More

    ಸಚಿವ ಸಿ.ಸಿ. ಪಾಟೀಲರಿಗೆ ಅದ್ದೂರಿ ಸ್ವಾಗತ

    ನರಗುಂದ: ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಲೋಕೋಪಯೋಗಿ ಸಚಿವ ಸ್ಥಾನ ಅಲಂಕರಿಸಿದ ನಂತರ ಮೊದಲ ಬಾರಿಗೆ ಪಟ್ಟಣಕ್ಕೆ ಆಗಮಿಸಿದ ಸಿ.ಸಿ. ಪಾಟೀಲ ಅವರನ್ನು ಬಿಜೆಪಿ ಕಾರ್ಯಕರ್ತರು, ಮುಖಂಡರು ಹಾಗೂ ಬೆಂಬಲಿಗರು ಅದ್ದೂರಿಯಾಗಿ ಸ್ವಾಗತಿಸಿದರು.
    ಸಿ.ಸಿ. ಪಾಟೀಲ ಅವರು ಸ್ವಗ್ರಾಮ ಸವದತ್ತಿ ತಾಲೂಕಿನ ಆಚಮಟ್ಟಿಗೆ ಆಗಮಿಸುತ್ತಿದ್ದಂತೆ ಬೆಂಬಲಿಗರು ಜಯ ಘೊಷ ಕೂಗಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಮೆರವಣಿಗೆ ಮೂಲಕ ಗ್ರಾಮದ ಶ್ರೀ ಉಡಚಮ್ಮದೇವಿ ದೇವಸ್ಥಾನಕ್ಕೆ ತೆರಳಿ ದೇವಿಯ ದರ್ಶನ ಪಡೆದರು. ನರಗುಂದ ಮತಕ್ಷೇತ್ರದ ವಿವಿಧೆಡೆಯಿಂದ ನೂರಾರು ಕಾರ್ಯಕರ್ತರು ಆಗಮಿಸಿದ್ದರು.
    ಆಚಮಟ್ಟಿ ಗ್ರಾಮದಿಂದ ಸಚಿವರು ನರಗುಂದಕ್ಕೆ ಆಗಮಿಸುತ್ತಿದ್ದಂತೆ ಪಟ್ಟಣದ ದಂಡಾಪುರ ಬಡಾವಣೆಯಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ, ಪರಸ್ಪರ ಬಣ್ಣ ಎರಚುವ ಮೂಲಕ ಅದ್ದೂರಿಯಾಗಿ ಸ್ವಾಗತ ಕೋರಿದರು. ದಂಡಾಪುರದ ಶ್ರೀ ಉಡಚಾ ಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಚಿವರು ದೇವಿಯ ದರ್ಶನ ಪಡೆದುಕೊಂಡರು. ಕರ್ನಾಟಕ ಕೇಸರಿ ಜಗನ್ನಾಥರಾವ್ ಜೋಶಿ ಸ್ಮಾರಕ ಭವನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರೊಂದಿಗೆ ರ್ಚಚಿಸಿ, ಸಂಘದ ಪ್ರಮುಖರಿಂದ ಪುಸ್ತಕ ಸ್ವೀಕರಿಸಿದರು. ಪುರಸಭೆ ಆವರಣದ ಬಾಬಾಸಾಹೇಬ ಭಾವೆ ಪುತ್ಥಳಿಗೆ ಮಾಲಾರ್ಪಣೆ ಸಲ್ಲಿಸಿ ಲಯನ್ಸ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಜಿ.ಟಿ. ಗುಡಿಸಾಗರ, ವರ್ತಕ ರಮೇಶಗೌಡ ಕರಕನಗೌಡ್ರ ಅವರಿಂದ ಪುಸ್ತಕ ಸ್ವೀಕರಿಸಿದರು. ಪಟ್ಟಣದ ಕೋರ್ಟ್ ಸರ್ಕಲ್​ನಲ್ಲಿ ಹುತಾತ್ಮ ರೈತ ವೀರಪ್ಪ ಕಡ್ಲಿಕೊಪ್ಪ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿದರು. ಅಲ್ಲಿಂದ ಸ್ವಗೃಹಕ್ಕೆ ಆಗಮಿಸಿ ಗೋಪೂಜೆ ಸಲ್ಲಿಸಿದರು. ಸಿ.ಸಿ. ಪಾಟೀಲ ಅವರ ಪತ್ನಿ ಶೋಭಾ ಪಾಟೀಲ ಹಾಗೂ ಸೊಸೆಯಂದಿರು ಆರತಿ ಬೆಳಗಿ ಸಚಿವರನ್ನು ಬರಮಾಡಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts