More

    ಸೌಲಭ್ಯ ಪಡೆದು ದೇಶದ ಅಭಿವೃದ್ಧಿಗೆ ದುಡಿಯಿರಿ

    ನಂಜನಗೂಡು: ಕೇಂದ್ರ ಸರ್ಕಾರದ ಯೋಜನೆಗಳ ಸೌಲಭ್ಯಗಳನ್ನು ನಾಗರಿಕರು ಸದುಪಯೋಗಪಡಿಸಿಕೊಂಡು ದೇಶದ ಅಭಿವೃದ್ಧಿಗಾಗಿ ದುಡಿಯಬೇಕು ಎಂದು ಯೂನಿಯನ್ ಬ್ಯಾಂಕ್ ಸ್ಥಳೀಯ ಶಾಖೆ ವ್ಯವಸ್ಥಾಪಕ ನಾಗೇಶ್ ಹೇಳಿದರು.


    ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಸೋಮವಾರ ಕೇಂದ್ರ ಸರ್ಕಾರದ ವಿಕಸಿತ ಭಾರತ ಸಂಕಲ್ಪ ಯೋಜನೆ ಪ್ರಚಾರ ರಥವನ್ನು ಸ್ವಾಗತಿಸಿದ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.


    ದುರ್ಬಲ ವರ್ಗದವರಿಗೆ ಬ್ಯಾಂಕ್‌ನಲ್ಲಿ ಶೂನ್ಯ ಬ್ಯಾಲೆಸ್ಸ್ ಖಾತೆಗಳನ್ನು ತೆರೆಯುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಯ ಸವಲತ್ತುಗಳನ್ನು ನೇರವಾಗಿ ಫಲಾನುಭವಿ ಖಾತೆಗೆ ಜಮಾ ಮಾಡಲಾಗುತ್ತಿದೆ. ಉಜ್ವಲ ಯೋಜನೆ ಮೂಲಕ ಉಚಿತವಾಗಿ ಗ್ಯಾಸ್ ಸಂಪರ್ಕ ಹಾಗೂ ಕೇವಲ 20 ರೂಪಾಯಿಯಲ್ಲಿ 2 ಲಕ್ಷ ಅಪಘಾತ ವಿಮೆ ಪಾಲಿಸಿಗಳನ್ನು ಪಡೆಯಬಹುದಾಗಿದೆ, ಬೀದಿಬದಿ ವ್ಯಾಪಾರಿಗಳಿಗೆ 10 ಸಾವಿರದಿಂದ 50 ಸಾವಿರದವರೆಗೆ ಸಾಲ ಸೌಲಭ್ಯ ನೀಡಲಾಗುತ್ತದೆ. ಹೆಚ್ಚಿನ ಗ್ರಾಹಕರು ಬ್ಯಾಂಕ್‌ನಲ್ಲಿ ಖಾತೆ ಹೊಂದುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸವಲತ್ತುಗಳನ್ನು ಪಡೆಯಬಹುದು ಎಂದು ತಿಳಿಸಿದರು.


    ಉದ್ಯಮಿ ಜಿ.ಕೆ.ಮಂಜುನಾಥ್ ಮಾತನಾಡಿ, ಕೇಂದ್ರ ಸರ್ಕಾರದ ಮುದ್ರಾ ಉಪಯುಕ್ತ ಯೋಜನೆಯಾಗಿದ್ದು, ನಿರುದ್ಯೋಗಿ ಯುವಕರು ಸಾಲ ಪಡೆದು ಸ್ವಯಂ ಉದ್ಯೋಗದಲ್ಲಿ ತೊಡಗುವ ಮೂಲಕ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ. ಕೇಂದ್ರ ಸರ್ಕಾರ 4 ಕೋಟಿ ಶಾಶ್ವತ ಮನೆಗಳನ್ನು ನಿರ್ಮಿಸುವ ಮೂಲಕ ಬಡವರಿಗೆ ಸೂರು ಒದಗಿಸುವ ಕಾರ್ಯದಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು.
    ನಿವೃತ್ತ ಪ್ರಾಂಶುಪಾಲ ಸುಬ್ಬಣ್ಣ, ಉದ್ಯಮಿ ಗೋವರ್ಧನ್, ಲೋಕೇಶ್ವರಿ, ಸುವರ್ಣ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts