More

    ಸಂಸ್ಕೃತಿ, ಅಧ್ಯಾತ್ಮದಿಂದ ಪಂಚಮಹಾಭೂತ ರಕ್ಷಣೆ

    ಚಿಕ್ಕೋಡಿ/ನಿಪ್ಪಾಣಿ: ಆಧುನಿಕ, ಗಣಕೀಕೃತ, ಕಲಿಯುಗವೆನಿಸಿಕೊಂಡ 21ನೇ ಶತಮಾನದಲ್ಲಿ ನಾವು ಪಂಚಮಹಾಭೂತಗಳ ಸಂರಕ್ಷಣೆ ಮರೆಯುತ್ತಿದ್ದೇವೆ. ಈ ಲೋಕೋತ್ಸವ ಮುಂದಿನ ಪೀಳಿಗೆಗೆ ಮಾದರಿಯಾಗಿ ಜಾಗೃತಿ ಮೂಡಿಸಲಿದೆ ಎಂದು ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

    ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕನ್ಹೇರಿ ಗ್ರಾಮದಲ್ಲಿ ಸಿದ್ಧಗಿರಿ ಮಠದಿಂದ ಆಯೋಜಿಸಿದ್ದ ಪಂಚಮಹಾಭೂತ ಲೋಕೋತ್ಸವ ನಿಮಿತ್ತ ಶುಕ್ರವಾರ ಹಮ್ಮಿಕೊಂಡಿದ್ದ ಜಲತತ್ತ್ವ- ಮಹಿಳಾ ಉತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ನಮ್ಮ ಸಂಸ್ಕೃತಿ ಮತ್ತು ಅಧ್ಯಾತ್ಮದಿಂದ ಪಂಚಮಹಾಭೂತ ಸಂರಕ್ಷಣೆ ಸಾಧ್ಯ. ಮಹಿಳೆ ಮನಸ್ಸು ಮಾಡಿದರೆ ಬದಲಾವಣೆ ತರಲು ಸಾಧ್ಯ. ಜಲರಕ್ಷಣೆ ಪ್ರತಿ ಮಹಿಳೆಯ ಜವಾಬ್ದಾರಿ. ಮಹಿಳೆ ತನ್ನ ಮಗು ಗರ್ಭದಲ್ಲಿದ್ದಾಗಲೇ ಒಳ್ಳೆಯ ಸಂಸ್ಕಾರಗಳಿಂದ ಪ್ರಭಾವ ಬೀರುತ್ತಾಳೆ. ಮಕ್ಕಳಿಗೆ ಪರಿಸರ ಸಂರಕ್ಷಣೆ ಕುರಿತೂ ತಿಳಿಸಬೇಕು ಎಂದರು.

    ನನ್ನ ಕ್ಷೇತ್ರದ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ 101 ಸಸಿ ಕೊಟ್ಟು ಅವುಗಳನ್ನು ಪೋಷಿಸಿ ಬೆಳೆಸುವ ಜವಾಬ್ದಾರಿಯನ್ನು ಮಹಿಳೆಯರಿಗೆ ವಹಿಸಲಾಗುವುದು. ಜತೆಗೆ ನೀರಿನ ಮಿತವಾದ ಬಳಕೆಗೆ ಸಂದೇಶ ನೀಡಲಾಗುವುದು ಎಂದು ಹೇಳಿದರು.
    ಗುಜರಾತ ರಾಜ್ಯಪಾಲ ಆಚಾರ್ಯ ದೇವವೃತ ಮಾತನಾಡಿ, ಪರಿಸರ ಬದಲಾವಣೆಯನ್ನು ಜಗತ್ತು ಗಂಭೀರವಾಗಿ ಪರಿಗಣಿಸುತ್ತಿಲ್ಲ. ತಮ್ಮ ಸುಖಕ್ಕಾಗಿ ಮನುಷ್ಯ ಪಂಚಮಹಾಭೂತಗಳನ್ನು ಹಾಳು ಮಾಡುತ್ತಿದ್ದಾನೆ. ಹೀಗೆಯೇ ಮುಂದುವರಿದರೆ ಯುನೆಸ್ಕೊ ಪ್ರಕಾರ ಮುಂದಿನ 30-40 ವರ್ಷಗಳಲ್ಲಿ ಭೂಮಿಯಲ್ಲಿ ಬೆಳೆಯೇ ಬೆಳೆಯುವುದಿಲ್ಲ ಎಂದರು.

    ನಿರಂತರ ಗ್ಲೋಬಲ್ ವಾರ್ಮಿಂಗ್ ಮತ್ತು ರಾಸಾಯನಿಕ ಕೃಷಿಗಳಿಂದ ಕ್ಯಾನ್ಸರ್ ರೋಗಿಗಳ ಪ್ರಮಾಣ ಭಯಂಕರವಾಗಿ ಹೆಚ್ಚಾಗುತ್ತಿದೆ. ಯೂರಿಯಾ ಕೀಟಕನಾಶಕ ಅತಿಯಾದ ಬಳಕೆಯಿಂದ ಕ್ಯಾನ್ಸ್‌ರ್ ರೋಗ ಸ್ಫೋಟಗೊಳ್ಳಲಿದೆ. ಮಣ್ಣು ವಿಷಪೂರಿತವಾಗುತ್ತಿದೆ. ನೀರು ಮಲಿನವಾಗುತ್ತಿದೆ. ಸಿದ್ಧಗಿರಿ ಮಠದಿಂದ ಸಾವಯವ ಕೃಷಿ ಪದ್ಧತಿ ಅಳವಡಿಸಲು ಪ್ರೇರಣೆ ಸಿಕ್ಕಿದೆ. ಕಾಡಸಿದ್ಧೇಶ್ವರ ಸ್ವಾಮೀಜಿ ಅವರಂತಹ ಸಂತರಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು. ಮ್ಯಾಗ್ಸಸ್ಸೆ ಪುರಸ್ಕೃತ ರಾಜೇಂದ್ರ ಸಿಂಗ್, ಕೃಷಿ ಪಂಡಿತ ಕೃಷ್ಣ ಝಾಕಡ್, ಐಐಟಿ ಬಿಎಚ್‌ಯೂ ಪ್ರದೀಪ ಮಿಶ್ರಾ, ಐಸಿಎಂಆರ್ ತಜ್ಞ ಹರ್ಷ ಹೆಗಡೆ ಮಾತನಾಡಿದರು.

    ಕನ್ಹೇರಿಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ, ಸಂಸದ ಅಣ್ಣಾಸಾಹೇಬ ಜೊಲ್ಲೆ, ಸಂಯೋಗಿತಾ ರಾಜೆ ಛತ್ರಪತಿ, ಜ್ಯೋತಿಪ್ರಸಾದ ಜೊಲ್ಲೆ, ಪ್ರಿಯಾ ಜೊಲ್ಲೆ, ಮಹಿಳೆಯರು, ಭಕ್ತಾದಿಗಳು, ನಾಗರಿಕರು ಇದ್ದರು. ಪ್ರಿಯಾ ಶಿಂಧೆ ಸ್ವಾಗತಿಸಿದರು. ರಮೇಶ ಪಾಟೀಲ ನಿರೂಪಿಸಿದರು. ಉದಯ ಸಾಮಂತ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts