ್ನಾಡಿದರು. ತಾಲೂಕು ಅಧ್ಯಕ್ಷ ಎ.ಎಲ್.ನಾಗೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಚಾಲಕ ಎ.ಎಂ.ಜಯರಾಮ್ ಸ್ವಾಗತಿಸಿದರು. ಮಹಿಳಾ ಕಾರ್ಯದರ್ಶಿ ನೀಲಾ ನಾಗೇಶ್ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts