More

    ಸತ್ಸಂಗದಿಂದ ಜೀವನ್ಮುಕ್ತಿ

    ಶಿರಹಟ್ಟಿ: ಭಕ್ತಿಯಿಂದ ಭಗವಂತನನ್ನು ಸಾಕ್ಷಾತ್ಕರಿಸಿಕೊಂಡು ಲೋಕೋದ್ಧಾರಗೈದ ಸಂತ, ಶರಣರು, ದಾರ್ಶನಿಕರ ಚಿಂತನೆ ಮಾಡುವುದರ ಮೂಲಕ ಧರ್ಮದ ಮಾರ್ಗದಲ್ಲಿ ನಡೆದಾಗ ಮನುಷ್ಯನ ಜೀವನ ಪಾವನವಾಗುತ್ತದೆ ಎಂದು ಹೂವಿನಶಿಗ್ಲಿ ವಿರಕ್ತಮಠದ ಚನ್ನವೀರ ಸ್ವಾಮೀಜಿ ಹೇಳಿದರು.

    ವಿಠ್ಠಲ ರುಖುಮಾಯಿ ದಿಂಡಿ ಉತ್ಸವದ ಅಂಗವಾಗಿ ಪಟ್ಟಣದ ಭಾವಸಾರ ಕ್ಷತ್ರೀಯ ಸಮಾಜದಿಂದ ವಿಠ್ಠಲ ಹರಿಮಂದಿರದ ಸಭಾಂಗಣದಲ್ಲಿ ಆಯೋಜಿಸಿದ್ದ ಧರ್ಮ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

    ವಿಜ್ಞಾನ ಮನುಷ್ಯನಿಗೆ ಸಮೃದ್ಧಿ ನೀಡಿದರೆ, ಆತ್ಮಜ್ಞಾನ ಸುಖ, ಶಾಂತಿ ನೀಡುತ್ತದೆ. ಆದರೆ, ಭಗವಂತನ ಧ್ಯಾನದತ್ತ ಒಲವು ತೋರಿ, ಪುರಾಣ, ಪ್ರವಚನ ಸತ್ಸಂಗದ ಪ್ರಭಾವದಿಂದ ಕೆಟ್ಟ ಮನಸ್ಸನ್ನು ಶುದ್ಧಿ ಮಾಡಿಕೊಂಡಾತ ಅಧ್ಯಾತ್ಮದ ತುದಿ ಏರಿ ಜೀವನಮುಕ್ತಿ ಪಡೆಯುತ್ತಾನೆ ಎಂದರು.

    ಪಾಪಾತ್ಮನಿಗೆ ನರಕ, ಪುಣ್ಯಾತ್ಮನಿಗೆ ಸ್ವರ್ಗ ಪ್ರಾಪ್ತಿಯಾದರೆ, ಭಗವಂತನ ಅನುಗ್ರಹಕ್ಕೆ ಪಾತ್ರರಾದವರು ಮಹಾತ್ಮರಾಗುತ್ತಾರೆ. ಆ ಕಾರಣಕ್ಕೆ ಸಂತ ಮಹಾಂತರು, ದಾಸರು, ಶರಣರನೇಕರೆಲ್ಲ ತಾವಿರುವ ಸ್ಥಳವನ್ನು ಸ್ವರ್ಗವನ್ನಾಗಿ ಮಾಡಿ ಲೋಕದ ದೃಷ್ಟಿಯಲ್ಲಿ ಮಹಾತ್ಮರೆನಿಸಿದರು. ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಸಂಸ್ಕಾರ ನೀಡಿ ಅವರನ್ನೇ ಆಸ್ತಿಯನ್ನಾಗಿ ಮಾಡಬೇಕು ಹೊರತು ಅವರಿಗಾಗಿ ಆಸ್ತಿ ಮಾಡಿಟ್ಟು ಕಣ್ಣೀರಿನಲ್ಲಿ ಕೈತೊಳೆಯುವ ಕೆಲಸ ಮಾಡಬೇಡಿ ಎಂದರು.

    ಸೂಡಿ ಕ್ಷೇತ್ರದ ಭುಜಂಗ ಶರ್ಮಾ ಜೋಶಿ ಮಾತನಾಡಿ, ಆಸ್ತಿ, ಹಣ, ಐಶ್ವರ್ಯ ಅಧಿಕಾರ, ಅಂತಸ್ತು ಇವ್ಯಾವು ಮನುಷ್ಯನ ಜತೆಗೆ ಬರಲಾರದ ವಸ್ತುಗಳು. ಯಾರು ಮತ್ತೊಬ್ಬರ ಸುಖ, ದುಃಖದಲ್ಲಿ ಭಾಗಿಯಾಗಿ, ಇತರರೊಂದಿಗೆ ಪ್ರೀತಿಯಿಂದ ಬಾಳಿ ಅನನ್ಯ ಭಕ್ತಿಯಿಂದ ಹರಿ ನಾಮಸ್ಮರಣೆ ಮಾಡುತ್ತಾರೋ ಅಂಥವರು ದೇವನೊಲುಮೆಗೆ ಪಾತ್ರರಾಗಿ ಬದುಕು ಸಾರ್ಥಕ ಪಡಿಸಿಕೊಳ್ಳುತ್ತಾರೆ ಎಂದರು.

    ಇದೇ ವೇಳೆ ಕೆಪಿಎಸ್​ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 17ನೇ ಸ್ಥಾನ ಪಡೆದು ವಾಣಿಜ್ಯ ತೆರಿಗೆ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಗಜೇಂದ್ರಗಡದ ಪವನಕುಮಾರ ಕಮಿತಕರ ಅವರನ್ನು ಸತ್ಕರಿಸಲಾಯಿತು. ಜತೆಗೆ ನಿವೃತ್ತ ನೌಕರರು, ಪ್ರತಿಭಾವಂತ ಮಕ್ಕಳು ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಲಕ್ಷ್ಮೀ ತಾಂದಳೆಗೆ ಅಶೋಕ ಮುಧೋಳಕರ ಕೊಡಮಾಡಿದ 10. ಸಾವಿರ ರೂ. ಪ್ರೋತ್ಸಾಹಧನ ನೀಡಲಾಯಿತು. ಮೋಹನರಾವ ಮುಧೋಳಕರ ಅಧ್ಯಕ್ಷತೆ ವಹಿಸಿದ್ದರು. ಲಕ್ಷ್ಮೀಕಾಂತ ಕಾಕಡೆ ಮಹಾರಾಜರು, ಎ.ಬಿ.ಬಿ.ಕೆ. ಜಿಲ್ಲಾಧ್ಯಕ್ಷ ಡಾ. ಟಿ.ಎಂ. ಮಹೇಂದ್ರಕರ, ಬಸವರಾಜ ಹೊಸೂರ, ಕೆ.ಎ. ಬಳಿಗೇರ, ಎನ್.ಎಂ. ಮಹೇಂದ್ರಕರ, ವಿಠ್ಠಲ ಮುಧೋಳಕರ, ನಾಗಪ್ಪ ಬಿಸೆ, ವೆಂಕಟೇಶ ಬೇಂದ್ರೆ, ಸತೀಶ ಮುಧೋಳಕರ, ಪರಶುರಾಮ ಮಹೇಂದ್ರಕರ ಇತರರು ಇದ್ದರು. ಶಿಕ್ಷಕ ಮೋಹನ ಮಾಂಡ್ರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಠ್ಠಲ ಮುಧೋಳಕರ ಸ್ವಾಗತಿಸಿದರು ರವಿ ಬೇಂದ್ರೆ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts