More

    ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ

    ನಾಗಮಂಗಲ: ರಸ್ತೆ ಇರುವುದು ನಮ್ಮ ಚಾತುರ‌್ಯ ಪ್ರದರ್ಶನಕ್ಕಲ್ಲ. ಅಚಾತುರ್ಯ ಮಾಡಿಕೊಂಡು ಜೀವನ ಹಾಳು ಮಾಡಿಕೊಳ್ಳದೆ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಮಲ್ಲಿಕಾರ್ಜುನ್ ತಿಳಿಸಿದರು.

    ತಾಲೂಕು ಆಡಳಿತ ಮತ್ತು ನಾಗಮಂಗಲ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ವತಿಯಿಂದ 35ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಪ್ರಯಕ್ತ ಬುಧವಾರ ಪಟ್ಟಣದಲ್ಲಿ ಆಯೋಜಿಸಿದ್ದ ಜನಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

    ಸುರಕ್ಷಿತವಾಗಿ ರಸ್ತೆಗಳನ್ನು ಬಳಸುವ ಜತೆಗೆ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಅಮೂಲ್ಯವಾದ ಜೀವಗಳನ್ನು ರಕ್ಷಣೆ ಮಾಡಬೇಕಿರುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ದ್ವಿಚಕ್ರ ವಾಹನ ಸವಾರರು ಮತ್ತು ಹಿಂಬದಿಯ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಕಾರು ಚಾಲಕರು ಸೀಟ್ ಬೆಲ್ಟ್ ಧರಿಸಬೇಕು. ಅತಿ ವೇಗ ಮತ್ತು ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಬಾರದು ಎಂದು ಕಿವಿಮಾತು ಹೇಳಿದರು.
    ಕ್ಷೇತ್ರ ಶಿಕ್ಷಣಾಧಿಕಾರಿ ಯೋಗೇಶ್ ಮಾತನಾಡಿ, ಬೈಕ್ ಸೇರಿದಂತೆ ಯಾವುದೇ ವಾಹನ ಚಾಲನೆ ಮಾಡುವ ಸಂದರ್ಭದಲ್ಲಿ ಸವಾರರು ಮೊಬೈಲ್ ಬಳಸಬಾರದು. 18 ವರ್ಷದೊಳಗಿನ ಮಕ್ಕಳು ವಾಹನ ಚಾಲನೆ ಮಾಡುವುದು, ದ್ವಿಚಕ್ರ ವಾಹನಗಳಲ್ಲಿ ಮೂವರು ಕುಳಿತು ಸಂಚರಿಸುವುದು ಮತ್ತು ವೀಲಿಂಗ್ ಮಾಡುವುದು ಶಿಕ್ಷಾರ್ಹ ಅಪರಾಧ. ಇದರಿಂದ ಪಾದಚಾರಿಗಳಿಗೆ ಮತ್ತು ಇತರ ವಾಹನ ಸವಾರರಿಗೆ ತೊಂದರೆಯಾಗಿ ಜೀವಹಾನಿಯಾಗುವ ಸಾಧ್ಯತೆಯೂ ಇದೆ. ಹಾಗಾಗಿ ರಸ್ತೆ ಸುರಕ್ಷತಾ ಕ್ರಮಗಳನ್ನು ಎಲ್ಲರೂ ಅನುಸರಿಸಬೇಕು ಎಂದು ಹೇಳಿದರು.

    ಎಆರ್‌ಟಿಓ ಕಚೇರಿಯ ಮೋಟಾರು ವಾಹನ ನಿರೀಕ್ಷಕ ಸಿ.ಎಸ್.ಸತೀಶ್ ಮಾತನಾಡಿ, ವಾಹನ ಚಾಲನೆ ಮಾಡುವ ಸಂದರ್ಭದಲ್ಲಿ ಮೊಬೈಲ್ ಬಳಸುವುದರಿಂದ ಗಮನ ಬೇರೆಡೆಗೆ ಹೋಗಿ ಅಪಘಾತವಾಗುತ್ತಿದೆ. ಇಂತಹ ಪ್ರಕರಣಗಳು ದೇಶಾದ್ಯಂತ ಪ್ರತಿನಿತ್ಯ ಹೆಚ್ಚಾಗುತ್ತಿವೆ. ಏಕಾಗ್ರತೆಯಿಂದ ವಾಹನ ಚಾಲನೆ ಮಾಡಿದಲ್ಲಿ ಅಪಘಾತಗಳು ಸಂಭವಿಸುವುದಿಲ್ಲ. ಪಾದಚಾರಿಗಳು, ವಾಹನ ಚಾಲಕರು ಮತ್ತು ಮಾಲೀಕರು ರಸ್ತೆಯನ್ನು ಉಪಯೋಗಿಸುವಾಗ ಬಹಳ ಎಚ್ಚರ ವಹಿಸಬೇಕು ಎಂದು ತಿಳಿಸಿದರು.

    ಪಟ್ಟಣದ ಟಿ.ಬಿ.ಬಡಾವಣೆಯ ಬಿಜಿಎಸ್ ವೃತ್ತದಿಂದ ಚಾಮರಾಜನಗರ ಜೇವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಮತ್ತು ವಿಸ್ಡಂ ಶಾಲೆಯ ವಿದ್ಯಾರ್ಥಿಗಳ ಜತೆಗೂಡಿ ತಾಲೂಕು ಮಟ್ಟದ ಅಧಿಕಾರಿಗಳು ಘೋಷವಾಕ್ಯಗಳ ಫಲಕ ಹಿಡಿದು ಜನಜಾಗೃತಿ ಜಾಥಾ ನಡೆಸಿದರಲ್ಲದೆ ಪಟ್ಟಣದ ಮಂಡ್ಯ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳನ್ನು ಪಾಲಿಸುವ ಕುರಿತು ಜನರಲ್ಲಿ ಅರಿವು ಮೂಡಿಸಿದರು.

    ತಾಪಂ ಇಒ ಚಂದ್ರಮೌಳಿ, ಪಟ್ಟಣ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಅಶೋಕ್‌ಕುಮಾರ್, ಪಿಎಸ್‌ಐ ಸತೀಶ್, ಎಆರ್‌ಟಿಒ ಕಚೇರಿಯ ಅಧೀಕ್ಷಕ ಕೆ.ಡಿ.ಸತೀಶ್, ಕಚೇರಿಯ ಅಧಿಕಾರಿಗಳಾದ ರಾಧಾಕೃಷ್ಣ, ನೇಹಾ ಅಫ್ಸರ್, ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ವೆಂಕಟೇಶ್ ಸೇರಿದಂತೆ ಮತ್ತಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts