More

    ಸಂಡೇ ಲಾಕ್​ಡೌನ್​ಗೆ ಅವಳಿನಗರ ಸ್ತಬ್ಧ

    ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಭಾನುವಾರದ ಲಾಕ್​ಡೌನ್ ಸಂಪೂರ್ಣ ಯಶಸ್ವಿಗೊಂಡಿದೆ. ಕೆಲವೆಡೆ ವಿರಳ ಬೈಕ್ ಸಂಚಾರ ಹೊರತುಪಡಿಸಿದರೆ ಪ್ರಮುಖ ರಸ್ತೆ, ಮಾರುಕಟ್ಟೆಗಳು ಜನ ಹಾಗೂ ವಾಹನ ಸಂಚಾರ ಇಲ್ಲದೆ ಬಿಕೋ ಎನ್ನುತ್ತಿದ್ದವು. ಅಗತ್ಯ ಸಾಮಗ್ರಿಗಳನ್ನು ಸಾಗಿಸುವ ವಾಹನಗಳು, ಆಂಬುಲೆನ್ಸ್​ಗಳ ಸಂಚಾರ ಸಾಮಾನ್ಯವಾಗಿತ್ತು.

    ಸದಾ ಜನದಟ್ಟಣೆ ಇರುತ್ತಿದ್ದ ಎಂ.ಜಿ. ಮಾರ್ಕೆಟ್, ಜನತಾ ಬಜಾರ್ ಸೇರಿ ಇತರ ಮಾರುಕಟ್ಟೆಗಳು ಖಾಲಿಯಾಗಿದ್ದವು. ಅಂಗಡಿ, ಮುಂಗಟ್ಟುಗಳು ಮುಚ್ಚಿದ್ದವು. ಕರೊನಾ ಸೋಂಕು ಹರಡದಂತೆ ಎಲ್ಲೆಡೆ ಸಂತೆಗಳನ್ನು ನಿಷೇಧಿಸಿದ್ದರಿಂದ ಬಹುತೇಕ ಎಲ್ಲ ಬಡಾವಣೆಗಳ ರಸ್ತೆ ಇಕ್ಕೆಲಗಳಲ್ಲಿ ತರಕಾರಿ ಮಾರಾಟ ನಡೆಯುತ್ತಿತ್ತು. ಭಾನುವಾರದಂದು ತರಕಾರಿ ಮಾರಾಟವೂ ನಡೆಯಲಿಲ್ಲ. ಕೆಲವೆಡೆ ಔಷಧ ಅಂಗಡಿಗಳೂ ಮುಚ್ಚಿದ್ದವು.

    ಲಾಕ್​ಡೌನ್ ಮಧ್ಯೆಯೂ ಅನಗತ್ಯವಾಗಿ ತಿರುಗುತ್ತಿದ್ದ ಬೈಕ್ ಸವಾರರನ್ನು ಪೊಲೀಸರು ತಡೆದು ವಿಚಾರಣೆ ನಡೆಸಿದರು. ಕೇಶ್ವಾಪುರ, ಗೋಕುಲ ರಸ್ತೆ ಸೇರಿ ಕೆಲವೆಡೆ ಬೈಕ್​ಗಳನ್ನು ವಶಪಡಿಸಿಕೊಂಡರೆ, ಇನ್ನೂ ಕೆಲವೆಡೆ ಸ್ಥಳದಲ್ಲಿಯೇ ದಂಡ ವಿಧಿಸಿ ರಸ್ತೆಗೆ ಇಳಿಯದಂತೆ ಎಚ್ಚರಿಕೆ ನೀಡಿ ಕೈಬಿಟ್ಟರು.

    ಕೊಪ್ಪಿಕರ ರಸ್ತೆ, ದುರ್ಗದಬೈಲ್, ಸ್ಟೇಶನ್ ರಸ್ತೆ, ಗೋಕುಲ ರಸ್ತೆ, ಲ್ಯಾಮಿಂಗ್ಟನ್ ರಸ್ತೆ, ಕಾರವಾರ ರಸ್ತೆ, ಕುಸುಗಲ್ಲ ರಸ್ತೆ, ದೇಶಪಾಂಡೆ ನಗರ ರಸ್ತೆಗಳು ವಾಹನ ಸಂಚಾರ ಇಲ್ಲದೆ ಬಿಕೋ ಎನ್ನುತ್ತಿದ್ದವು. ಪೆಟ್ರೋಲ್ ಬಂಕ್​ಗಳು ತೆರೆದಿದ್ದರೂ ಬಂಕ್​ಗಳಿಗೆ ಬರುವ ವಾಹನಗಳ ಸಂಖ್ಯೆ ವಿರಳವಾಗಿತ್ತು.

    ಹಳೇ ಬಸ್ ನಿಲ್ದಾಣ, ಹೊಸ ಬಸ್ ನಿಲ್ದಾಣ ಹಾಗೂ ಸಿಬಿಟಿಗಳು ಸಹ ಸಾರಿಗೆ ಬಸ್ ಹಾಗೂ ಪ್ರಯಾಣಿಕರಿಲ್ಲದೆ ಭಣಗುಡುತ್ತಿದ್ದವು.

    ಚಿಟಗುಪ್ಪಿ ಆಸ್ಪತ್ರೆ ಆವರಣದಲ್ಲಿ ಗಂಟಲ ದ್ರವ ಪರೀಕ್ಷೆ ಮಾಡುವ ಸ್ಥಳದಲ್ಲಿ ಬಿದ್ದಿದ್ದ ಕೈಗವಸುಗಳು ಕೆಲ ಸಮಯ ಆತಂಕ ಮೂಡಿಸಿದವು. ನಂತರ ಆಸ್ಪತ್ರೆಯ ಸಿಬ್ಬಂದಿ ಅವುಗಳನ್ನು ತೆಗೆದು ಸುರಕ್ಷಿತ ಸ್ಥಳದಲ್ಲಿ ಹಾಕಿದರು.

    ಚಿತ್ರಗಳಿಂದ ಕರೊನಾ ಜಾಗೃತಿ :ದೇಸಾಯಿ ವೃತ್ತದ ಸೇತುವೆ ಕೆಳಗಿನ ಗೋಡೆಗಳ ಮೇಲೆ ಕಲರ್ ಮೈ ಸಿಟಿ ಸಂಸ್ಥೆಯವರು ಕರೊನಾ ಸೋಂಕು ಜಾಗೃತಿ ಬಿಂಬಿಸುವ ಹಾಗೂ ಕರೊನಾ ಸೇನಾನಿಗಳ ಚಿತ್ರ ಬಿಡಿಸುವ ಮೂಲಕ ಗಮನ ಸೆಳೆದರು. ಸೇತುವೆ ಕೆಳಗಿನ ಒಂದು ಬದಿಯ ಗೋಡೆ ಮೇಲೆ ಮಾಸ್ಕ್ ಧರಿಸಿದವರ ಹಾಗೂ ಮತ್ತೊಂದು ಬದಿಯ ಗೋಡೆಯ ಮೇಲೆ ಕರೊನಾ ಸೇನಾನಿಗಳಾದ ವೈದ್ಯರು, ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಮಾಧ್ಯಮ ಪ್ರತಿನಿಧಿಗಳ ಚಿತ್ರ ಬಿಡಿಸಿದರು.

    ದಂಡ ವಿಧಿಸಲು ಪೊಲೀಸರಲ್ಲಿ ಪೈಪೋಟಿ!: ಹುಬ್ಬಳ್ಳಿಯ ಗಣೇಶಪೇಟೆಯಲ್ಲಿ ಬೈಕ್ ವಶಪಡಿಸಿಕೊಳ್ಳಲು ಸಂಚಾರ ಠಾಣೆ ಪೊಲೀಸರು ಹಾಗೂ ಶಹರ ಠಾಣೆ ಪೊಲೀಸರಲ್ಲಿ ಪೈಪೋಟಿ ನಡೆದಂತೆ ಕಂಡುಬಂದಿತು. ಇದನ್ನು ನೋಡಿದಾಗ, ಲಾಕ್​ಡೌನ್ ಸಮಯದಲ್ಲಿಯೂ ಪೊಲೀಸರಿಗೆ ವಾಹನಗಳನ್ನು ಹಿಡಿದು ದಂಡ ವಿಧಿಸಲು ಗುರಿಯೇನಾದರೂ ನೀಡಲಾಗಿದೆಯೇ ಎಂಬ ಪ್ರಶ್ನೆ ಮೂಡುವಂತಿತ್ತು. ಅನಗತ್ಯವಾಗಿ ಸಂಚರಿಸುತ್ತಿದ್ದ ಬೈಕ್ ಸವಾರನನ್ನು ಶಹರ ಠಾಣೆ ಪೊಲೀಸ್ ತಡೆದು ವಿಚಾರಿಸುತ್ತಿದ್ದ. ಅಷ್ಟರಲ್ಲಿ ಅಲ್ಲಿಗೆ ಬಂದ ಸಂಚಾರ ಠಾಣೆ ಸಿಬ್ಬಂದಿ, ಬೈಕ್​ನ ಕೀಲಿ ತೆಗೆದುಕೊಂಡು, ದಂಡ ನೀಡುವಂತೆ ಸೂಚಿಸಿದ. ಸ್ಥಳಕ್ಕೆ ಆಗಮಿಸಿದ ಶಹರ ಠಾಣೆಯ ಹೆಡ್ ಕಾನ್​ಸ್ಟೇಬಲ್, ಬೈಕ್ ತಡೆದಿದ್ದ ಪೊಲೀಸನನ್ನು ತರಾಟೆಗೆ ತೆಗೆದುಕೊಳ್ಳುತ್ತ, ‘ಕನಿಷ್ಠ 10 ಬೈಕ್​ಗಳನ್ನು ಹಿಡಿಯಬೇಕಿದೆ. ಬೈಕ್ ಹಿಡಿದ ತಕ್ಷಣ ಅದರ ಕೀಲಿ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಸಂಚಾರ ಠಾಣೆಯವರು ಕೀಲಿ ತೆಗೆದುಕೊಂಡು ದಂಡ ವಿಧಿಸಿ ಹೋಗುತ್ತಾರೆ’ ಎಂದು ಬುದ್ಧಿ ಹೇಳಿದ್ದು ಕಂಡುಬಂದಿತು.

    ವಿದ್ಯಾನಗರಿ ಖಾಲಿ ಖಾಲಿ

    ಧಾರವಾಡ: ಕರೊನಾ ಸೋಂಕು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಘೊಷಣೆ ಮಾಡಿರುವ ಸಂಡೇ ಲಾಕ್​ಡೌನ್​ಗೆ ನಗರ ಸಂಪೂರ್ಣ ಸ್ತಬ್ಧವಾಗಿತ್ತು. ವಾಹನ, ಜನ ಸಂಚಾರವಿಲ್ಲದೆ ನಗರದ ಪ್ರಮುಖ ರಸ್ತೆಗಳು, ಮಾರುಕಟ್ಟೆ ಪ್ರದೇಶ ಬಿಕೋ ಎನ್ನುತ್ತಿದ್ದವು.

    ಲಾಕ್​ಡೌನ್ ಸಡಿಲಿಕೆ ಬೆನ್ನಲ್ಲೇ ಕರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಸರ್ಕಾರ ಸಂಡೇ ಲಾಕ್​ಡೌನ್ ಘೊಷಣೆ ಮಾಡಿದ್ದು, ಇದೀಗ 2ನೇ ವಾರದ ಲಾಕ್​ಡೌನ್​ಗೂ ಜನ ಸಂಪೂರ್ಣ ಬೆಂಬಲ ನೀಡಿದ್ದಾರೆ. ಹೀಗಾಗಿ ಸದಾ ಜನರಿಂದ ಕೂಡಿರುತ್ತಿದ್ದ ನಗರವೇ ಖಾಲಿ ಖಾಲಿಯಾಗಿತ್ತು. ಆಂಬುಲೆನ್ಸ್, ಅಗತ್ಯ ವಸ್ತುಗಳ ಸರಕು ಸಾಗಣೆ ವಾಹನ ಹೊರತುಪಡಿಸಿ, ನಗರ ಸಾರಿಗೆ, ಖಾಸಗಿ ವಾಹನಗಳು ರಸ್ತೆಗೆ ಇಳಿದಿರಲಿಲ್ಲ.

    ಅಗತ್ಯ ವಸ್ತುಗಳಾದ ಹಾಲು, ಔಷಧ, ಪೆಟ್ರೋಲ್ ಬಂಕ್, ತರಕಾರಿ, ಮಾಂಸ ಮಾರಾಟಕ್ಕೆ ವಿನಾಯಿತಿ ನೀಡಲಾಗಿದೆ. ಆದರೆ ಬಹುತೇಕರು ಶನಿವಾರವೇ ಎಲ್ಲ ವಸ್ತುಗಳನ್ನು ಖರೀದಿ ಮಾಡುವ ಮೂಲಕ ಭಾನುವಾರ ಮನೆಯಲ್ಲೇ ಕಾಲ ಕಳೆದರು.

    ತಪಾಸಣೆ: ಲಾಕ್​ಡೌನ್ ಹಿನ್ನೆಲೆಯಲ್ಲಿ ಅನಗತ್ಯವಾಗಿ ಓಡಾಡುವವರ ನಿಯಂತ್ರಣಕ್ಕಾಗಿ ಪೊಲೀಸರು ಸೂಕ್ತ ಕ್ರಮ ಕೈಗೊಂಡಿದ್ದರು. ನಗರದ ಸುಭಾಷ್ ರಸ್ತೆ, ರೈಲ್ವೆ ಸ್ಟೇಶನ್ ರಸ್ತೆ, ಹು-ಧಾ ಮುಖ್ಯ ರಸ್ತೆ, ಜುಬಿಲಿ ವೃತ್ತ, ಕೋರ್ಟ್ ವೃತ್ತ ಸೇರಿ ವಿವಿಧ ಕಡೆಗಳಲ್ಲಿ ಬ್ಯಾರಿಕೇಡ್ ಅವಳವಡಿಸಿ ವಾಹನ ಸವಾರರ ತಪಾಸಣೆ ನಡೆಸಿದ್ದರು. ಅಗತ್ಯ ಕಾರ್ಯಗಳಿಗೆ ತೆರಳುತ್ತಿದ್ದರೆ ಸುಮ್ಮನೆ ಬಿಡುತ್ತಿದ್ದರು. ಸಕಾರಣವಿಲ್ಲದೆ ಓಡಾಟ ನಡೆಸಿದ್ದ ಜನರ ಬೈಕ್​ಗಳನ್ನು ಸೀಜ್ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕೆಲವೆಡೆ ಕಣ್ಣು ತಪ್ಪಿಸಿ ಹೋಗಲು ಪ್ರಯತ್ನಿಸಿದ ವಾಹನ ಸವಾರರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts