More

    ‘ಸಖಿ’ ಕಟ್ಟಡ ಉದ್ಘಾಟನೆಗೆ ಸಜ್ಜು

    ಹರೀಶ್ ಮೋಟುಕಾನ ಮಂಗಳೂರು
    ಮಹಿಳೆಯರ ಮೇಲೆ ದೌರ್ಜನ್ಯ ನಡೆದಾಗ ಅವರಿಗೆ ಒಂದೇ ಸೂರಿನಡಿ ವೈದ್ಯಕೀಯ, ಪೊಲೀಸ್, ಕಾನೂನು, ತಾತ್ಕಾಲಿಕ ವಸತಿ ವ್ಯವಸ್ಥೆ ಕಲ್ಪಿಸಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆ ‘ಸಖಿ’ ವನ್ ಸ್ಟಾಪ್ ಕೇಂದ್ರದ ಸುಸಜ್ಜಿತ ಕಟ್ಟಡ ಉದ್ಘಾಟನೆಗೆ ಸಜ್ಜಾಗಿದೆ.

    ಲೇಡಿಗೋಶನ್ ಆಸ್ಪತ್ರೆಯ ಎರಡನೇ ಮಹಡಿಯಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗಿದೆ. ಕಳೆದ ವರ್ಷ ಈ ಕಟ್ಟಡ ಉದ್ಘಾಟನೆಯಾಗಬೇಕಿತ್ತು. ಆದರೆ ಕರೊನಾ ಲಾಕ್‌ಡೌನ್ ಕಾರಣದಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಲಾಕ್‌ಡೌನ್ ತೆರವುಗೊಂಡ ಬಳಿಕ ಕಾಮಗಾರಿ ಆರಂಭಗೊಂಡು, ಪ್ರಸ್ತುತ ಬಹುತೇಕ ಪೂರ್ಣಗೊಂಡಿದೆ.

    ಅಪ್ರಾಪ್ತರ ಮೇಲಿನ ದೌರ್ಜನ್ಯ, ಕೌಟುಂಬಿಕ ದೌರ್ಜನ್ಯ, ಅತ್ಯಾಚಾರ, ಲೈಂಗಿಕ ಕಿರುಕುಳ, ಆ್ಯಸಿಡ್ ದಾಳಿ, ಕಾಣೆಯಾದ, ಬಾಲ್ಯ ವಿವಾಹಕ್ಕೊಳಗಾದ ಸಹಿತ ವಿವಿಧ ಸಮಸ್ಯೆಗಳಿಂದ ನರಳುವ ಮಹಿಳೆಯರಿಗೆ ಪೊಲೀಸ್, ಕಾನೂನು, ವೈದ್ಯಕೀಯ ನೆರವು, ಸಮಾಲೋಚನೆ, ತಾತ್ಕಾಲಿಕ ವಸತಿ ನೀಡುವುದಕ್ಕಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಸಖಿ’ ವನ್ ಸ್ಟಾಪ್ ಸೆಂಟರ್ 2019 ಜ.26ರಂದು ಲೇಡಿಗೋಶನ್ ಆಸ್ಪತ್ರೆಯ ವಾರ್ಡ್‌ನಲ್ಲಿ ತಾತ್ಕಾಲಿಕವಾಗಿ ಆರಂಭಗೊಂಡಿತ್ತು.
    ಇದರ ಮೇಲುಸ್ತುವಾರಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಹಿಸಿಕೊಂಡಿದೆ. ನೊಂದ ಮಹಿಳೆಯರು ನೋವು ಕಟ್ಟಿಕೊಂಡು ಕಚೇರಿಯಿಂದ ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ಕೇಂದ್ರ ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ. ತಿಂಗಳಿಗೆ 10ರಿಂದ 15, ಅದರಲ್ಲೂ ಪೋಕ್ಸೊ ಪ್ರಕರಣಗಳು ಹೆಚ್ಚಾಗಿ ಬರುತ್ತಿವೆ ಎಂದು ಇಲ್ಲಿನ ವೈದ್ಯೆ ಡಾ.ಶಕುಂತಳಾ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಸರ್ವ ಸೌಲಭ್ಯದ ಕಟ್ಟಡ: ನೂತನ ಕಟ್ಟಡವು ಸುಮಾರು 2,314 ಚದರ ಅಡಿ ವಿಸ್ತೀರ್ಣ ಹೊಂದಿದೆ. 2 ವಾರ್ಡ್, 10 ಬೆಡ್, ಸಿಸಿ ಕ್ಯಾಮರಾ, ಶೌಚಗೃಹ ಸಹಿತ ಅಗತ್ಯ ಮೂಲ ಸೌಕರ್ಯ ಈ ಕೇಂದ್ರದಲ್ಲಿರಲಿದೆ. ವೈದ್ಯರು, ದಾದಿಯರು, ಆಪ್ತ ಸಮಾಲೋಚಕರು ಸಖಿಯಲ್ಲಿ ಅಗತ್ಯ ಸಲಹೆ, ಸಮಾಲೋಚನೆ ನಡೆಸುತ್ತಿದ್ದಾರೆ. ಸಂತ್ರಸ್ತರೊಂದಿಗೆ ಬರುವ ಮನೆಯವರಿಗೂ ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ.

    ಕೇಂದ್ರ ಸರ್ಕಾರದ ಯೋಜನೆ ‘ಸಖಿ’ ವನ್ ಸ್ಟಾಪ್ ಕೇಂದ್ರದ ಹೊಸ ಕಟ್ಟಡದ ಕಾಮಗಾರಿ ಪೂರ್ಣಗೊಂಡಿದೆ. ಉದ್ಘಾಟನೆಗೆ ಮುನ್ನ ಕೆಲವೊಂದು ಪ್ರಕ್ರಿಯೆಗಳು ಬಾಕಿ ಇವೆ. ಶೀಘ್ರದಲ್ಲಿ ಕಟ್ಟಡ ಉದ್ಘಾಟಿಸಲಾಗುವುದು. ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ಶೀಘ್ರ ಮತ್ತು ಸೂಕ್ತ ಸ್ಪಂದನೆ ನೀಡುವುದು ಇದರ ಉದ್ದೇಶ.
     ಪಾಪ ಭೋವಿ, ಉಪನಿರ್ದೇಶಕರು, ದ.ಕ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts