More

    ಸಂತ್ರಸ್ತರ ಸಮಸ್ಯೆ ಬಗ್ಗೆ ಸದನದಲ್ಲಿ ಧ್ವನಿ ಎತ್ತುವೆ

    ಕಾರವಾರ: ಕದ್ರಾ, ಮಲ್ಲಾಪುರ ನೆರೆ ಸಂತ್ರಸ್ತರ ಸಮಸ್ಯೆಗಳ ಬಗ್ಗೆ ಸದನದಲ್ಲಿ ಧ್ವನಿ ಎತ್ತಲಾಗುವುದು ಎಂದು ವಿಧಾನಸಭೆ ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಭರವಸೆ ನೀಡಿದರು.
    ತಾಲೂಕಿನ ಕದ್ರಾದ ಮಾರುಕಟ್ಟೆ, ಮಲ್ಲಾಪುರದ ಗಾಂಧಿ ನಗರ ನೆರೆ ಪೀಡಿತ ಪ್ರದೇಶಗಳಿಗೆ ಶಾಸಕ ಆರ್.ವಿ. ದೇಶಪಾಂಡೆ ಅವರ ಜತೆ ಸೋಮವಾರ ಭೇಟಿ ನೀಡಿ, ಎರಡೂ ಗ್ರಾಪಂ ವ್ಯಾಪ್ತಿಯಲ್ಲಿ ಸಂತ್ರಸ್ತರ, ಸಭೆ ನಡೆಸಿ ಅಹವಾಲು ಆಲಿಸಿದರು. ಅಧಿಕಾರಿಗಳಿಂದ ಮಾಹಿತಿ ಪಡೆದು ಸೂಚನೆಗಳನ್ನು ನೀಡಿದರು.
    2019ರಲ್ಲಿ ನೆರೆ ಬಂದ ಸಂದರ್ಭದಲ್ಲಿ ಇಲ್ಲಿನ ಮನೆ, ಅಂಗಡಿಗಳು ಬಿದ್ದಿದ್ದವು. ಆದರೆ, ನೀರು ತುಂಬಿದ ಹಾಗೂ ಬಿದ್ದ ಹೆಚ್ಚಿನ ಮನೆಗಳನ್ನು ಅತಿಕ್ರಮಣ ಎಂದು ಪರಿಗಣಿಸಿ ಹೆಚ್ಚಿನ ಮಾಲೀಕರಿಗೆ ಪರಿಹಾರ ನೀಡಿಲ್ಲ. ಈ ಬಗ್ಗೆ ನಾನು ಹಾಗೂ ದೇಶಪಾಂಡೆಯವರು ಎರಡು ಬಾರಿ ಸದನದಲ್ಲಿ ಧ್ವನಿ ಎತ್ತಿದ್ದೆವು. ಈಗ ಮತ್ತೊಮ್ಮೆ ಸರ್ಕಾರದ ಮೇಲೆ ಒತ್ತಡ ಹಾಕುತ್ತೇವೆ ಎಂದರು.
    ಮುಂಜಾಗ್ರತಾ ಕ್ರಮ ವಹಿಸಿಲ್ಲ:
    2019ರಲ್ಲಿ ಯಾರಿಗೂ ಗೊತ್ತಿಲ್ಲದೆ ಪ್ರವಾಹ ಪರಿಸ್ಥಿತಿ ಉದ್ಭವವಾಗಿತ್ತು. ಆದರೆ, ಈ ಬಾರಿ ಹಾಗಿಲ್ಲ. ಅಧಿಕಾರಿಗಳಿಗೆ ಪ್ರವಾಹದ ಮುನ್ನೆಚ್ಚರಿಕೆ ಇತ್ತು. ಹಿಂದೆ ನಿಭಾಯಿಸಿದ ಅನುಭವವಿತ್ತು. ಆದರೂ ಪೂರ್ವ ಮಾಹಿತಿ ನೀಡದೇ ಏಕಾಏಕಿ ನೀರು ಬಿಟ್ಟಿದ್ದರಿಂದ ಹಲವರು ಬಟ್ಟೆ, ಮನೆ, ದಿನಸಿ ಕಳೆದುಕೊಳ್ಳುವಂತಾಗಿದೆ. ಇಲ್ಲಿನ ಅನಾಹುತಗಳಿಗೆ ಅಧಿಕಾರಗಳೇ ಕಾರಣ ಎಂದು ಆಕ್ಷೇಪಿಸಿದ ಸಿದ್ದರಾಮಯ್ಯ, ಕೆಪಿಸಿ ಅಧಿಕಾರಿಗಳನ್ನು ಸಭೆಯಲ್ಲಿ ತರಾಟೆಗೆ ತೆಗೆದುಕೊಂಡರು. ‘ನಿಮಗೆ ಬಡವರ ಜೀವನದ ಸಂಕಷ್ಟ ಗೊತ್ತಿಲ್ಲ’ ಎಂದು ಹರಿಹಾಯ್ದರು.
    ‘ಜಲಾಶಯದಿಂದ ನೀರು ಹೊರಬಿಡುವ ಪೂರ್ವದಲ್ಲಿ ನಾವು ಗ್ರಾಪಂಗಳಿಗೆ ನೋಟಿಸ್ ನೀಡಿದ್ದೇವೆ’ ಎಂದು ಕಾಳಿ ಜಲವಿದ್ಯುತ್ ಯೋಜನೆಯ ಮುಖ್ಯ ಇಂಜಿನಿಯರ್ ನಿಂಗಣ್ಣ ಸ್ಪಷ್ಟನೆ ನೀಡಿದರೂ ಒಪ್ಪದ ಸಿದ್ದರಾಮಯ್ಯ, ಕೇವಲ ನೋಟಿಸ್ ಕೊಟ್ಟು ಬಿಟ್ಟರಾಗಿಲ್ಲ. ಜನ ಮನೆ ಬಿಟ್ಟು ಸುರಕ್ಷಿತ ಸ್ಥಳಕ್ಕೆ ಹೋಗಿದ್ದಾರೆಯೇ ಎಂದು ಸ್ಥಳಕ್ಕೆ ತೆರಳಿ ನೋಡಬೇಕಿತ್ತು. ಅವರನ್ನು ತೆರವು ಮಾಡಿಸುವ ಜವಾಬ್ದಾರಿ ಕಂದಾಯ ಅಧಿಕಾರಿಗಳ ಮೇಲಿತ್ತು. ಹಂತ ಹಂತವಾಗಿ ನೀರು ಬಿಡಬೇಕಿತ್ತು ಎಂದರು. ಈ ಬಗ್ಗೆ ಕೆಪಿಸಿ ಎಂಡಿ ಬಳಿ ಮಾತನಾಡುತ್ತೇನೆ ಎಂದು ಗದರಿದರು.
    ಕದ್ರಾ ಕಾಲನಿಯಲ್ಲಿ ಕೆಪಿಸಿ ಕಾಯಂ ಉದ್ಯೋಗಿಗಳಿಗೆ ನೀಡಿ ಹೆಚ್ಚಿರುವ ವಸತಿ ಸಮುಚ್ಚಯ ಮತ್ತು ಖಾಲಿ ಜಾಗವನ್ನು ಲೇಬರ್ ಕಾಲನಿಯ ಬಡ ಕುಟುಂಬಗಳಿಗೆ ನೀಡಬೇಕು. ಅರಣ್ಯ ಅಧಿಕಾರಿಗಳು ಯಾವುದೇ ಕಾರಣಕ್ಕೂ ಸಂತ್ರಸ್ತ ಕುಟುಂಬಗಳನ್ನು ಒಕ್ಕಲೆಬ್ಬಿಸಬಾರದು ಎಂದು ಕೆಪಿಸಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಉದಾರವಾಗಿ ಸರ್ವೆ ಕಾರ್ಯ ಮಾಡಿ, ಸರ್ಕಾರಕ್ಕೆ ವರದಿ ಸಲ್ಲಿಸಿ ಎಂದು ತಹಸೀಲ್ದಾರ್ ನಿಶ್ಚಲ ನರೋನಾ ಅವರಿಗೆ ಸಿದ್ದರಾಮಯ್ಯ ಸೂಚಿಸಿದರು.
    ಕೈಗಾ ಎನ್​ಪಿಸಿಐಎಲ್ ಅಧಿಕಾರಿಗಳ ಜತೆ ಸಭೆ ನಡೆಸಿದ ಅವರು, ಸಾಮಾಜಿಕ ಜವಾಬ್ದಾರಿ ನಿಧಿಯಲ್ಲಿ ನೆರೆ ನಿರಾಶ್ರಿತರಿಗೆ ಸುರಕ್ಷಿತ ಸ್ಥಳದಲ್ಲಿ ಕಾಯಂ ಮನೆ ಕಟ್ಟಿಕೊಡಲು ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು. ಮಾಜಿ ಶಾಸಕರಾದ ಸತೀಶ ಸೈಲ್, ಮಂಕಾಳ ವೈದ್ಯ, ಡಿಸಿಸಿ ಅಧ್ಯಕ್ಷ ಭೀಮಣ್ಣ ನಾಯ್ಕ, ಕೆಪಿಸಿಸಿ ಸದಸ್ಯ ಪ್ರಶಾಂತ ದೇಶಪಾಂಡೆ ಹಾಗೂ ಇತರ ಕಾಂಗ್ರೆಸ್ ಮುಖಂಡರು ಈ ಸಂದರ್ಭದಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts