More

    ಸಮಂದೂರಿನಲ್ಲಿ ಅಕ್ರಮ ಬಡಾವಣೆ ತೆರವು, ಪಿಡಿಒ ಸಹಿ, ಸೀಲು ನಕಲಿ ಮಾಡಿ ಭೂಗಳ್ಳತನ, ತಹಸೀಲ್ದಾರ್ ದಿನೇಶ್ ನೇತೃತ್ವದಲ್ಲಿ ಕಾರ್ಯಾಚರಣೆ

    ಆನೇಕಲ್: ತಾಲೂಕಿನ ಸಮಂದೂರಿನ ಹಸಿರು ವಲಯದಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿದ್ದ ಬಡಾವಣೆಯನ್ನು ಶುಕ್ರವಾರ ಆನೇಕಲ್ ತಹಸೀಲ್ದಾರ್ ದಿನೇಶ್, ತಾಪಂ ಇಒ ಲಕ್ಷ್ಮೀನಾರಾಯಣ ನೇತೃತ್ವದಲ್ಲಿ ತೆರವುಗೊಳಿಸಲಾಯಿತು.

    ಸಮಂದೂರು ಸರ್ವೇ ನಂ.467/1 ಹಾಗೂ ಅಕ್ಕಪಕ್ಕದ ಜಮೀನಿನಲ್ಲಿ ಭೂಗಳ್ಳರು 4 ಎಕರೆ ಭೂಮಿಯನ್ನು ಅತಿಕ್ರಮಿಸಿಕೊಂಡು ಅಕ್ರಮವಾಗಿ ಲೇಔಟ್ ಮಾಡಿ, ನಿವೇಶನಗಳನ್ನು ಮಾಡಿದ್ದರು. ಹಾಗೆಯೇ ಸಮಂದೂರು ಗ್ರಾಪಂ ಪಿಡಿಒ ಸಹಿ ಹಾಗೂ ಸೀಲನ್ನು ನಕಲಿ ಮಾಡಿ, ದಾಖಲೆ ಸಿದ್ಧಪಡಿಸಿದ್ದರು ಎನ್ನಲಾಗಿತ್ತು. ಈಗ ಬಡಾವಣೆಯನ್ನು ತೆರವುಗೊಳಿಸಿರುವುದರಿಂದ, ನಿವೇಶನ ಖರೀದಿಸಿದ್ದವರು ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಈ ಬಗ್ಗೆ ಮಾಹಿತಿ ನೀಡಿದ ತಹಸೀಲ್ದಾರ್ ದಿನೇಶ್ ಮಾತನಾಡಿ, ಸಮಂದೂರು ಗ್ರಾಪಂ ಪಿಡಿಒ ಅವರ ಸಹಿ ಹಾಗೂ ಪಂಚಾಯಿತಿಯ ನಕಲಿ ಸೀಲ್ ಬಳಸಿ, 4 ಎಕರೆ ಭೂಮಿಯಲ್ಲಿ 183 ಸೈಟುಗಳಲ್ಲಿ ವಿಂಗಡಿಸಿ, ಅಕ್ರಮ ದಾಖಲೆಗಳನ್ನು ಸೃಷ್ಟಿಸಿ ಲೇಔಟ್ ನಿರ್ಮಿಸಲಾಗಿತ್ತು. ಕಡಿಮೆ ಬೆಲೆಗೆ ನಿವೇಶನಗಳನ್ನು ನೀಡುವುದಾಗಿ ನಂಬಿಸಿ ತಲಾ 5 ಲಕ್ಷ ರೂ.ನಂತೆ 50ಕ್ಕೂ ಹೆಚ್ಚು ನಿವೇಶನಗಳನ್ನು ಮಾರಾಟ ಮಾಡಿ, ಕೋಟ್ಯಂತರ ರೂಪಾಯಿ ಹಣವನ್ನು ಕಬಳಿಸಲಾಗಿದೆ. ಸದ್ಯ ಬಡಾವಣೆಯನ್ನು ತೆರವುಗೊಳಿಸಲಾಗಿದೆ. ತಪ್ಪು ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

    ತಾಪಂ ಇಒ ಲಕ್ಷ್ಮೀನಾರಾಯಣ್ ಮಾತನಾಡಿ, ಭೂಮಿ ಕಂದಾಯ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಸಹಿಯನ್ನು ನಕಲು ಮಾಡಿ, ನಕಲಿ ಸೀಲ್ ಬಳಸಿರುವುದು ಗೊತ್ತಾಗುತ್ತಲೇ ಪಿಡಿಒ ಅವರು ತಹಸೀಲ್ದಾರ್ ಅವರಿಗೆ ಮಾಹಿತಿ ನೀಡಿದರು. ಸ್ಥಳವನ್ನು ಪರಿಶೀಲಿಸಿ, ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದಾಗ ಅದು ಅಕ್ರಮ ಬಡಾವಣೆ ಎಂಬುದು ಖಚಿತಪಟ್ಟಿತು. ಈ ಹಿನ್ನೆಲೆಯಲ್ಲಿ ತೆರವುಗೊಳಿಸಲಾಗಿದೆ ಎಂದು ಹೇಳಿದರು.

    ಖರೀದಿದಾರರಿಂದಲೇ ಬಯಲಾಯಿತು ಅಕ್ರಮ: ಲೇಔಟ್‌ನಲ್ಲಿ ನಿವೇಶನ ಖರೀದಿಸಿದವರು ಸಂಬಂಧಪಟ್ಟ ಅಧಿಕಾರಿಗಳ ಬಳಿ ಭೂಮಿ ವಿವರ ಕೇಳಿದಾಗ ಅಕ್ರಮವಾಗಿ ಲೇಔಟ್ ನಿರ್ಮಾಣವಾದ ಸಂಗತಿ ಬೆಳಕಿಗೆ ಬಂದಿದೆ. ಲೇಔಟ್ ತೆರವು ಮಾಡಿ ಅಡ್ಡಲಾಗಿ ಆಳವಾದ ಟ್ರಂಚ್ ನಿರ್ಮಿಸಲಾಗಿದೆ ಎಂದು ತಾಪಂ ಇಒ ಲಕ್ಷ್ಮೀನಾರಾಯಣ್ ವಿವರಿಸಿದರು.

    ಬೆಂಗಳೂರಿನ ಸುತ್ತಮುತ್ತ ಕಡೆ ಒಂದು ಅಡಿ ಜಾಗಕ್ಕೂ ಚಿನ್ನದ ಬೆಲೆ ಇದೆ. ಆದ್ದರಿಂದ ನಿವೇಶನಗಳನ್ನು ಖರೀದಿಸುವಾಗ ಜನರು ಎಚ್ಚರದಿಂದ ಹೆಜ್ಜೆ ಇಡಬೇಕು. ಇಲ್ಲವಾದಲ್ಲಿ ಇಂಥ ಭೂಗಳ್ಳರಿಂದ ಮೋಸ ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
    ದಿನೇಶ್, ಆನೇಕಲ್ ತಹಸೀಲ್ದಾರ್

    ವಾರದ ಗ್ರಾಪಂ ಕಚೇರಿಗೆ ಬಂದ ನಾಲ್ಕೈದು ಜನರು ಭೂದಾಖಲೆ ಕೇಳಿದ್ದರು. ಆಗ ನನ್ನ ಸಹಿ ನಕಲಿ ಆಗಿರುವುದು ಗೊತ್ತಾಗಿತ್ತು. ಅಲ್ಲದೆ, ಪಂಚಾಯಿತಿಯ ನಕಲಿ ಸೀಲ್ ಮಾಡಿರುವ ಬಗ್ಗೆ ಬಡಾವಣೆ ಮಾಲೀಕ ಎನ್ನಲಾದ ವಿಜಯಕುಮಾರ್ ಎಂಬುವನ ವಿರುದ್ಧ ಮೇಲಧಿಕಾರಿಗಳಿಗೆ ಹಾಗೂ ಅತ್ತಿಬೆಲೆ ಪೊಲೀಸರಿಗೆ ದೂರು ನೀಡಿದ್ದೇನೆ.
    ಸುಭಾನ್ ಖಾನ್ ಪಿಡಿಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts