More

    ಸಂಚಾರ ವ್ಯವಸ್ಥೆಗೆ ಕಾಯಕಲ್ಪ

    ಕುಂದಾಪುರ: ಎಲ್ಲವೂ ಅಂದುಕೊಂಡಂತೆ ನಡೆದರೆ ಕೆಲವೇ ದಿನಗಳಲ್ಲಿ ನಗರದ ಸಂಚಾರ ನಿಯಮ ಪಾಲನೆ, ವಾಹನ ನಿಲುಗಡೆ ಸಂಚಾರ ಸಮಸ್ಯೆಗೆ ಮುಕ್ತಿ ಸಿಗಲಿದೆ. ಸಂಚಾರ ಸಮಸ್ಯೆ ಪರಿಹಾರಕ್ಕೆ ಪೊಲೀಸ್, ಪುರಸಭೆ ಹಾಗೂ ಉಪವಿಭಾಗಾಧಿಕಾರಿ ಸಂಯಕ್ತ ಸಭೆ ನಡೆಸಿ, ಸ್ಥಳ ಪರಿಶೀಲಿಸಿದ್ದಾರೆ. ವಾಹನ ದಟ್ಟಣೆ, ಸಂಚಾರ ಸುವ್ಯವಸ್ಥೆ ಕುರಿತು ಪರಿಹಾರಕ್ಕೆ ಕಂದಾಯ ಉಪವಿಭಾಗಾಧಿಕಾರಿ ಕೆ.ರಾಜು, ಉಪವಿಭಾಗ ಸಹಾಯಕ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಹಾಗೂ ಸಂಚಾರಿ ಠಾಣೆ ಎಸ್.ಐ ಪುಷ್ಪಾ ನಗರದ ವಿವಿಧ ಕಡೆ ಪರಿವೀಕ್ಷಣೆ, ಅವಲೋಕನ ನಡೆಸಿ, ಪಾರ್ಕಿಂಗ್ ವ್ಯವಸ್ಥೆ ಬಗ್ಗೆ ಚೆರ್ಚೆ ನಡೆಸಿದ್ದಾರೆ.
    ಸಂಚಾರ ಸುವ್ಯವಸ್ಥೆಗಾಗಿ ನಗರದ ಯಾವ ಭಾಗದಲ್ಲಿ ವಾಹನಗಳ ನಿಲುಗಡೆ, ಬಸ್ ನಿಲುಗಡೆ, ವೇಗ ನಿಯಂತ್ರಕ ಹಾಗೂ ಇತರ ಸಂಚಾರಿ ವ್ಯವಸ್ಥೆಗಳನ್ನು ಕಲ್ಪಿಸಬೇಕು ಎಂಬ ಬಗ್ಗೆ ಮಾಹಿತಿ ವಿನಿಮಯ ನಡೆಸಿದರು. ಸಂಚಾರ ವೇಳಾಪಟ್ಟಿ ಇಲ್ಲದ ಸಂದರ್ಭ ಬಸ್‌ಗಳ ದೀರ್ಘ ನಿಲುಗಡೆಗೆ ಪುರಸಭೆ ಪ್ರಸ್ತಾಪಿಸಿರುವ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ವ್ಯವಸ್ಥೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ರಸ್ತೆಗಳಲ್ಲಿ ಗುರುತು ಸೇರಿದಂತೆ ಪ್ರಸ್ತಾವಿತ ಕಾರ್ಯಗಳು ಮುಗಿದ ಬಳಿಕ ಜಿಲ್ಲಾಧಿಕಾರಿ ಅಧಿಸೂಚನೆ ಪಡೆದುಕೊಳ್ಳುವ ಕುರಿತು ಚರ್ಚಿಸಲಾಯಿತು. ದ್ವಿಚಕ್ರ ಹಾಗೂ ಚತುಃಷ್ಚಕ್ರ ವಾಹನಗಳಿಗೆ ಪಾರ್ಕಿಂಗ್ ಸ್ಥಳ ಗುರುತು, ಪಾರಿಜಾತ ಸರ್ಕಲ್‌ನಲ್ಲಿ ಬಸ್‌ಗಳ ನಿಲುಗಡೆ ವ್ಯವಸ್ಥೆ ಹಾಗೂ ಸರದಿಗೆ ಅನೂಕೂಲವಾಗುವಂತೆ ಹೆಚ್ಚು ಟ್ರಾಫಿಕ್ ಕಂಬಗಳನ್ನು ಅಳವಡಿಸಲು, ಟ್ರಿಪ್ ಇಲ್ಲದ ಸಂದರ್ಭ ಬಸ್‌ಗಳಿಗೆ ನಿಲುಗಡೆಗೆ ಪರ್ಯಾಯ ಜಾಗದ ವ್ಯವಸ್ಥೆ, ಮಕ್ಕಳಿಗೆ ರಸ್ತೆ ದಾಟಲು ಅನುಕೂಲವಾಗುವಂತೆ ಬಸ್ ನಿಲುಗಡೆ ಸಮೀಪ ಝೀಬ್ರಾ ಕ್ರಾಸಿಂಗ್ ಅಳವಡಿಸಲು ಹಾಗೂ ಎಲ್ಲ ಪಾರ್ಕಿಂಗ್ ಸ್ಥಳಗಳನ್ನು ಸ್ವಷ್ಟವಾಗಿ ಗುರುತು ಮಾಡುವ ನಿರ್ಧಾರ ತೆಗೆದುಕೊಳ್ಳಲಾಯಿತು. ಕುಂದಾಪುರ ಸಂಚಾರ ಸಮಸ್ಯೆ ಬಗ್ಗೆ ಸರಣಿ ವರದಿಗಳ ಮೂಲಕ ವಿಜಯವಾಣಿ ಎಚ್ಚರಿಸುವ ಕೆಲಸ ಮಾಡಿತ್ತು.

    ಅಪಾಯಕಾರಿ ಸ್ಥಳಗಳು: ಪಾರಿಜಾತ ಸರ್ಕಲ್ ಹಾಗೂ ಕುಂದೇಶ್ವರ ದೇವಸ್ಥಾನ ಎದುರು, ಶಾಸ್ತ್ರಿ ಪಾರ್ಕ್ ಅತ್ಯಂತ ಅಪಾಯಕಾರಿ ಸ್ಥಳಗಳಾಗಿ ಗುರುತಿಸಿಕೊಂಡಿವೆ. ಕುಂದೇಶ್ವರ ದೇವಸ್ಥಾನ ಎದುರು ಏಕಮುಖ ಸಂಚಾರವಿದ್ದರೂ ನಿಯಮ ಪಾಲನೆ ಆಗದೆ, ಅಪಘಾತಕ್ಕೆ ದಾರಿ ಮಾಡಿಕೊಡುತ್ತಿದೆ. ಪಾರಿಜಾತ ಸರ್ಕಲ್‌ನಲ್ಲಿ ವಿರುದ್ಧ ದಿಕ್ಕಿನಲ್ಲಿ ವಾಹನ ಸಂಚಾರ ಮೂಲಕ ನಿಯಮ ಉಲ್ಲಂಘಿಸಲಾಗುತ್ತದೆ. ಶಾಸ್ತ್ರಿ ಪಾರ್ಕ್‌ನಿಂದ ಬರುವ ಬಸ್‌ಗಳು ನಿಲ್ದಾಣಕ್ಕೆ ಹೋಗದೆ, ಪಾರಿಜಾತ ಸರ್ಕಲ್ ಮೂಲಕ ತಿರುಗಿ ಹೋಗುವುದು ಅಪಾಯಕ್ಕೆ ಆಹ್ವಾನ ನೀಡುತ್ತದೆ. ಇನ್ನು ಶಾಸ್ತ್ರಿ ವೃತ್ತದಲ್ಲಿ ಭಟ್ಕಳಕ್ಕೆ ಹೋಗುವ ಬಸ್‌ಗಳು ನಿಲ್ಲುವುದರಿಂದ ಸಂಚಾರ ಸಮಸ್ಯೆ ಉಂಟಾಗುತ್ತಿದೆ. ಈ ಸಮಸ್ಯೆಗಳ ಬಗ್ಗೆ ನಿಗಾ ಇಡಬೇಕು ಎನ್ನುವುದು ನಾಗರಿಕರ ಒತ್ತಾಯ.

    ನಗರದಲ್ಲಿ ಸಂಚಾರ ವ್ಯವಸ್ಥೆ ಸುಧಾರಿಸಲು ಅಧಿಕಾರಿಗಳು ಒಂದಷ್ಟು ಸುಧಾರಣಾ ಕ್ರಮಗಳನ್ನು ಕೈಗೊಳ್ಳುತ್ತಾರೆ. ಇದು ಪರಿಣಾಮಕಾರಿಯಾಗಿ ಯಶಸ್ವಿಯಾಗಲು ನಾಗರಿಕರು ಸಂಪೂರ್ಣ ಸಹಕಾರ ನೀಡಬೇಕು.
    -ಕೆ.ರಾಜು, ಉಪವಿಭಾಗಾಧಿಕಾರಿ

    ಪುರಸಭೆ, ಸಂಚಾರಿ ಠಾಣೆ, ಕುಂದಾಪುರ ಎಸಿ ಜತೆ ಸಂಚಾರ, ಟ್ರಾಫಿಕ್ ಸಮಸ್ಯೆ ಬಗ್ಗೆ ಚೆರ್ಚೆ ನಡೆಸಿದ್ದು, ಸದ್ಯದಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳ ಜತೆಯೂ ಸಭೆ ನಡೆಯಲಿದೆ. ಕುಂದಾಪುರದಲ್ಲಿ ಈಗಿರುವ ಬಸ್ ನಿಲ್ದಾಣಗಳನ್ನು ಉಳಿಸಿಕೊಳ್ಳಲಾಗುತ್ತದೆ. ಗುರುತಿಸಿದ ಜಾಗದಲ್ಲಿ ವಾಹನ ನಿಲುಗಡೆ ಮಾಡದಿದ್ದರೆ, ಸಂಚಾರಿ ನಿಯಮ ಉಲ್ಲಂಘಸಿದರೆ ದಂಡ ವಿಧಿಸಲಾಗುತ್ತದೆ. ಬಸ್ ನಿಲ್ದಾಣದಿಂದ ಹೊರಟ ಬಸ್ ರಸ್ತೆ ಬದಿಯಲ್ಲಿ ನಿಲ್ಲಿಸಿ, ಸಮಯ ಕಳೆಯುವ ಕೆಲಸ ಅಡಿದರೆ ಅದಕ್ಕೂ ದಂಡ ವಿಧಿಸಲಾಗುತ್ತದೆ. ಕುಂದಾಪುರ ಸಂಚಾರಿ ಸುಗಮಕ್ಕೆ ಸರ್ವೇ ನಡೆಸಿದ ವರದಿಗೆ ಜಿಲ್ಲಾಧಿಕಾರಿ ಅವರಿಂದ ಗ್ರೀನ್‌ಸಿಗ್ನಲ್ ಸಿಕ್ಕ ಅನಂತರ ಕುಂದಾಪುರ ಸಂಚಾರಿ ಚಿತ್ರಣ ಬದಲಾಗಲಿದೆ.
    -ಹರಿರಾಮ್ ಶಂಕರ, ಎಎಸ್‌ಪಿ ಕುಂದಾಪುರ

    ಕುಂದಾಪುರ ಸಂಚಾರಿ ಹಾಗೂ ಟ್ರಾಫಿಕ್ ಸಮಸ್ಯೆ ಪರಿಹಾರದ ನಿಟ್ಟಿನಲ್ಲಿ ಕುಂದಾಪುರ ಎಸಿ, ಎಎಸ್ಪಿ, ಸಂಚಾರಿ ಠಾಣೆ ಅಧಿಕಾರಿಗಳ ಜತೆ ದ್ವಿಚಕ್ರ, ಲಘು ಹಾಗೂ ಘನ ವಾಹನ ನಿಲುಗಡೆಗೆ ಜಾಗ ವೀಕ್ಷಣೆ ಮಾಡಿದ್ದು, ಅಂತಿಮವಾದ ನಂತರ ನಗರದ ಸಂಚಾರ ಮತ್ತು ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ಸಿಗಲಿದೆ. ಬಸ್‌ಗಳು ಹೆಚ್ಚಿನ ಸಮಯ ಬಸ್ ನಿಲ್ದಾಣದಲ್ಲಿ ನಿಂತು ಕಾಯುವ ಬದಲು ಫೆರ‌್ರಿ ರಸ್ತೆ ಪಾರ್ಕ್ ಬಳಿ ನಿಲುಗಡೆಗೆ ಅವಕಾಶ ಮಾಡಲಾಗುತ್ತದೆ. ಗುರುತಿಸಿದ ಜಾಗ ಮಾರ್ಕ್ ಮಾಡಿ, ನಾಮಫಲಕ ಹಾಕಲಾಗುತ್ತದೆ.
    -ಗೋಪಾಲಕೃಷ್ಣ ಶೆಟ್ಟಿ, ಮುಖ್ಯಾಧಿಕಾರಿ, ಪುರಸಭೆ ಕುಂದಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts