More

    ಸಬ್​ರಿಜಿಸ್ಟ್ರಾರ್ ಕಚೇರಿಯಲ್ಲಿ ನೂಕು ನುಗ್ಗಲು

    ಹುಬ್ಬಳ್ಳಿ: ಬೆಳೆ ಸಾಲ ಪಡೆಯುವ ಸಲುವಾಗಿ ಅಡಮಾನ ನೋಂದಣಿಗಾಗಿ ನೂರಾರು ರೈತರು ಬುಧವಾರ ವಿದ್ಯಾನಗರದ ಉಪ ನೋಂದಣಾಧಿಕಾರಿ ಕಚೇರಿ(ಉತ್ತರ)ಗೆ ಆಗಮಿಸಿದ್ದರಿಂದ ನೂಕು ನುಗ್ಗಲು ಉಂಟಾಗಿತ್ತು.

    ಲಾಕ್​ಡೌನ್ ತೆರವಾದ ಹಿನ್ನೆಲೆಯಲ್ಲಿ ರೈತರು ಬೆಳೆ ಸಾಲ ಪಡೆಯಲು ಮುಗಿಬಿದ್ದಿದ್ದಾರೆ. ಹಾಗೆಯೇ, ಆಸ್ತಿ ಖರೀದಿ- ಮಾರಾಟಕ್ಕಾಗಿಯೂ ಹಲವರು ಕಚೇರಿಗೆ ಆಗಮಿಸಿದ್ದರು. ಕಚೇರಿಯಲ್ಲಿ ಸಿಬ್ಬಂದಿ ಕೊರತೆಯಿಂದ ಮತ್ತಷ್ಟು ಸಮಸ್ಯೆಯಾಗಿದೆ. ಇಬ್ಬರು ಉಪ ನೋಂದಣಾಧಿಕಾರಿ, ಓರ್ವ ಎಫ್​ಡಿಸಿ, ಓರ್ವ ಎಸ್​ಡಿಸಿ ಮಾತ್ರ ಇದ್ದಾರೆ. ಅಟೆಂಡರ್ ಹುದ್ದೆ ಖಾಲಿ ಇದೆ. ಹಲವು ಕಂಪ್ಯೂಟರ್ ಆಪರೇಟರ್​ಗಳು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಸಾಕಷ್ಟು ಸಿಬ್ಬಂದಿ ಇಲ್ಲದಿರುವುದರಿಂದ ಜನರನ್ನು ನಿಯಂತ್ರಿಸುವುದು ಮತ್ತಷ್ಟು ಕಠಿಣವಾಗಿತ್ತು.

    ಕರೊನಾ ನಿಯಮಾವಳಿ ಪಾಲಿಸದೇ ಜನ ಅಂಟಿಕೊಂಡು ಸರತಿಯಲ್ಲಿ ನಿಂತಿದ್ದರು. ಹಲವರು ಮಾಸ್ಕ್ ಧರಿಸದೇ ಓಡಾಡುತ್ತಿದ್ದರು. ಬಳಿಕ ಸ್ಥಳಕ್ಕಾಗಮಿಸಿದ ವಿದ್ಯಾನಗರ ಠಾಣೆ ಪೊಲೀಸರು ಜನರನ್ನು ನಿಯಂತ್ರಿಸಲು ಹರಸಾಹಸ ಪಟ್ಟರು. ದಿನವಿಡೀ ಸರತಿಯಲ್ಲಿ ನಿಂತರೂ ಹಲವರ ಕೆಲಸ ಆಗಲಿಲ್ಲ. ಸಮಸ್ಯೆ ಬಗೆಹರಿಸಿ ವೇಗವಾಗಿ ಕೆಲಸ ಮಾಡಿಕೊಡುವಂತೆ ಸಾರ್ವಜನಿಕರು ಆಗ್ರಹಿಸಿದರು.

    ದಲ್ಲಾಳಿಗಳ ಹಾವಳಿ ದೂರು

    ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿದೆ. ಕೆಲ ಅಧಿಕಾರಿ, ಸಿಬ್ಬಂದಿ ಜತೆಗೆ ಶಾಮೀಲಾಗಿರುವ ಏಜೆಂಟರು ಕದ್ದು ಮುಚ್ಚಿ ವ್ಯವಹಾರ ಮಾಡುತ್ತಾರೆ. ಜನರಿಂದ ಹೆಚ್ಚು ಹಣ ಪಡೆದು ಒಳಗೊಳಗೆ ತಮ್ಮ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಇದರಿಂದ ನಮ್ಮ ಕೆಲಸ ನಿಧಾನವಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದರು.

    ಬ್ಯಾಂಕ್ ಸಿಬ್ಬಂದಿ ನಿರ್ಲಕ್ಷ್ಯ

    ಬ್ಯಾಂಕ್ ಸಿಬ್ಬಂದಿ ಏಕಾಏಕಿ ರೈತರನ್ನು ಉಪ ನೋಂದಣಾಧಿಕಾರಿ ಕಚೇರಿಗೆ ಕಳುಹಿಸುತ್ತಿದ್ದಾರೆ. ಆನ್​ಲೈನ್ ಮೂಲಕ ಅವರೇ ಮಾರ್ಟ್ ಗೇಜ್ ಪಡೆಯಬಹುದಾದರೂ ಇಲ್ಲಿಗೆ ಕಳುಹಿಸುತ್ತಿದ್ದಾರೆ. ಒಂದು ವಾರ ಮುಂಚಿತವಾಗಿ ಪಟ್ಟಿ ಕೊಟ್ಟರೆ ಟೋಕನ್ ನೀಡಲಾಗುತ್ತದೆ. ಇದರಿಂದ ಜನಸಂದಣಿ ಕಡಿಮೆ ಮಾಡಬಹುದು ಎಂದು ಸಬ್ ರಿಜಿಸ್ಟ್ರಾರ್ ಸೌಮ್ಯಲತಾ ಪತ್ರಿಕೆಗೆ ಪ್ರತಿಕ್ರಿಯಿಸಿದರು.

    ಅಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹ

    ಹುಬ್ಬಳ್ಳಿ: ವಕೀಲರು ನೋಂದಣಿ ಕೆಲಸಕ್ಕೆ ತಮ್ಮ ಕಚೇರಿಗೆ ಬರಬಾರದು ಎಂದು ವಿದ್ಯಾನಗರದ ಉಪ ನೋಂದಣಾಧಿಕಾರಿ (ಉತ್ತರ) ಸೌಮ್ಯಲತಾ ಅವರು ಮೌಖಿಕವಾಗಿ ತಾಕೀತು ಮಾಡುತ್ತಿದ್ದು, ಈ ಕೂಡಲೆ, ಅವರ ವಿರುದ್ಧ ಕ್ರಮ ಜರುಗಿಸಿ ವರ್ಗಾವಣೆ ಮಾಡಬೇಕು ಎಂದು ಹುಬ್ಬಳ್ಳಿ ವಕೀಲರ ಸಂಘ ಆಗ್ರಹಿಸಿದೆ.

    ವಕೀಲರು ನೋಂದಣಿ ಕಚೇರಿಗೆ ಹೋದಾಗ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಅನಗತ್ಯವಾಗಿ ದಾಖಲೆಗಳನ್ನು ಕೇಳಿ ಸತಾಯಿಸುತ್ತಾರೆಂಬ ದೂರುಗಳಿವೆ. ಇದರಿಂದ ವಕೀಲರಿಗೆ ಹಾಗೂ ಸಾರ್ವಜನಿಕರಿಗೆ ಸಮಸ್ಯೆಯಾಗಿದೆ ಎಂದು ಆರೋಪಿಸಿ ಸಂಘದ ಪ್ರಧಾನ ಕಾರ್ಯದರ್ಶಿ ಅಶೋಕ ಅಣವೇಕರ ಕಂದಾಯ ಸಚಿವ ಆರ್. ಅಶೋಕ ಅವರಿಗೆ ಪತ್ರ ಬರೆದಿದ್ದಾರೆ. ಕೋಟ್ಯಂತರ ರೂಪಾಯಿ ಆದಾಯ ಸಂಗ್ರಹವಾಗುವ ಈ ಕಚೇರಿಯಲ್ಲಿ ಬಹುತೇಕ ನೌಕರರು ಗುತ್ತಿಗೆ ಆಧಾರದಲ್ಲಿದ್ದಾರೆ. ಹಲವು ವರ್ಷಗಳಿಂದ ಇಲ್ಲೇ ಬೀಡುಬಿಟ್ಟ ಕಾರಣ ಭ್ರಷ್ಟಾಚಾರ ಹೆಚ್ಚಾಗಿದೆ. ನಕಲಿ ಡಿಡಿ ಬಳಸಿ ಸರ್ಕಾರಕ್ಕೆ ಆದಾಯ ವಂಚಿಸಿದ ಪ್ರಕರಣವೂ ಇಲ್ಲಿ ನಡೆದಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಎರಡು ನೋಂದಣಿ ಕಚೇರಿ ಬೇಕಿದೆ

    ಚಿಕ್ಕ ಸ್ಥಳದಲ್ಲಿ ನೋಂದಣಿ ಕಚೇರಿ ಇರುವುದರಿಂದ ಭಾರಿ ಜನದಟ್ಟಣೆ ಉಂಟಾಗುತ್ತಿದೆ. ಈ ಕಚೇರಿಯಲ್ಲಿ ಹೆಚ್ಚು ನೋಂದಣಿಯಾಗುತ್ತಿರುವ ಕಾರಣ ಇನ್ನೂ ಎರಡು ನೋಂದಣಿ ಕಚೇರಿ ಆರಂಭಿಸಬೇಕು. ವಕೀಲರಿಗೆ ಪ್ರತ್ಯೇಕ ಕೌಂಟರ್ ತೆರೆಯಬೇಕು ಎಂದು ಸಂಘ ಒತ್ತಾಯಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts