More

    ಸಚಿವರೂ ಬಂದಿದ್ದರೆ ಯಾರು ಬೇಡ ಎನ್ನುತ್ತಿದ್ದರು

    ಕೋಲಾರ: ತಾಲೂಕಿನ ಎಸ್. ಅಗ್ರಹಾರ ಕೆರೆಗೆ ಬಾಗಿನ ಅರ್ಪಣೆ ಸಂಬಂಧ ಅಧಿಕಾರಗಳ ವಿಚಾರದಲ್ಲಿ ರಾದ್ದಾಂತ ಅಗತ್ಯವಿಲ್ಲ. ಅಧಿಕಾರಿಯಾಗಿದ್ದವರಿಗೆ ರಾಜಕೀಯ ಒಲಿದಿದೆ, ಅವರಿಗೆ ರಾಜಕೀಯ ಕಷ್ಟ ಗೊತ್ತಿಲ್ಲ ಎಂದು ಶಾಸಕ ಕೆ. ಶ್ರೀನಿವಾಸಗೌಡ ಹೇಳಿದರು.

    ನಗರದ ಗೃಹ ಕಚೇರಿಯಲ್ಲಿ ಶುಕ್ರವಾರ ವೈದ್ಯಕೀಯ ಚಿಕಿತ್ಸೆಗೆ 12 ಫಲಾನುಭವಿಗಳಿಗೆ ತಲಾ 25,000 ರೂ. ಗಳ ಚೆಕ್ ವಿತರಿಸಿ ಮಾತನಾಡಿ, ಮದ್ದೇರಿ ರಾಮೇಗೌಡರ ಶ್ರದ್ಧಾಂಜಲಿ ಸಭೆಗೆ ತೆರಳಲು ಸಿದ್ಧವಾಗುತ್ತಿದ್ದೆ. ಎಸ್.ಅಗ್ರಹಾರ ಕೆರೆ ಕೋಡಿ ಹೋಗುತ್ತಿರುವುದನ್ನು ನೋಡಲು ಶಾಸಕ ರಮೇಶ್ ಕುಮಾರ್ ಹೋಗುವ ವಿಷಯ ತಿಳಿದು ಅವರನ್ನು ಸಂಪರ್ಕಿಸಿದ್ದೆ. ಮಾರ್ಗಮಧ್ಯೆ ಹಾಗೆಯೇ ನಾನು ಹೋಗಿದ್ದೆನೇ ವಿನಾ ಯಾರೂ ಆಹ್ವಾನ ನೀಡಿರಲಿಲ್ಲ ಎಂದರು.

    ರಮೇಶ್‌ಕುಮಾರ್ ಶಾಸಕ ಕೃಷ್ಣಬೈರೇಗೌಡ ಮತ್ತು ಸಂಸದ ಎಸ್. ಮುನಿಸ್ವಾಮಿ ಅವರನ್ನು ಆಹ್ವಾನಿಸಿದ್ದರು. ಈ ಸಂದರ್ಭದಲ್ಲಿ ಮುಖಂಡರು ದಿಢೀರನೆ ಬಾಗಿನ ಕಾರ್ಯಕ್ರಮ ಆಯೋಜಿಸಿದ್ದಾರೆಯೇ ಹೊರತು ಇದೇನು ಪೂರ್ವ ಯೋಜಿತ ಕಾರ್ಯಕ್ರಮವಲ್ಲ. ವಿಷಯ ತಿಳಿದು ಉಸ್ತುವಾರಿ ಸಚಿವರೂ ಬಂದಿದ್ದರೆ ಯಾರು ಬೇಡ ಎನ್ನುತ್ತಿದ್ದರು ಎಂದರು.

    ಕೆರೆ ವೀಕ್ಷಣೆಗೆ ಹೋಗುವಾಗ ಕೆ.ಸಿ.ವ್ಯಾಲಿ ಯೋಜನೆಯ ತಾಂತ್ರಿಕ ವಿಚಾರವಾಗಿ ಮಾತನಾಡಲು ತಹಸೀಲ್ದಾರ್, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳನ್ನು ಕರೆದು ಚರ್ಚಿಸಲಾಯಿತು. ಇದು ಆಕಸ್ಮಿಕವಷ್ಟೆ, ಇದಕ್ಕೆ ಬೇರೆ ರೀತಿ ಅರ್ಥ ಕಲ್ಪಿಸುವುದು ಸರಿಯಲ್ಲ. ಸಚಿವ ನಾಗೇಶ್ ಮಂತ್ರಿಯಾಗಿ ಈ ವಿಚಾರವನ್ನು ಲಘುವಾಗಿ ತೆಗೆದುಕೊಳ್ಳಬೇಕಿತ್ತು, ಮಾಧ್ಯಮಗಳ ಮುಂದೆ ಹೇಳಬಾರದಿತ್ತು. ಸಣ್ಣತನ ಬೇಡ. ಸರಿದೂಗಿಸಿಕೊಂಡು ಹೋಗೋಣ ಎಂದು ನಾನು ಕರೆ ಮಾಡಿ ಹೇಳಿದ್ದೇನೆ. ಅಧಿವೇಶನದೊಳಗೆ ಮತ್ತೊಮ್ಮೆ ಮಾತನಾಡಿ ಸರಿಹೊಂದಿಸಲಾಗುವುದು ಎಂದರು.

    ಎಲ್ಲರಿಗೂ ನೀರಿನ ಮೇಲೆ ಆಸೆ: ಕೆಸಿ ವ್ಯಾಲಿ ಯೋಜನೆ ಅನುಷ್ಠಾನದಲ್ಲಿ ರಮೇಶ್‌ಕುಮಾರ್ ಪಾತ್ರ ಮಹತ್ವದ್ದು. ಯಾರು ಏನೇ ಹೇಳಲಿ ರಾಜಕೀಯ ಹೊರತುಪಡಿಸಿ ಅವರನ್ನು ದೊಡ್ಡಮಟ್ಟದಲ್ಲಿ ಕಾಣಬೇಕು. ಮೊದಲನೇ ಹಂತ ಮುಗಿದ ನಂತರ 2ನೇ ಹಂತ ಆರಂಭವಾಗುತ್ತಿದೆ. ಎಲ್ಲ ಕೆರೆಗಳಿಗೂ ನೀರು ಬರಲಿದೆ. ಕೆರೆಗಳ ಆಯ್ಕೆ ವಿಚಾರವಾಗಿ ವಿನಾ ಆಕ್ಷೇಪಣೆ ಮಾಡುವುದು ಸರಿಯಲ್ಲ. ನೀರಿನ ಮೇಲೆ ಆಸೆ ಎಲ್ಲರಿಗೂ ಇರುತ್ತದೆ. ಕಾಯಬೇಕು ಅಷ್ಟೇ ಎಂದು ಜಿಪಂ ಅಧ್ಯಕ್ಷ ಸಿ.ಎಸ್. ವೆಂಕಟೇಶ್ ಆರೋಪಕ್ಕೆ ಸೂಕ್ಷ್ಮವಾಗಿ ಪ್ರತಿಕ್ರಿಯಿಸಿದರು.

    ಎಚ್. ನಾಗೇಶ್ 1994ರಲ್ಲಿ ಕೋಲಾರ ಬೆಸ್ಕಾಂನಲ್ಲಿ ಅಧಿಕಾರಿಯಾಗಿದ್ದಾಗ ಶಾಸಕನಾಗಿದ್ದ ನಾನು ವಿದ್ಯುತ್ ಸಮಸ್ಯೆ ಬಗೆಹರಿಸುವ ಸಲುವಾಗಿ ಬೀಗ ಹಾಕಿದ್ದೆ. ನಾನು ಮರೆತೇ ಹೋಗಿದ್ದ ವಿಷಯವನ್ನು ಸಚಿವ ನಾಗೇಶ್ ಜ್ಞಾಪಿಸಿದ್ದರು. ಅವರಲ್ಲಿ ಅಮಾಯಕತನವಿದೆ, ಒಳ್ಳೆಯ ಮನುಷ್ಯ. ಅವರ ಅಮಾಯಕತೆಯನ್ನು ಯಾರೂ ದುರ್ಬಳಕೆ ಮಾಡಿಕೊಳ್ಳುತ್ತಿಲ್ಲ ಎಂದರು.

    ನಗರಸಭೆ ಸದಸ್ಯ ವಡಗೂರು ರಾಕೇಶ್, ಜೆಡಿಎಸ್ ಕಾರ್ಯಾಧ್ಯಕ್ಷ ಅನ್ವರ್ ಪಾಷ, ಹಾರೋಹಳ್ಳಿ ವೆಂಕಟೇಶ್, ಶಾಂತಿ ನಗರದ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts